ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗರಿಗೆ ಪಡಿತರದಲ್ಲಿ ಕುಚಲಕ್ಕಿ : ಬಸವರಾಜ ಬೊಮ್ಮಾಯಿ

ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 7 ನವೆಂಬರ್ 2022, 14:13 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ರೈತರು ಬೆಳೆಯುವ ಕುಚಲಕ್ಕಿ ಭತ್ತವನ್ನು ಖರೀದಿಸಿ ಕರಾವಳಿ ಜಿಲ್ಲೆಗಳ ಬಿಪಿಎಲ್‌ ಕಾರ್ಡ್‌ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಪುವಿನಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಸಿಎಂ, ‘ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುತ್ತಿದೆ ಎಂದರು.

100 ಹೈಸ್ಪೀಡ್ ಬೋಟ್‌:

ಆಳಸಮುದ್ರ ಮೀನುಗಾರಿಕೆಗೆ ಅನುಕೂಲವಾಗುವಂತೆ ಮೀನುಗಾರರಿಗೆ ಮೊದಲ ಹಂತದಲ್ಲಿ 100 ಹೈಸ್ಪೀಡ್ ಬೋಟ್‌ಗಳನ್ನು ನೀಡಲಾಗುವುದು. ಈಗಾಗಲೇ ಫಲಾನುಭವಿಗಳ ಆಯ್ಕೆ ನಡೆದಿದ್ದು ಸರ್ಕಾರದಿಂದ ಶೇ 40 ಸಬ್ಸಿಡಿ ಸಿಗಲಿದೆ. ಮೀನುಗಾರರು ಶೇ 10ರಷ್ಟು ಬಂಡವಾಳ ಹಾಕಿದರೆ ₹ 1.5 ಕೋಟಿ ಮೌಲ್ಯದ ದೊಡ್ಡ ಹೈಸ್ಪೀಡ್ ಬೋಟ್‌ ಸಿಗಲಿದೆ ಎಂದರು.

ಸಿಆರ್‌ಝೆಡ್‌ ನಿಯಮ ಸರಳ:

‌ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿ ತೀರಗಳು ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಿಆರ್‌ಝೆಡ್‌ ನಿಯಮಾವಳಿಗಳನ್ನು ಸರಳೀಕರಣಗೊಳಿಸಿದೆ. ರಾಜ್ಯದ ಸಿಆರ್‌ಝೆಡ್ ಪ್ಲಾನ್‌ಗೂ ಅನುಮೋದನೆ ನೀಡಿದೆ. ರಾಜ್ಯದ 331 ಕಿ.ಮೀ ಕಡಲ ತೀರ ಅಭಿವೃದ್ಧಿ ಹೊಂದಲಿದೆ ಎಂದರು.

2 ಲಕ್ಷ ಕೋಟಿ ಬಂಡವಾಳ:

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನವೀಕರೀಸಬಹುದಾದ ಇಂಧನ ತಯಾರಿಕೆಗೆ ಕಂಪೆನಿಗಳು ಉತ್ಸುಕತೆ ತೋರಿದ್ದು, ಮುಂದಿನ 5 ವರ್ಷಗಳಲ್ಲಿ ಮಂಗಳೂರು, ಉಡುಪಿ, ಕಾರವಾರದಲ್ಲಿ ₹ 2 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಕರಾವಳಿ ಸಮಗ್ರವಾಗಿ ಅಭಿವೃದ್ಧಿಯಾಗಲಿದೆ.

ಡಬಲ್ ಎಂಜಿನ್‌ಗೆ ಬೆಂಬಲ ಕೊಡಿ:

ಡಬಲ್ ಎಂಜಿನ್‌ ಸರ್ಕಾರ ಎಂದರೆ ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುವುದು. ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬೆಂಬಲ ಪಡೆಯುವುದು. ರಾಜ್ಯದ ಜನರ ಡಬಲ್ ಎಂಜಿನ್ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

2 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ, ಮೀನುಗಾರರಿಗೆ 5,000 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸೀಮೆಎಣ್ಣೆ ಪ್ರಮಾಣ ಹೆಚ್ಚಿಸಲು ಕೇಂದ್ರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬರುವುದು ಸತ್ಯ:

ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ದೂರದ ಮಾತು. ಕಾಂಗ್ರೆಸ್‌ ನಾಯಕರು ಮೊದಲು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಸಾಮಾಜಿಕ ನ್ಯಾಯ ಕಾಂಗ್ರೆಸ್‌ನ ಭಾಷಣದ ಸರಕಾಗಿದೆ. ಹಿಂದುಳಿದ ವರ್ಗಗಳ ಹೊಟ್ಟೆ ತುಂಬಿಸಲು ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಮುಂದೆ ಹೋದರೆ ಹೊರತು ಅಹಿಂದವನ್ನು ಹಿಂದೆ ತಳ್ಳಿದ್ದಾರೆ. ಹಿಂದುಳಿದ ವರ್ಗ ಕಾಂಗ್ರೆಸ್‌ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಭತ್ತ ಖರೀದಿ ಕೇಂದ್ರ: ಮುಂದಿನ ವಾರ ತೀರ್ಮಾನ

ಕರಾವಳಿ ಜಿಲ್ಲೆಗಳಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವ ಕುರಿತು ಬೆಂಗಳೂರಿಗೆ ತೆರಳಿದ ಕೂಡಲೇ ಸಭೆ ನಡೆಸಿ ಮುಂದಿನ ವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

‘ಶೇ 10 ಮೀಸಲಾತಿಗೆ ಸುಪ್ರೀಂ ಅಸ್ತು’

ಸಮಾಜದಲ್ಲಿರುವ ಎಲ್ಲ ವರ್ಗದ ಬಡವರಿಗೆ ಶೇ 10 ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಮುಂದೆ ಕರ್ನಾಟದಲ್ಲೂ ಮೀಸಲಾತಿ ಇಲ್ಲದ ಬಡ ವರ್ಗದವರಿಗೆ ಶಿಕ್ಷೆ ಹಾಗೂ ಉದ್ಯೋಗದಲ್ಲಿ ಶೇ 10 ಮೀಸಲಾತಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT