ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಬಿ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡುವಂತೆ ವರದಿ ನೀಡಲಾಗಿದೆ: ಜಯಪ್ರಕಾಶ್ ಹೆಗ್ಡೆ

Published 1 ಜುಲೈ 2023, 14:02 IST
Last Updated 1 ಜುಲೈ 2023, 14:02 IST
ಅಕ್ಷರ ಗಾತ್ರ

ಕುಂದಾಪುರ: ‘ಈ ಹಿಂದೆ ಕುಡುಬಿ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವರದಿ ನೀಡಲಾಗಿತ್ತು. ಆಗಿನ ಸಚಿವರು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಅನುಕೂಲವಾಗುವಂತೆ ಅಧ್ಯಯನ ಮಾಡಿ ವರದಿ ಮಾಡುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ನೀಡಲಾಗಿದ್ದ ವರದಿಯೂ ಮುಂದೆ ಹೋಗಿಲ್ಲ. ಹಿಂದುಳಿದ ವರ್ಗದ ಶಾಶ್ವತ ಆಯೋಗದ ವ್ಯಾಪ್ತಿಯಲ್ಲಿ ಒಂದು ಅವಕಾಶವಿದ್ದು, ಡಿ ನೋಟಿಫೈಡ್ ಟ್ರೈಬ್‍ಗೆ ಸೇರಿಸಿ ಸರ್ಕಾರಕ್ಕೆ ವರದಿ ನೀಡಿದ್ದೇನೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕುಡುಬಿ ಜನಾಂಗವನ್ನು ಅಲೆಮಾರಿಗೆ ಸೇರಿಸಿದರೆ ಮುಂದೆ ಎಸ್‌ಟಿ ವರ್ಗಕ್ಕೆ ಸೇರಿಸುವುದಕ್ಕೆ ಸುಲಭ ಆಗುವ ಹಿನ್ನೆಲೆಯಲ್ಲಿ, ಸರ್ಕಾರಕ್ಕೆ ಕಾಡುಗೊಲ್ಲ ಹಾಗೂ ಇನ್ನಿತರ ಜಾತಿಗಳನ್ನು ಸೇರಿಸಿ ಅಲೆಮಾರಿ ವರ್ಗಕ್ಕೆ ಸೇರಿಸಲು ವರದಿ ನೀಡಲಾಗಿದೆ. 34 ಜಾತಿಗೆ ಸಂಬಂಧಿಸಿ ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ 6-8 ಸಾವಿರದಷ್ಟು ಜಾತಿ ಯಾವುದೆಂದು ಗೊತ್ತಿಲ್ಲದ ಅನಾಥ ಮಕ್ಕಳಿದ್ದಾರೆ. ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆಯದೆ ಇದ್ದಲ್ಲಿ ಭವಿಷ್ಯದಲ್ಲಿ ಅವರಿಗೆ ಮೀಸಲಾತಿ ಪಡೆದುಕೊಳ್ಳುವ ಅರ್ಹತೆಯೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಹೆತ್ತವರಿಂದ ಅನಾಥರಾಗಿರುವ ಮಕ್ಕಳಿಗೆ ಶೇ 1ರಷ್ಟು ಮೀಸಲಾತಿ ನೀಡಬೇಕು. ಒಂದು ವೇಳೆ ಮೀಸಲು ಭರ್ತಿಯಾಗದೆ ಇದ್ದಲ್ಲಿ ನಿಯಮಾಳಿಯಂತೆ ಬೇರೆಯವರನ್ನು ಭರ್ತಿ ಮಾಡಿಕೊಳ್ಳಲು ಸಲಹೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕುಂದಾಪುರದ ಹೃದಯ ಭಾಗವಾಗಿರುವ ಶಾಸ್ತ್ರಿ ಸರ್ಕಲ್‌ನ ಕೆಳಭಾಗದಲ್ಲಿನ ಜಾಗವನ್ನು ಸುಂದರ ಕುಂದಾಪುರದ ಕಲ್ಪನೆಯಂತೆ ವಿನ್ಯಾಸಗೊಳಿಸಲು, ಫ್ಲೈಓವರ್ ಕೆಳಭಾಗದಲ್ಲಿ ಇಂಟರ್‌ಲಾಕ್ ಅಳವಡಿಸಲು, ಬಣ್ಣ ಬಳಿಯಲು ಅನುಮತಿ ಕೊಡುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಲ್ಲದೆ ಅಧಿಕಾರಿಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಅನುಮತಿ ನೀಡುವಂತೆ ಲೋಕೋಪಯೋಗಿ ಇಲಾಖೆಗೂ ಮನವಿ ಮಾಡಿಕೊಂಡಿದ್ದು ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುವುದಾಗಿ ತಿಳಿಸಿದ್ದೇನೆ. ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭಿಸಲಾಗುವುದು’ ಎಂದರು.

‘ಬೆಂಗಳೂರಿನಲ್ಲಿ ಜುಲೈ 23ರಂದು ನಡೆಯುವ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹ್ವಾನಿಸಿ, ಪೂರ್ಣ ಪ್ರಮಾಣದ ಕುಂದಗನ್ನಡ ಅಧ್ಯಯನ ಪೀಠ ಸ್ಥಾಪನೆಯ ಕುರಿತು ಗಮನ ಸೆಳೆಯಲಾಗುವುದು. ಅಧ್ಯಯನ ಪೀಠಕ್ಕೆ ಸರ್ಕಾರದ ಅನುದಾನದ ಅವಶ್ಯಕತೆ ಇದ್ದು, ಅಪೂರ್ವ ಕುಂದಗನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಪೀಠ ಸ್ಥಾಪನೆಗೆ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದೇನೆ’ ಎಂದು ಜೆ.ಪಿ.ಹೆಗ್ಡೆ ತಿಳಿಸಿದರು.

ಹೆಸರು ಚರ್ಚೆಯಲ್ಲಿರುವುದೇ ವಿಶೇಷ!

ರಾಜಕೀಯ ಜೀವನದ ಹೊರತಾಗಿಯೂ ವೈಯಕ್ತಿಕ ಜೀವನ ಇದೆ. ಮುಖ್ಯಮಂತ್ರಿ ಸೇರಿ ಅನೇಕ ಸಚಿವರು ನಾನು ಒಟ್ಟಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಅವರ ಭೇಟಿಯ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಸದ್ಯ ನಾನು ರಾಜಕೀಯದಲ್ಲಿ ಇಲ್ಲ. ಮುಂದೇನಾಗುತ್ತದೆಯೋ ಗೊತ್ತಿಲ್ಲ. ನ. 26ವರೆಗೆ ನಮ್ಮ ಆಯೋಗದ ಅಧಿಕಾರವಧಿ ಇದೆ. ಅವಧಿ ಮುಗಿಯುವವರೆಗೂ ನಾನು ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ. ಆದರೂ ಸಾರ್ವಜನಿಕವಾಗಿ ತೀವ್ರ ಚರ್ಚೆಯಲ್ಲಿದ್ದೇನೆ. ಚರ್ಚೆಯಲ್ಲಿರುವುದೇ ಒಂದು ವಿಶೇಷ ಎಂದು ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT