ಸೋಮವಾರ, ಜುಲೈ 4, 2022
24 °C
ತರಕಾರಿ ಸಸಿಗಳ ನಾಟಿಗೆ ಏರುಮಡಿಗಿಂತ ಉತ್ತಮ ಪದ್ಧತಿ

ಉಡುಪಿ | ಪ್ಲಾಸ್ಟಿಕ್‌ ತಟ್ಟೆ ಬಳಕೆ: ಗುಣಮಟ್ಟದ ಸಸಿಗಳ ತಯಾರಿಕೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೃಷಿಯಲ್ಲಿ ದವಸ ಧಾನ್ಯಗಳನ್ನು ಬೆಳೆಯುವಷ್ಟೆ ಮಹತ್ವ ತೋಟಗಾರಿಕೆಯಲ್ಲಿ ಹಣ್ಣು ತರಕಾರಿ ಬೆಳೆಯಲು ಇದೆ. ತರಕಾರಿ ನಿತ್ಯದ ಜೀವನದ ಭಾಗವೇ ಆಗಿಹೋಗಿದೆ. ಆದರೆ, ಗುಣಮಟ್ಟದ ಬೀಜಗಳ ಅಲಭ್ಯತೆ, ಸೂಕ್ತ ಸ್ಥಳದ ಕೊರತೆ, ವ್ಯತಿರಿಕ್ತ ಹವಾಗುಣ, ಮಾರುಕಟ್ಟೆಯ ಅಲಭ್ಯತೆಯಿಂದಾಗಿ ಪ್ರಸ್ತುತ ತರಕಾರಿ ಬೆಳೆಯುವುದು ರೈತರ ಪಾಲಿಗೆ ದುಸ್ತರ ಎನಿಸಿದೆ.

ಇಂತಹ ಹಲವು ಸಮಸ್ಯೆಗಳ ನಡುವೆಯೂ ತರಕಾರಿ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೆ ರೈತರು ಆರ್ಥಿಕವಾಗಿ ಸಬಲರಾಗಬಹುದು ಎನ್ನುತ್ತಾರೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಎಚ್‌.ಎಸ್‌.ಚೈತನ್ಯ.

ತರಕಾರಿ ಬೆಳೆಯಲು ಮುಖ್ಯವಾಗಿ ಗುಣಮಟ್ಟದ ಬೀಜ ಹಾಗೂ ಸಸಿಗಳ ಆಯ್ಕೆ ಮುಖ್ಯ. ಸಂಕರಣ ಜಾತಿಯ ತಳಿಗಳನ್ನು ಬಳಸುವುದು ಸೂಕ್ತ.  ಇದರಿಂದ ಹೆಚ್ಚು ಇಳುವರಿ ಪಡೆಯುವುದರ ಜತೆಗೆ ಲಾಭವನ್ನೂ ನೋಡಬಹುದು. ಸಂಕರಣ ಜಾತಿಯ ಬೀಜಗಳನ್ನು ಬಿತ್ತನೆಮಾಡುವಾಗ ಜಾಗರೂಕತೆ ಅವಶ್ಯ. ಉಳಿದ ಬೆಳೆಗಳ ಬೇಸಾಯದಂತೆ ಭೂಮಿಗೆ ನೇರವಾಗಿ ಬಿತ್ತನೆ ಮಾಡದೆ ಸಸಿಗಳನ್ನು ಸಿದ್ಧಪಡಿಸಿಕೊಂಡು ನಾಟಿಮಾಡಬೇಕು. ಭೂಮಿಗೆ ಬೀಜಗಳನ್ನು ನೇರವಾಗಿ ಬಿತ್ತಿದರೆ ಸರಿಯಾದ ನೀರು, ಬೆಳಕು, ಪೋಶಕಾಂಶ ಸಿಗದೆ ಬೀಜ ಸಾಯುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ, ತರಕಾರಿ ಸಸಿಗಳನ್ನು ಜಾಗರೂಕತೆಯಿಂದ ಬೆಳೆಯಬೇಕು ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ತರಕಾರಿ ಸಸಿಗಳನ್ನು ಏರುಮಡಿಯಲ್ಲಿ ಬೆಳೆಸಲಾಗುತ್ತದೆ. ಈ ಪದ್ಧತಿಯಲ್ಲಿ ಸರಿಯಾದ ನಿರ್ವಹಣೆ ಇರದಿದ್ದರೆ ಸಸಿಗಳು ಬೆಳೆಯುವುದಿಲ್ಲ. ನೀರಿನ ಕೊರತೆ, ರೋಗಗಳ ಹಾವಳಿಯಿಂದ ಸಸಿಗಳು ಸಾಯುವ ಪ್ರಮಾಣ ಹೆಚ್ಚು. ಬೀಜಗಳು ಮೊಳಕೆಯೊಡೆಯುವ ಸಮಯದಲ್ಲಿ ಸರಿಯಾದ ನೀರು ದೊರೆಯದಿದ್ದರೂ ಮುರುಟಿ ಸಾಯುತ್ತವೆ.

