ಬುಧವಾರ, ಅಕ್ಟೋಬರ್ 20, 2021
25 °C
ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ

‘ರಕ್ತದಾನದಿಂದ ಆರೋಗ್ಯ ಸದೃಢ, ಕ್ರಿಯಾಶೀಲತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದೇಶದಲ್ಲಿ ಪ್ರತಿ 100ರಲ್ಲಿ ಐವರಿಗೆ ರಕ್ತದ ಕೊರತೆ ಕಂಡುಬರುತ್ತಿದ್ದು, ರಕ್ತದ ಕೊರತೆ ನೀಗಲು ಯುವಜನತೆ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್ ಹೇಳಿದರು.

ಗುರುವಾರ ಮಣಿಪಾಲದ ಅನಂತ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ರಕ್ತ ನೀಡಿ ಜಗತ್ತನ್ನು ಗೆಲ್ಲಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಡೆಯುತ್ತಿದೆ. ವರ್ಷದಲ್ಲಿ 3 ಬಾರಿ ರಕ್ತದಾನ ಮಾಡುವ ಮೂಲಕ ಜೀವ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನಿಯಮಿತವಾಗಿ ರಕ್ತದಾನದಿಂದ ಆರೋಗ್ಯ ಸದೃಢವಾಗಿರುತ್ತದೆ. ಕ್ರೀಯಾಶೀಲತೆ ಇರುತ್ತದೆ, ದೇಹದ ಸಮತೋಲನ ಕಾಪಾಡಬಹುದು. ರಕ್ತದಾನದಿಂದ ಯಾವ ತೊಂದರೆಗಳು ಸಂಭವಿಸುವುದಿಲ್ಲ. ಯುವಕರು ಸ್ವಯಂಪ್ರೇರಿತವಾಗಿ ಮುಂದೆ ಬಂದು ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ರಕ್ತದಾನ ಮಾಡುವ ಮೂಲಕ ಮಾದರಿಯಾದರು. ಡಿಎಚ್‌ಒ ಡಾ. ನಾಗಭೂಷಣ್ ಉಡುಪ ಮಾತನಾಡಿ, ಜಿಲ್ಲೆಯಲ್ಲಿ 2002ರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಹಲವು  ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸಿದ್ದು, ಸಾಮಾಜಿಕ ಪ್ರಜ್ಞೆ ಮತ್ತು ಮಾನವೀಯ ಮೌಲ್ಯವನ್ನು ಹೆಚ್ಚಿಸಿವೆ ಎಮದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಣಿಪಾಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಸಹನಾ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್, ನೌಕಾದಳ ಎನ್‌ಸಿಸಿಯ ಲೆ.ಕಮಾಂಡರ್ ರಿಕಿ ಪಿರೇರಾ, ಲಯನ್ಸ್ ಕ್ಲಬ್‌ ಅಧ್ಯಕ್ಷ ಆನಂದ್ ಗಾಣಿಗ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಇದ್ದರು.
ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ. ಚಿದಾನಂದ್ ಸಂಜು ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕಿ ವಂದನಾ ಸ್ವಾಗತಿಸಿದರು. ಆಲಂದೂರು ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.