ಶಿರ್ವ: ಕೊಂಕಣಿ, ಕನ್ನಡ, ತುಳು ಭಾಷಾ ನಾಟಕ, ಚಲನಚಿತ್ರ ಕಲಾವಿದೆ, ಜಾನಪದ ಕವಯತ್ರಿ ಕುಸುಮಾ ಕಾಮತ್ ಕರ್ವಾಲು ಅವರಿಗೆ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆದ ‘ಕೊಂಕಣಿ ಮಾನ್ಯತಾ ದಿವಸ್–2024’ ಸಮಾರಂಭದಲ್ಲಿ ‘ಕೊಂಕಣಿ ಮಾನ್ಯತಾ ದಿವಸ್ ಪುರಸ್ಕಾರ್’ ಪ್ರದಾನ ಮಾಡಲಾಯಿತು.
ರಾಜಾಪುರ ಸಾರಸ್ವತ ಸೇವಾ ವೃಂದ ಬಂಟಕಲ್ಲು ವತಿಯಿಂದ ನಡೆದ ಸಮಾರಂಭವನ್ನು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಉದ್ಘಾಟಿಸಿದರು. ಅವರು ಮಾತನಾಡಿ, ಕೊಂಕಣಿ ಭಾಷಿಕರು ಒಟ್ಟು ಸೇರಿದಾಗ ಮಾತೃ ಭಾಷೆಯಲ್ಲೇ ಮಾತನಾಡುವ ಪರಿಪಾಟ ಬೆಳೆಸಿಕೊಳ್ಳಬೇಕು. ಮಕ್ಕಳಿಗೂ ಕಲಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸದಸ್ಯ ಬಿ. ಪುಂಡಲೀಕ ಮರಾಠೆ ಮಾತನಾಡಿ, ಕೊಂಕಣಿ ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡು, ಅಧಿಕೃತ ಮಾನ್ಯತೆ ಪಡೆದ ದಿನವಾದ ಆಗಸ್ಟ್ 20 ಸಮಸ್ತ ಕೊಂಕಣಿ ಭಾಷಿಕರು ಸಂಭ್ರಮಿಸುವ ದಿನ ಎಂದರು.
ರಾಜ್ಯದಲ್ಲಿ 42 ಸಮುದಾಯಗಳ ಮಾತೃಭಾಷೆ ಕೊಂಕಣಿಯಾಗಿದ್ದು, ಗೋವಾದ ರಾಜ್ಯಭಾಷೆಯಾಗಿದೆ. ಕೊಂಕಣಿ ಭಾಷಾ ಸಾಹಿತ್ಯಕ್ಕೆ ಎರಡು ಜ್ಞಾನಪೀಠ ಗೌರವ ಸಂದಿದೆ. ಕೊಂಕಣಿ ಭಾಷೆ ಉಳಿಸಿ ಬೆಳೆಸಬೇಕು. ಶಾಲೆಗಳಲ್ಲಿಯೂ ಕೊಂಕಣಿಯನ್ನು ತೃತೀಯ ಭಾಷೆಯಾಗಿ ಕಲಿಯುವ ಅವಕಾಶ ರಾಜ್ಯ ಸರ್ಕಾರ ನೀಡಿದೆ ಎಂದರು.
ಸನ್ಮಾನ ಸ್ವೀಕರಿಸಿದ ಕುಸುಮಾ ಕಾಮತ್ ಮಾತನಾಡಿದರು. ‘ಮಾತೃಭಾಷೆ ಕೊಂಕಣಿ ಉಳಿಸಿ’ ಎಂಬ ಸ್ವರಚಿತ ಗೀತೆ ಹಾಡಿದರು. ರಾಜಾಪುರ ಸಾರಸ್ವತ ಸೇವಾ ವೃಂದದ ಅಧ್ಯಕ್ಷ ಕೆ.ಆರ್.ಪಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ಸರಸ್ವತಿ ಕಾಮತ್, ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು ಪಾಲಮೆ, ದುರ್ಗಾ ಚೆಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ, ಜ್ಯೋತಿ ಶ್ರೀಪತಿ ನಾಯಕ್ ಇದ್ದರು. ನೀಲವೇಣಿ ಅರುಣ್ ಪ್ರಭು ನಿರೂಪಿಸಿದರು. ರಾಜಾಪುರ ಸಾರಸ್ವತ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.