ಈ ಸಮಸ್ಯೆಗೆ ಪರಿಹಾರವಾಗಿ ರೈತರು ಪ್ಲಾಸ್ಟಿಕ್ ಕಪ್‌ ಟ್ರೇ ಮೂಲಕ ಉತ್ತಮ ಹಾಗೂ ಗುಣಮಟ್ಟದ ಸಸಿಗಳನ್ನು ಉತ್ಪಾದನೆ ಮಾಡಬಹುದು. ಕೃಷಿಯಲ್ಲಿ ಲಾಭವನ್ನೂ ಮಾಡಬಹುದು. ಮಾರುಕಟ್ಟೆಯಲ್ಲಿ 24, 48, 96 ಕಪ್‌ಗಳ ಪ್ಲಾಸ್ಟಿಕ್ ತಟ್ಟೆಗಳು ದೊರೆಯುತ್ತವೆ. ಈ ತಟ್ಟೆಗಳಲ್ಲಿ ತರಕಾರಿ ಸಸಿಗಳನ್ನು ಬೆಳೆಯುವುದು ಏರುಮಡಿ ಪದ್ದತಿಗಿಂತ ಸೂಕ್ತ. ಇಲ್ಲಿ ಸಂಕರಣ ಜಾತೀಯ ಬೀಜಗಳು ಉತ್ತಮವಾಗಿ ಮೊಳಕೆಯೊಡೆದು ಸದೃಢ ಸಸಿಗಳಾಗಿ ತಯಾರಾಗುತ್ತವೆ ಎನ್ನುತ್ತಾರೆ ಡಾ.ಚೈತನ್ಯ.

ಸಸಿಗಳ ತಯಾರಿಕೆ ಹೇಗೆ:

ಪ್ಲಾಸ್ಟಿಕ್‌ ತಟ್ಟೆಯಲ್ಲಿರುವ ಕಪ್‌ಗಳಲ್ಲಿ ಹಸಿಯಾದ ತೆಂಗಿನ ನಾರಿನ ಹುಡಿ ಹರಡಬೇಕು. ಪ್ರತಿ ಕಪ್‍ನಲ್ಲಿ 1 ಅಥವಾ 2 ಬೀಜಗಳನ್ನು ಆಳದಲ್ಲಿ ಬಿತ್ತನೆ ಮಾಡಿ ಹುಡಿಯಿಂದ ಮುಚ್ಚಬೇಕು. ಹುಡಿಯಲ್ಲಿ ತೇವಾಂಶ ಕಡಿಮೆ ಇದ್ದರೆ ತುಂತುರಿನ ಹಾಗೆ ಸ್ವಲ್ಪ ನೀರು ಹಾಕಬೇಕು.

ಬಿತ್ತನೆ ಮಾಡಿದ ಟ್ರೇಗಳನ್ನು ಒಂದರ ಮೇಲೊಂದು ಸೇರಿಸಿಟ್ಟು, 4 ರಿಂದ 6 ದಿನಗಳವರೆಗೆ ಪ್ಲಾಸ್ಟಿಕ್ ಹಾಳೆ ಹೊದಿಸಬೇಕು. ಹೀಗೆ ಮಾಡುವುದರಿಂದ ಟ್ರೇಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಸಾಕಷ್ಟು ಉಷ್ಣಾಂಶ ದೊರೆಯುತ್ತದೆ. 6ನೇ ದಿನಕ್ಕೆ ಮೊಳಕೆಯೊಡೆದು ಸಸಿಗಳು ಹೊರ ಬರುತ್ತವೆ.

ಬಳಿಕ ನೆರಳಲ್ಲಿ ಸಸಿಗಳನ್ನು ಬೆಳೆಯಲು ಇಡಬೇಕು. ನೆರಳಿನ ಪರದೆಯ ಅಡಿಯಲ್ಲಿ ಬೆಳೆಸಿದರೆ ಕೀಟಗಳು ಬಾಧೆಯಿಂದಲೂ ಮುಕ್ತಿ ಪಡೆಯಬಹುದು. ಪ್ರತಿದಿನ ಸ್ವಲ್ಪ ನೀರು ಹಾಕುತ್ತಾ ಬಂದರೆ ಮೂರು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಸಸಿಗಳು ಬೆಳೆದ ನಂತರ ನಾಟಿಯ ದಿನ ಕಾಂಡವನ್ನು ಹಿಡಿದು ಮೇಲೆತ್ತಿದರೆ ಸಸಿಗಳು ತೆಂಗಿನ ನಾರಿನ ಹುಡಿ ಸಹಿತ ಬೇರಿನೊಂದಿಗೆ ಹೊರಬರುತ್ತವೆ. ಬೇರುಗಳಿಗೆ ಹಾನಿಯಾಗದಂತೆ ಹುಡಿಯನ್ನು ಬೇರ್ಪಡಿಸುವ ಮೂಲಕ ಕಡಿಮೆ ಸಮಯದಲ್ಲಿ ಗುಣಮಟ್ಟದ ತರಕಾರಿ ಸಸಿಗಳನ್ನು ಪಡೆಯಬಹುದು.

ನಿರ್ವಹಣಾ ಕ್ರಮಗಳು ಏನು:

ಪ್ಲಾಸ್ಟಿಕ್ ತಟ್ಟೆಗಳಲ್ಲಿ ತೆಂಗಿನ ನಾರಿನ ಹುಡಿಯನ್ನು ಟೊಳ್ಳಾಗಿ ತುಂಬಬಾರದು. ನೀರನ್ನು ಅತಿಯಾಗಿಯೂ ಹಾಕಬಾರದು. ಹುಡಿ ಒಣಗಿದ್ದರೆ ಮಾತ್ರ ನೀರು ಹಾಕಬೇಕು. ಹುಡಿ ಕಂದು ಬಣ್ಣದ್ದಾಗಿದ್ದರೆ ಸರಿಯಾದ ಪ್ರಮಾಣದಲ್ಲಿ ನೀರು ಇದೆ ಎಂದರ್ಥ, ಕಪ್ಪು ಬಣ್ಣಕ್ಕೆ ತಿರುಗಿದ್ದರೆ ನೀರು ಹೆಚ್ಚಾಗಿದೆ ಎಂದರ್ಥ.

ತಟ್ಟೆಗಳ ಕೆಳಗೆ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಇದರಿಂದ ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಬಹುದು. ನೆರಳಿನ ವ್ಯವಸ್ಥೆ ಸಸಿ ಬೆಳೆಸಲು ಸೂಕ್ತ. ತೆಂಗಿನ ಗರಿಗಳು ಲಭ್ಯವಿದ್ದರೆ ಅವುಗಳಿಂದಲೂ ನೆರಳಿನ ಹಂದರ ಮಾಡಿಕೊಳ್ಳಬಹುದು. ಹೀಗೆ ತರಕಾರಿ ಸಸಿಗಳನ್ನು ಸಿದ್ಧಪಡಿಸಿಕೊಂಡ ಬಳಿಕ ಭೂಮಿಗೆ ನಾಟಿ ಮಾಡಬಹುದು ಎನ್ನುತ್ತಾರೆ ಡಾ.ಚೈತನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು