ಮಂಗಳವಾರ, ಮಾರ್ಚ್ 21, 2023
27 °C

ಯಕ್ಷಗಾನದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಸಚಿವ ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಯಕ್ಷಗಾನ ಸಮ್ಮೇಳನವನ್ನು ಜನವರಿ ಕೊನೆಯ ವಾರದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್‌, ಪರ್ಯಾಯ ಕೃಷ್ಣಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಿಶೋರ ಯಕ್ಷ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಯಕ್ಷಗಾನ ತರಬೇತಿ ದೊರತೆರೆ ಪೌರಾಣಿಕ ವಿಚಾರಗಳ ಕುರಿತು ಜ್ಞಾನ ಲಭ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಯಕ್ಷ ಶಿಕ್ಷಣ ಟ್ರಸ್ಟ್‌ನ ಚಟುವಟಿಕೆಗಳಿಗೆ ಸರ್ಕಾರದಿಂದ 10 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದರು.

ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಾತನಾಡಿ, ಕಲೆ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಯಕ್ಷಗಾನ ಕಲೆ ಹಾಗೂ ಕಲಾವಿದರು ಕೊಡುಗೆ ನೀಡುತ್ತಿದ್ದಾರೆ. ಕರಾವಳಿ ನೆಲದ ಕಲೆಯಾದ ಯಕ್ಷಗಾನ ಕಲಿಕೆಗೆ ಹೊರಗಿನವರು ಹೆಚ್ಚು ಆಸಕ್ತಿ ವಹಿಸುತ್ತಿದ್ದು ಕಲೆ ವಿಸ್ತಾರಗೊಳ್ಳುತ್ತಿದೆ ಎಂದರು.

ಯಕ್ಷಗಾನವು ಹಿಂದಿನ ಅಶಿಕ್ಷಿತ ಜನತೆಗೆ ದೇವರ ಪರಿಚಯ ಮತ್ತು ಪುರಾಣಗಳ ಸಾರವನ್ನು ಕೊಟ್ಟಿದೆ. ಪ್ರಜೆಗಳಿಗೆ ಅಧ್ಯಾತ್ಮ ತಿಳಿಯಲು ಯಕ್ಷಗಾನ ಉತ್ತಮವಾದ ವೇದಿಕೆಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕ ಹಾಗೂ ಉತ್ತಮ ಶೈಕ್ಷಣಿಕ ಸಾಧನೆ ತೋರಿದ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಿದ ಗುರುಗಳನ್ನು ಸನ್ಮಾನಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್‌, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್, ಯಕ್ಷ ಶಿಕ್ಷಣ ಟ್ರಸ್ಟ್‌ ಕಾರ್ಯದರ್ಶಿ ಮುರಳಿ ಕಡೆಕಾರ್, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಚ್‌.ಚಂದ್ರೇಗೌಡ, ಬ್ರಹ್ಮಾವರ ಬಿಇಒ ರಂಗನಾಥ್, ಶಿಕ್ಷಣಾಧಿಕಾರಿ ಜಾಹ್ನವಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು