ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆ ಡ್ಯಾಂ ಖಾಲಿ: ಉಡುಪಿ ನಗರಕ್ಕೆ ನೀರಿನ ಬರ

ವಾರದೊಳಗೆ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಉಲ್ಭಣ
Last Updated 6 ಮೇ 2019, 15:03 IST
ಅಕ್ಷರ ಗಾತ್ರ

ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರಿಯಡಕ ಸಮೀಪದ ಬಜೆ ಜಲಾಶಯ ಸಂಪೂರ್ಣ ಬತ್ತಿಹೋಗಿದ್ದು, ವಾರದೊಳಗೆ ಮಳೆ ಆರಂಭವಾಗದಿದ್ದರೆ ನೀರಿನ ಅಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ನಗರದ ಜನತೆ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ಪರಿಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಆಗುತ್ತಿರುವ ಮುನ್ಸೂಚನೆ ಸಿಕ್ಕಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಡ್ರಜಿಂಗ್‌ ಕಾರ್ಯ ಇನ್ನು ಆರಂಭವಾಗಿಲ್ಲ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ರೀತಿಯ ನೀರಿನ ಸಮಸ್ಯೆ 2017ರಲ್ಲಿ ಎದುರಾಗಿತ್ತು. ಆಗ ಮಾರ್ಚ್‌ನಲ್ಲಿ ಡ್ರಜಿಂಗ್ ಕೈಗೆತ್ತಿಕೊಳ್ಳಲಾಗಿತ್ತು. ಹಾಗಾಗಿ ಮಳೆ ತಡವಾಗಿ ಆರಂಭವಾದರೂ ನೀರಿನ ಸಮಸ್ಯೆಯನ್ನು ಸ್ಪಲ್ಪಮಟ್ಟಿಗೆ ಸರಿದೂಗಿಸಲಾಗಿತ್ತು. ಆದರೆ, ಈ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀರಿನ ಸಮಸ್ಯೆಯನ್ನು ಎದುರಿಸಲು ಮುಂಜಾಗೃತ ಕ್ರಮ ಕೈಗೊಂಡಿಲ್ಲ. ನೀರಿನ ಅಭಾವ ತಲೆದೋರಲು ಇದು ಕೂಡ ಪ್ರಮುಖ ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಎಲ್ಲೆಲ್ಲಿ ನೀರು ಲಭ್ಯವಿದೆ?

ಬಜೆ ಡ್ಯಾಂನಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಶಿರೂರು ರೆಸಾರ್ಟ್‌ ಬಳಿಯ ಸಾಣೆಕಲ್ಲು ಪರಿಸರದಲ್ಲಿರುವ ನೀರು ಮಾರ್ಪು ಎಂಬಲ್ಲಿ ಸಾಕಷ್ಟು ನೀರಿನ ಸಂಗ್ರಹ ಇದೆ. ಇಲ್ಲಿ ಬೃಹತ್‌ ಗುಂಡಿಗಳು ಇದ್ದು, ಏಳೆಂಟು ದಿನಗಳಿಗೆ ಬೇಕಾಗುವಷ್ಟು ನೀರು ಶೇಖರಣೆ ಇದೆ.

ಹಾಗೆಯೇ ಕಪಾಡಿಯ ಬಾಬುಲಿಗುಂಡಿ ಹಾಗೂ ಮಾಣೈ ಸೇತುವೆಯ ಬಳಿ ನೀರಿನ ಸಂಗ್ರಹ ಇದೆ. ಇಲ್ಲಿರುವ ನೀರನ್ನು ಪಂಪಿಂಗ್‌ ಮಾಡಿದರೆ ನೀರಿನ ಸಮಸ್ಯೆಗೆ ಸ್ವಲ್ಪಮಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು 2017ರಲ್ಲಿ ಡ್ರಜಿಂಗ್ ಕಾರ್ಯವನ್ನು ಮಾಡಿದ್ದ ಸ್ಥಳೀಯ ಉದ್ಯಮಿ ಸುರೇಂದ್ರ ನಾಯಕ್‌ ಸಾಣೆಕಲ್ಲು ಅಭಿಪ್ರಾಯಪಟ್ಟರು.

ಈ ಬಾರಿ ಮಾರ್ಚ್‌ ತಿಂಗಳಲ್ಲಿಯೇ ನೀರಿನ ಹರಿವು ಕಡಿಮೆ ಆಗಿತ್ತು. ಆಗಲೇ ನೀರು ಪಂಪ್‌ ಮಾಡುವ ಕಾರ್ಯ ಆರಂಭಿಸಬೇಕಿತ್ತು. ಆದರೆ, ಅದನ್ನು ಮಾಡಲಿಲ್ಲ. ಬೊಮ್ಮಾರಬೆಟ್ಟು ಹಾಗೂ ಬೆಳ್ಳರ್ಪಾಡಿ ಗ್ರಾಮದ ನಡುವೆ ಬರುವ ಭಂಡಾರಿ ಬೆಟ್ಟುವಿನಿಂದ ಬಜೆ ಡ್ಯಾಂ ವರೆಗೆ ಡ್ರಜ್ಜಿಂಗ್‌ ಮಾಡುತ್ತಾ ಹೋದರೆ ಮೂರು ವಾರಕ್ಕೆ ಬೇಕಾಗುವಷ್ಟು ನೀರು ಲಭ್ಯವಾಗುತ್ತದೆ ಎನ್ನುತ್ತಾರೆ ಅವರು.

ಶನಿವಾರ ಬೆಳಗಿನ ಜಾವ 4 ಗಂಟೆಗೆ ಕೊನೆಯದಾಗಿ ಬಜೆ ಜಲಾಶಯದಿಂದ ನಗರಕ್ಕೆ ನೀರು ಹರಿಸಲಾಗಿದೆ. ಬಳಿಕ ನೀರು ಬಿಟ್ಟಿಲ್ಲ. ಸದ್ಯ ಡ್ಯಾಂನಲ್ಲಿ 1.10 ಮೀಟರ್‌ ಮಾತ್ರ ನೀರಿನ ಸಂಗ್ರಹ ಇದ್ದು, ಪಂಪಿಂಗ್‌ ಮಾಡಲು ಸಾಧ್ಯವಿಲ್ಲ. ಕನಿಷ್ಠ 2 ಮೀಟರ್‌ ನೀರು ಏರಿಕೆಯಾಗಿ ನಿರಂತರ ಒಳಹರಿವು ಇದ್ದರೆ ಮಾತ್ರ ನಗರಕ್ಕೆ ನೀರು ಪೂರೈಕೆ ಶುರು ಮಾಡಬಹುದು ಎಂದು ಜಲಾಶಯದ ಸಿಬ್ಬಂದಿ ಆಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT