ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಖ್ಯಮಂತ್ರಿಗಳೇ ಲ್ಯಾಪ್‌ಟಾಪ್ ಕೊಡ್ರಿ’

ದೇವರಾಜ ಅರಸು ವಸತಿನಿಲಯದ ವಿದ್ಯಾರ್ಥಿಗಳಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ
Published 1 ಆಗಸ್ಟ್ 2023, 16:17 IST
Last Updated 1 ಆಗಸ್ಟ್ 2023, 16:17 IST
ಅಕ್ಷರ ಗಾತ್ರ

ಉಡುಪಿ: ಮಕ್ಕಳಿಗೆ ಬೆಡ್‌ ಶೀಟ್‌, ತಲೆದಿಂಬು ಸರಿಯಾಗಿ ಕೊಡ್ತಾ ಇದ್ಯೇನಯ್ಯಾ, ಕೊಠಡಿಯಲ್ಲಿ ಫಂಗಸ್‌ ವಾಸನೆ ಬರ್ತಾ ಇದ್ರೂ ಕ್ಲೀನ್ ಯಾಕೆ ಮಾಡಿಸಿಲ್ಲ ? ವಾರಕ್ಕೊಮ್ಮೆ ಬೆಡ್‌ಶೀಟ್, ದಿಂಬು ಬದಲಾಯಿಸಬೇಕು, ಅರ್ಥ ಆಯ್ತಾ...

ಹೀಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಮಾತಿನ ಶೈಲಿಯಲ್ಲಿ ಹಾಸ್ಟೆಲ್‌ ವಾರ್ಡನ್‌ಗೆ ತರಾಟೆಗೆ ತೆಗೆದುಕೊಂಡರು. ಪಡುಬಿದ್ರಿಯಲ್ಲಿ ಕಡಲ್ಕೊರೆತ ವೀಕ್ಷಣೆ ಮಾಡಿದ ಬಳಿಕ ನೇರವಾಗಿ ಉಡುಪಿಯ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿನೀಡಿದ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದರು.

ನೇರವಾಗಿ ವಿದ್ಯಾರ್ಥಿನಿಯರ ಕೊಠಡಿಗೆ ತೆರಳಿ, ಒಂದು ಕೊಠಡಿಯಲ್ಲಿ ಎಷ್ಟು ಮಂದಿ ವಿದ್ಯಾರ್ಥಿನಿಯರು ಇದ್ದೀರಿ, ಬೆಡ್‌ಶೀಟ್‌, ತಲೆದಿಂಬು ಸರಿಯಾಗಿ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು. ಸ್ವತಃ ಬೆಡ್‌ಶೀಟ್‌, ಹಾಸಿಗೆ, ತಲೆದಿಂಬು ಪರೀಕ್ಷಿಸಿ ಅಲ್ಲಿಯೇ ಇದ್ದ ವಾರ್ಡನ್‌ ಕರೆದು ತರಾಟೆಗೆ ತೆಗೆದುಕೊಂಡರು.

ಹಾಸಿಗೆಗೆ ಫಂಗಸ್‌ ಬಂದಿದ್ದರೂ ಕ್ಲೀನ್ ಮಾಡಿಸಿಲ್ಲವಲ್ಲಯ್ಯಾ ಎಂದು ಪ್ರಶ್ನಿಸಿದ ಸಿಎಂ ಕೊಠಡಿ ದುರ್ವಾಸನೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ವಾರಕ್ಕೊಮ್ಮೆ ಬೆಡ್‌ಶೀಟ್‌ ಒಗೆಸಬೇಕು, ಕೊಠಡಿಯನ್ನು ಶುಚಿಗೊಳಿಸಬೇಕು, ಮಕ್ಕಳ ಆರೋಗ್ಯಕ್ಕೆ ಸಮಸ್ಯೆಯಾಗದಂತೆ ನಿಯಮಿತವಾಗಿ ಹೆಲ್ತ್‌ಚೆಕ್ ಅಪ್ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವೆ, ಫಂಗಸ್ ಇರುವ ಹಾಸಿಗೆಯನ್ನು ವಿದ್ಯಾರ್ಥಿನಿಯರ ಕೊಠಡಿಯಲ್ಲಿ ಹಾಕಿದರೆ ಶ್ವಾಸಕೋಶದ ಸಮಸ್ಯೆ, ಚರ್ಮದ ಸಮಸ್ಯೆ, ಅಲರ್ಜಿ ಕಾಣಿಸಿಕೊಳ್ಳುತ್ತದೆ. ವಸತಿ ನಿಲಯ ಸ್ವಚ್ಛವಾಗಿರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿನೀಡಿ ಪರಿಶೀಲಿಸಬೇಕು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲು ಜನರ ಬಳಿಗೆ ತೆರಳಿ ಅಹವಾಲು ಆಲಿಸಿ ಪರಿಹರಿಸಬೇಕು ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ರೇಜು ಅವರಿಗೆ ಸಿಎಂ ನಿರ್ದೇಶನ ನೀಡಿದರು.

ಇದೇವೇಳೆ ಕೆಲವು ವಿದ್ಯಾರ್ಥಿನಿಯರು ಸಿಎಂ ಬಳಿ ಬಂದು ಸರ್ಕಾರದಿಂದ ಲ್ಯಾಪ್‌ಟಾಪ್ ಕೊಡುವ ಯೋಜನೆ ಸ್ಥಗಿತವಾಗಿದ್ದು ಪುನಾರಂಭಿಸಬೇಕು, ಲ್ಯಾಪ್‌ಟಾಪ್‌ ನೀಡಿದರೆ ಕಲಿಕೆಗೆ ಪೂರಕವಾಗಲಿದೆ ಎಂದು ಮನವಿ ಮಾಡಿದರು. ಶೀಘ್ರ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿ ತೆರಳಿದರು.

[object Object]
ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಯ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಬೆಡ್ ಪರಿಶೀಲಿಸುತ್ತಿರುವುದು
[object Object]
ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿಯ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

‘ಸಿಎಂ ಜತೆ ಮಾತನಾಡಿದ್ದು ಖುಷಿ ತಂದಿದೆ’

ಮುಖ್ಯಮಂತ್ರಿಗಳು ಹಾಸ್ಟೆಲ್‌ ಬರುವುದು ಗೊತ್ತಿರಲಿಲ್ಲ. ಏಕಾಏಕಿ ಅಧಿಕಾರಿಗಳು ಪೊಲೀಸರು ಸಚಿವರು ಮುಖ್ಯಮಂತ್ರಿಗಳು ಬಂದಾಗ ಅಚ್ಚರಿಯಾಯಿತು. ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಇವೆಯೇ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿದೆಯೇ? ಆಹಾರದ ಗುಣಮಟ್ಟ ಹೇಗಿದೆ ಕುಡಿಯುವ ನೀರಿನ ಸಮಸ್ಯೆ ಇದೆಯೇ ಹಾಸಿಗೆ ತಲೆದಿಂಬು ಸಿಗುತ್ತಿದೆಯೇ ಎಂದೆಲ್ಲ ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು ಖುಷಿ ತಂದಿತು ಎಂದು ವಿದ್ಯಾರ್ಥಿನಿಯರು ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಮಾತುಕತೆ

ಕಾರ್ಯದೊತ್ತಡದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸ್ಟೆಲ್ ವಿದ್ಯಾರ್ಥಿಗಳ ಜತೆ ಕೆಲ ಹೊತ್ತು ಮಾತುಕತೆ ನಡೆಸಿದರು. ಬೆಳಿಗ್ಗೆ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಏನೆಲ್ಲ ಕೊಡ್ತಾರೆ ಎಂದು ಕೇಳಿ ತಿಳಿದುಕೊಂಡರು. ಈ ಸಂದರ್ಭ ಹಾಸ್ಟೆಲ್‌ನಲ್ಲಿ ಪ್ರಧಾನಮಂತ್ರಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರ ಫಲಕಗಳನ್ನು ಕಂಡು ಇಲ್ಲಿ ವಿರೋಧ ಪಕ್ಷದವರು ಯಾರೆಲ್ಲ ಇದ್ದೀರಿ ಬನ್ನಿ ಎಂದು ಹಾಸ್ಯ ಚಟಾಕಿ ಸಿಡಿಸಿ ವಿದ್ಯಾರ್ಥಿನಿಯರನ್ನು ನಗಿಸಿದರು. ಧೈರ್ಯವಾಗಿ ಸಮಸ್ಯೆ ಹೇಳಿಕೊಳ್ಳಿ ಎಂದರು. ಹಾಸ್ಟೆಲ್‌ನಲ್ಲಿ ಊಟ ವಸತಿ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT