ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 30 ಡಾಕ್ಟರ್‌ ಉದಯ್ ಕುಮಾರ್ ಶೆಟ್ಟಿ: 34 ವರ್ಷಗಳಿಂದ ವೈದ್ಯಕೀಯ ಸೇವೆ

ಕಟಪಾಡಿಯ ‘ಪವಿತ್ರ ಕ್ಲಿನಿಕ್‌’ ಬಡವರ ಪಾಲಿನ ಸಂಜೀವಿನಿ; ಕೃಷಿಯಲ್ಲಿಯೂ ಪಳಗಿದ ವೈದ್ಯ
Last Updated 10 ಜೂನ್ 2021, 6:14 IST
ಅಕ್ಷರ ಗಾತ್ರ

ಶಿರ್ವ: ಕಟಪಾಡಿಯಲ್ಲಿ ಖಾಸಗಿ ವೈದ್ಯರಾಗಿರುವ ಡಾ. ಉದಯ್ ಕುಮಾರ್ ಶೆಟ್ಟಿ (ಡಾ. ಯು. ಕೆ. ಶೆಟ್ಟಿ) ಅವರು 34 ವರ್ಷಗಳಿಂದ ಬಡವರಿಗೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಬಡವರ ವೈದ್ಯರೆಂದೇ ಜನಮನ್ನಣೆ ಗಳಿಸಿದ್ದಾರೆ.

ಇದೀಗ ಕೋವಿಡ್‌ ಸಂಕಷ್ಟ ಕಾಲದಲ್ಲಿ ಬಡವರಿಗೆ ಮತ್ತು ಅಸಹಾಯಕರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೋವಿಡ್‌ ಎರಡೂ ಅಲೆಗಳ ಅವಧಿಯಲ್ಲಿ ಡಾ. ಉದಯ್ ಕುಮಾರ್ ಶೆಟ್ಟಿ ಅವರು ಉತ್ತಮ ವೈದ್ಯಕೀಯ ಸೇವೆ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಕಟಪಾಡಿಯಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ.ಉದಯಕುಮಾರ್ ಶೆಟ್ಟಿ ಅವರು ಬಿಎಎಂಎಸ್‌ ವೈದ್ಯಕೀಯ ಶಿಕ್ಷಣ ಪೂರೈಸಿದ್ದಾರೆ.
ಬಡವರಿಗೆ ಉತ್ತಮ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ₹ 10 ಶುಲ್ಕದಿಂದ ಚಿಕಿತ್ಸೆ ಆರಂಭಿಸಿದ್ದರು. ಕೋವಿಡ್‌ ಪರಿಸ್ಥಿತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ₹ 30 ಸೇವಾ ಶುಲ್ಕ ತೆಗೆದುಕೊಂಡು ಚಿಕಿತ್ಸೆ
ನೀಡುತ್ತಿದ್ದಾರೆ.

ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಡಾ.ಯು.ಕೆ.ಶೆಟ್ಟಿ ಅವರು ಊರಿನ ಜನರ ಸೇವೆಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಾರೆ. ಕಟಪಾಡಿ ಪೇಟೆಯಲ್ಲಿ ಇರುವ ‘ಪವಿತ್ರ ಕ್ಲಿನಿಕ್’ ಬಡವರ ಪಾಲಿನ ಚಿಕಿತ್ಸೆ ನೀಡುವ ಕೇಂದ್ರವಾಗಿದೆ.

ಮೂರು ದಶಕಗಳಿಂದ ಸದ್ದಿಲ್ಲದೆ ದೀನ ದಲಿತರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅದರಲ್ಲೂ ಅತೀ ಬಡ ರೋಗಿಗಳಿಗೆ, ನಿರ್ಗತಿಕರಿಗೆ ಉಚಿತ ಚಿಕಿತ್ಸೆ ನೀಡುವ ವೈದ್ಯ ಇವರು. ಈ ಕಾರಣಕ್ಕಾಗಿಯೇ ಡಾ. ಉದಯ್ ಕುಮಾರ್ ಶೆಟ್ಟಿ ಅವರನ್ನು ಬಡವರ ಪಾಲಿನ ಆಶಾಕಿರಣ ಎಂದು ಎಲ್ಲರೂ ಕರೆಯುತ್ತಾರೆ. ಡಾ.ಯು.ಕೆ.ಶೆಟ್ಟಿ ಅವರು ಮಾಡಿದ ಸೇವೆಯ ಬಗ್ಗೆ ಯಾವುದೇ ಪ್ರಚಾರವಿಲ್ಲದೆ ಆರೋಗ್ಯ ಸೇವೆ ನೀಡುವ ಕಾಯಕ ಮಾಡುತ್ತಿದ್ದಾರೆ. ಪವಿತ್ರ ಕ್ಲಿನಿಕ್‍ ಕಟಪಾಡಿ ಸುತ್ತಮುತ್ತಲಿನ ಜನರಿಗೆ ವೈದ್ಯಕೀಯ ಸೇವೆ ನೀಡುವ ಆರೋಗ್ಯ ಕೇಂದ್ರವಾಗಿ ಪರಿಣಮಿಸಿದೆ.

ಡಾ.ಯು.ಕೆ.ಶೆಟ್ಟಿ ಅವರು ತಮ್ಮ ವೈದ್ಯಕೀಯ ವೃತ್ತಿ ಜತೆಗೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಲ್ಲಿಯೂ ಬ್ಯುಸಿ. ಬಿಡುವಿನ ವೇಳೆಯಲ್ಲಿ ಮಾತ್ರವಲ್ಲದೆ ಕೋವಿಡ್‌ ಲಾಕ್‍ಡೌನ್ ಅವಧಿಯಲ್ಲಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃಷಿ, ತೋಟಗಾರಿಕೆ, ಸಾವಯವ ಗೊಬ್ಬರ ತಯಾರಿಕೆ, ಲಾಕ್‍ಡೌನ್ ಅವಧಿಯಲ್ಲಿ ವಿವಿಧ ತರಕಾರಿ, ಹೂ ಹಣ್ಣುಗಳನ್ನು ಬೆಳೆಸುವಲ್ಲಿ ನಿರತರಾಗಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದ ಇವರ ವೈದ್ಯಕೀಯ ಸೇವಾ ಜೀವನ ಹಾಗೂ ಕೃಷಿ ಬದುಕು ಇತರರಿಗೆ ಮಾದರಿ.

ಹಣಕ್ಕಾಗಿ ವೈದ್ಯಕೀಯ ಸೇವೆ ಮಾಡುತ್ತಿಲ್ಲ. 34 ವರ್ಷದಿಂದ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಇಂತಹ ಸೇವೆ ಜೀವನದಲ್ಲಿ ತೃಪ್ತಿ ನೀಡಿದೆ. ಜೇಸಿಐ, ರೋಟರಿಯಂತಹ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದೇನೆ. ಸೇವೆ
ಮಾಡಲು ಸ್ಫೂರ್ತಿ ಸಿಕ್ಕಿದೆ ಎಂದುಡಾ. ಉದಯ್ ಕುಮಾರ್ ಶೆಟ್ಟಿ ಹೇಳಿದರು.

‘ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು’

ಬಡವರು ಹಣವಿಲ್ಲ ಎಂಬ ಕಾರಣದಿಂದ ವೈದ್ಯಕೀಯ ಸೇವೆಯಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ₹30 ಸೇವಾ ಶುಲ್ಕ ಪಡೆದು ರೋಗಿಗಳ ತಪಾಸಣೆ ಮಾಡುತ್ತಿರುವೆ. ಕೋವಿಡ್‌ ಎರಡೂ ಅಲೆಯ ವೇಳೆ ಜನರಿಗೆ ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಬಹುಪಾಲು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಕೂಡ ಬಡವರಿಗೆ ಆರ್ಥಿಕ ಹೊರೆಯಾಗದ ರೀತಿಯಲ್ಲಿ ವೈದ್ಯಕೀಯ ಸೇವೆ ನೀಡಲು ಬದ್ಧ ಎನ್ನುತ್ತಾರೆ ಡಾ.ಯು.ಕೆ.ಶೆಟ್ಟಿ ಕಟಪಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT