ಬುಧವಾರ, ಏಪ್ರಿಲ್ 1, 2020
19 °C
ಭತ್ತದ ತೆನೆಗಳಿಂದ ಸಿಂಗಾರಗೊಂಡ ಮಠ; ಗೋಡೆಯ ಮೇಲೆ ರಂಗೋಲಿ ಕಲೆಯ ಅನಾವರಣ

ಪರ್ಯಾಯ: ಕೃಷಿ, ದೇಸಿ ಸಂಸ್ಕೃತಿಗೆ ಒತ್ತು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅದಮಾರು ಮಠದ ಪರ್ಯಾಯದಲ್ಲಿ ಕೃಷಿ ಪ್ರಧಾನ ಹಾಗೂ ದೇಸಿ ಸಂಸ್ಕೃತಿಗೆ ಒತ್ತು ನೀಡಲಾಗಿದೆ. ರೈತರು ಬೆಳೆದ ಉತ್ಪನ್ನವನ್ನು ನೇರವಾಗಿ ಖರೀದಿಸಿ, ಮಧ್ಯವರ್ತಿಗಳ ಹಾವಳಿ ತಡೆಗೆ ನಿರ್ಧರಿಸಲಾಗಿದೆ. ಜತೆಗೆ ನೇಕಾರರಿಂದ ಮಗ್ಗದ ಶಾಲುಗಳನ್ನು ಖರೀದಿಸಿ ನೇಕಾರ ವೃತ್ತಿಗೆ ಜೀವತುಂಬುವ ಕೆಲಸ ನಡೆದಿದೆ.

ನೇಕಾರಿಕೆ ಉಳಿವಿಗೆ ಯತ್ನ: ಹಿಂದೆ, ಉಡುಪಿ ಜಿಲ್ಲೆ ಕೈಮಗ್ಗಗಳಿಗೆ ಹೆಸರುವಾಸಿಯಾಗಿತ್ತು. ಕ್ರಮೇಣ ಆಧುನಿಕತೆಯ ಭರಾಟೆಗೆ ಸಿಕ್ಕು ಹೆಚ್ಚಿನ ಮಗ್ಗಗಳು ಬಾಗಿಲು ಮುಚ್ಚಿದವು. ಅಲ್ಲೊಂದು ಇಲ್ಲೊಂದು ಉಳಿದಿರುವ ಕೈಮಗ್ಗಗಳು, ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ.

ನೇಕಾರಿಕೆ ವೃತ್ತಿಗೆ ಮರುಜೀವ ಕೊಡುವ ಉದ್ದೇಶದಿಂದ ಅದಮಾರು ಶ್ರೀಗಳು ಮಗ್ಗದಿಂದ ತಯಾರಾದ ಶಾಲುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಈ ಸಂಬಂಧ ಕಿನ್ನಿಗೋಳಿಯಲ್ಲಿರುವ ಕೈಮಗ್ಗ ತಯಾರ
ಕರಿಗೆ ಶಾಲುಗಳನ್ನು ಪೂರೈಸುವಂತೆ ಸೂಚನೆಯನ್ನೂ ನೀಡಿದ್ದಾರೆ.

ಅದಮಾರು ಪರ್ಯಾಯದ ಅವಧಿಯಲ್ಲಿ ಮಠಕ್ಕೆ ಬರುವ ಗಣ್ಯರಿಗೆ ಹಾಗೂ ಭಕ್ತರಿಗೆ ಮಗ್ಗದ ಶಾಲುಗಳನ್ನು ನೀಡುವ ಮೂಲಕ ನೇಕಾರಿಕೆ ವೃತ್ತಿಯನ್ನು ಉಳಿಸಿ ಬೆಳೆಸುವ ಕೈಂಕರ್ಯಕ್ಕೆ ಶ್ರೀಗಳು ಸಂಕಲ್ಪ ಮಾಡಿದ್ದಾರೆ. 

ಕೃಷಿ ಸಂಸ್ಕೃತಿಗೆ ಒತ್ತು: ಪರ್ಯಾಯ ಅವಧಿಯಲ್ಲಿ ಮಠಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಮಧ್ಯವರ್ತಿಗಳಿಂದ ಖರೀದಿಸದೆ ರೈತರಿಂದ ನೇರವಾಗಿ ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದ ಮಠ ಹಾಗೂ ರೈತರ ನಡುವೆ ಬಾಂಧವ್ಯ ಬೆಳೆಯುವುದರ ಜತೆಗೆ, ರೈತರಿಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬುದು ಶ್ರೀಗಳ ಲೆಕ್ಕಾಚಾರ.

ಸಾವಯವ ಕೃಷಿಗೆ ಒತ್ತು: ಮಠದ ಅನ್ನಪ್ರಸಾದಕ್ಕೆ ಸಾವಯವ ಆಹಾರ ಪದಾರ್ಥಗಳನ್ನು ನೀಡುವಂತೆ ಪರ್ಯಾಯಕ್ಕೂ ಮುನ್ನವೇ ಶ್ರೀಗಳು ಭಕ್ತರಿಗೆ ಸಲಹೆ ನೀಡಿದ್ದರು. ಅದರಂತೆ, ಅದಮಾರು ಗ್ರಾಮದ ಹಲವು ರೈತರು ಸಾವಯವ ಕೃಷಿ ಮಾಡಿದ್ದಾರೆ. ಕಾರ್ಕಳದಲ್ಲಿ ಸಾವಯವ ಬಳಗ ರಚನೆಯಾಗಿದ್ದು, 12 ಕ್ವಿಂಟಲ್‌ ಸಾವಯವ ಅಕ್ಕಿಯನ್ನು ಮಠಕ್ಕೆ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಲ್ಲದೆ, ಸಾವಯವ ತರಕಾರಿಗಳು ಈ ಬಾರಿ ಯಥೇಚ್ಛವಾಗಿ ಹೊರೆಕಾಣಿಕೆ ರೂಪದಲ್ಲಿ ಮಠಕ್ಕೆ ಹರಿದು ಬರುತ್ತಿದೆ.‌

ಭತ್ತದ ತೆನೆಯ ಸಿಂಗಾರ: ಈ ಬಾರಿಯ ಪರ್ಯಾಯದಲ್ಲಿ ಕೃಷಿ ಸಂಸ್ಕತಿ ಅನಾವರಣಕ್ಕೆ ಒತ್ತುನೀಡಲಾಗಿದೆ. ಮಠಕ್ಕೆ ಮಾವು ಹಾಗೂ ಹೂ ತೋರಣದ ಬದಲು ಭತ್ತದ ತೆನೆಗಳ ತೋರಣ ಕಟ್ಟಲಾಗಿದೆ. ಇದಕ್ಕಾಗಿ ಭಟ್ಕಳದಿಂದ ಭತ್ತದ ತೆನೆಗಳನ್ನು ಖರೀದಿಸಲಾಗಿದ್ದು, ಕಲಾವಿದ ಪುರುಷೋತ್ತಮ್ ಅಡ್ವೆ ಅವರ ನೇತೃತ್ವದಲ್ಲಿ ತೆನೆಗಳಿಂದ ಕಲಾಕೃತಿಗಳನ್ನು ತಯಾರಿಸಿ ಮಠದ ಮುಂಭಾಗ ಹಾಗೂ ಒಳಾವರಣವನ್ನು ಸಿಂಗರಿಸಲಾಗಿದೆ.

ಭತ್ತದ ತೆನೆಯ ಗೂಡು ದೀಪ, ಹೂಗುಚ್ಛ ಹಾಗೂ ಉದ್ದನೆಯ ತೋರಣ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ. ಹೂ ಹಾಗೂ ಮಾವಿನ ತೋರಣ ಕಟ್ಟಿದರೆ ಒಂದೆರಡು ದಿನಗಳಲ್ಲಿ ಬಾಡಿಹೋಗುತ್ತದೆ. ಭತ್ತದ ತೆನೆಗಳು ಬೇಗ ಹಾಳಾಗುವುದಿಲ್ಲ. ಪರ್ಯಾಯ ಮಹೋತ್ಸವ ಮುಗಿಯುವವರೆಗೂ ಮಠಕ್ಕೆ ಅಲಂಕಾರ ಮಾಡಿದಂತಿರುತ್ತದೆ. 

ಭತ್ತದ ತೆನೆಗಳು ಮಠದ ಸೌಂದರ್ಯವನ್ನು ಹೆಚ್ಚಿಸುವುದರ ಜತೆಗೆ ಪಕ್ಷಿಗಳಿಗೂ ಆಹಾರವಾಗಲಿದೆ. ಕೃಷಿ ಸಂಸ್ಕೃತಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂಬ ಅದಮಾರು ಶ್ರೀಗಳ ಸಲಹೆ ಸೂಚನೆಯಂತೆ ನಡೆದುಕೊಳ್ಳಲಾಗಿದೆ ಎಂದು ಕಲಾವಿದ ಪುರುಷೋತ್ತಮ ಅಡ್ವೆ ಹೇಳಿದರು.

ಪರ್ಯಾಯಕ್ಕೆ ನಾಡಿನ ಮೂಲೆಮೂಲೆಗಳಿಂದ ಸಾವಿರಾರು ಭಕ್ತರು ಬರಲಿದ್ದು, ಭತ್ತದ ತೆನೆಯ ತೋರಣಕ್ಕೆ ಬೇಡಿಕೆ ಹೆಚ್ಚಾಗುವ ವಿಶ್ವಾಸವಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ. ಜತೆಗೆ ಪ್ಲಾಸ್ಟಿಕ್‌ ಅಲಂಕಾರಿಕ ವಸ್ತುಗಳ ಬಳಕೆಗೆ ಕಡಿವಾಣ ಬಿದ್ದು, ಕೃಷಿ ಪ್ರಧಾನ ಸಂಸ್ಕೃತಿ ಮುನ್ನಲೆಗೆ ಬರಲು ಸಹಾಯವಾಗುತ್ತದೆ ಎನ್ನುತ್ತಾರೆ ಅವರು.

ಗ್ರಾಮೀಣ ಸೊಗಡು: ಅದಮಾರು ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಮಠದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶ್ರೀಗಳು ಎಚ್ಚರವಹಿಸಿ ನವೀಕರಣ ಮಾಡಿಸಿದ್ದಾರೆ. ಮಠದ ಮಣ್ಣಿನ ಗೋಡೆಗಳಿಗೆ ಕಾಂಕ್ರೀಟ್‌ ಬದಲು ಬೆಲ್ಲ ಹಾಗೂ ಮಣ್ಣನ್ನು ಬಳಸಿ ಪ್ಲಾಸ್ಟಿಂಗ್ ಮಾಡಲಾಗಿದೆ. ಜತೆಗೆ, ಗೋಡೆಯ ಮೇಲೆ ಸುಂದರ ರಂಗೋಲಿ ಕಲೆ ಚಿತ್ರಿಸಿ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಲಾಗಿದೆ.

ಮಠದ ಸಾಗುವಾನಿ ತೊಲೆಗಳಿಗೆ ವಾರ್ನಿಷ್‌ ಹಾಕಿ, ಅಂದ ಹೆಚ್ಚಿಸಲಾಗಿದೆ. ಅಗತ್ಯವಿದ್ದ ಕಡೆಗಳಲ್ಲಿ ದುರಸ್ತಿ ಮಾಡಿ, ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)