ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಪಾಡಿ: ವ್ಯವಹಾರ ಜ್ಞಾನಕ್ಕಾಗಿ ಮಕ್ಕಳ ಸಂತೆ

ಒಂದು ದಿನದ ವ್ಯಾಪಾರಿಗಳಾದ ವಿದ್ಯಾರ್ಥಿಗಳು, ಗ್ರಾಹಕರಾದ ಪೋಷಕರು
Last Updated 15 ನವೆಂಬರ್ 2022, 5:03 IST
ಅಕ್ಷರ ಗಾತ್ರ

ಚಿತ್ರಪಾಡಿ (ಬ್ರಹ್ಮಾವರ): ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಚಿತ್ರಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳಲ್ಲಿ ವ್ಯವಹಾರ ಹಾಗೂ ಹಣಕಾಸಿನ ಜ್ಞಾನವನ್ನು ಹೆಚ್ಚಿಸಲು ‘ಮಕ್ಕಳ ಸಂತೆ’ಯನ್ನು ಏರ್ಪಡಿಸಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಶಾಲೆಯ ಆರನೇ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಮನೆಯಲ್ಲಿಯೇ ಬೆಳೆದ ತರಕಾರಿಗಳು, ಸೊಪ್ಪು, ತೆಂಗಿನ ಕಾಯಿ, ಮಕ್ಕಳ ಇನ್ನಿತರ ತಿಂಡಿ ತಿನಿಸುಗಳನ್ನು ಗ್ರಾಹಕರಾಗಿ ಬಂದ ಪೋಷಕರಿಗೆ ಮಾರಾಟ ಮಾಡಿ ಸಂತೆ ಮಾರುಕಟ್ಟೆಯ ಅನುಭವ ಪಡೆದರು.

‘ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು. ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಂಡರು’ ಎಂದು ಮುಖ್ಯ ಶಿಕ್ಷಕಿ ಜ್ಯೋತಿ ಹೇಳಿದರು.

‘ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಅಗತ್ಯತೆಯನ್ನು ಮನಗಂಡು ಶಾಲೆಯಲ್ಲಿ ನವನವೀನವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ’ ಎಂದು ಶಾಲಾ ಅಕ್ಷರ ರಥ ಸಮಿತಿ ನಾಗಾರಾಜ್ ಗಾಣಿಗ ತಿಳಿಸಿದರು.

‘ಶಾಲೆಯಲ್ಲಿ ಶೈಕ್ಷಣಿಕ ಜ್ಞಾನದ ಜೊತೆ ಬದುಕುವ ಕಲೆಯನ್ನು ತಿಳಿಸಿಕೊಡುವ ಸಂತೆಯ ಕಲ್ಪನೆಯಿಂದ ನನ್ನಂಥ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ’ ಎಂದು 7ನೇ ತರಗತಿಯ ಶರಣ್ ಪ್ರತಿಕ್ರಿಯಿಸಿದ.

ಮಕ್ಕಳ ಸಂತೆಯನ್ನು ಎಸ್‌.ಬಿ.ಐ. ಬ್ಯಾಂಕ್‌ನ ಸಾಲಿಗ್ರಾಮ ಶಾಖೆಯ ಪ್ರಬಂಧಕಿ ಸಂಚಿತ್‌ ಸರ್ಕಾರ್‌ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಎಸ್‌.ಡಿ.ಎಂ.ಸಿ ಅಧ್ಯಕ್ಷ ಶಂಕರ ದೇವಾಡಿಗ, ಉಪಾಧ್ಯಕ್ಷೆ ಶ್ಯಾಮಲಾ, ಅಕ್ಷರ ರಥ ಸಮಿತಿಯ ಅಧ್ಯಕ್ಷ ನಾಗರಾಜ ಗಾಣಿಗ, ಎಸ್‌.ಡಿ.ಎಂ.ಸಿ ಸದಸ್ಯರಾದ ಜ್ಯೋತಿ, ಬಾಬಿ, ದಿನೇಶ್‌, ಶಿಕ್ಷಕರಾದ ಮಾಲಿನಿ, ಪ್ರಶಾಂತ್‌ ಶೆಟ್ಟಿ ಮತ್ತು ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT