ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ: ಧ್ರುವ ನಾರಾಯಣ್ ವಾಗ್ದಾಳಿ

Last Updated 25 ನವೆಂಬರ್ 2021, 16:18 IST
ಅಕ್ಷರ ಗಾತ್ರ

ಉಡುಪಿ: ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನಂಬಿಕೆ ಇಲ್ಲ. ಮನುವಾದ ಜಾರಿಯಾಗಬೇಕು, ಶ್ರೇಣೀಕೃತ ಸಮಾಜ ನಿರ್ಮಾಣ ಆರ್‌ಎಸ್‌ಎಸ್‌ನ ಪ್ರಮುಖ ಉದ್ದೇಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಾಣ್ ಟೀಕಿಸಿದರು.

ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿನೀಡಿ ಮಾತನಾಡಿದ ಅವರು, ದೇಶಕ್ಕೆ ಆರ್‌ಎಸ್‌ಎಸ್‌ನ ಕೊಡುಗೆ ಶೂನ್ಯ. ದೇಶದ ಭದ್ರತೆ, ಅಭಿವೃದ್ಧಿಗೆ ಹಾಗೂ ಆರ್ಥಿಕ ಬೆಳವಣಿಗೆಗೆ ಆರ್‌ಎಸ್‌ಎಸ್‌ ಯಾವ ಕೊಡುಗೆಯನ್ನು ನೀಡಿಲ್ಲ ಎಂದು ವಾಗ್ದಾಲಿ ನಡೆಸಿದರು.

ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್‌ ಎನ್ನುವ ಬಿಜೆಪಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಯುವಕರು, ಮಹಿಳೆಯರು ಹಾಗೂ ಮೇಲ್ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಿದೆ. ಬಿಜೆಪಿಯದ್ದು ಕೇವಲ ತೋರ್ಪಡಿಕೆ ರಾಜಕಾರಣ ಎಂದು ವ್ಯಂಗ್ಯವಾಡಿದರು.

ಅಧಿಕಾರ ವಿಕೇಂದ್ರೀಕರಣದ ಆಶಯದೊಂದಿಗೆ ಸ್ಥಳೀಯ ಸಂಸ್ಥೆಗಳಿಗೆ ಬಲ ತುಂಬುವ ಉದ್ದೇಶದಿಂದ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಯೂ ಕರ್ನಾಟಕಕ್ಕಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಎಲ್ಲ ಜಾತಿ, ಧರ್ಮಗಳ ಅಭ್ಯುದಯಕ್ಕೆ ಕಾಂಗ್ರೆಸ್‌ ಶ್ರಮಿಸಿದೆ ಎಂದರು.

ದಕ್ಷಿಣ ಕನ್ನಡ ಕ್ಷೇತ್ರದಿಂದ ಮಂಜುನಾಥ್ ಭಂಡಾರಿ ಕಣಕ್ಕಿಳಿದಿದ್ದು, ವಿನಯ್‌ಕುಮಾರ್ ಸೊರಕೆ, ಪ್ರತಾಪ್‌ಚಂದ್ರ ಶೆಟ್ಟಿ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರು ಒಗ್ಗಟ್ಟಾಗಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

ಬಿಜೆಪಿಗೆ ಜನಸ್ವರಾಜ್ ಯಾತ್ರೆ ನಡೆಸುವ ನೈತಿಕ ಹಕ್ಕಿಲ್ಲ. ರಸಗೊಬ್ಬರದ ದರ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇಂತಹ ದುಸ್ಥಿತಿಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸರ್ಕಾರ ರೈತರ ಪರವಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ನರೇಗಾ, ಆಹಾರ ಭದ್ರತಾ ಕಾಯ್ದೆ, ರಾಷ್ಟ್ರೀಯ ಆರೋಗ್ಯ ಹಾಗೂ ಕೃಷಿ ಅಭಿಯಾನ ಕಾಂಗ್ರೆಸ್‌ ಆಡಳಿತವಾದಿಯಲ್ಲಿ ಜಾರಿಗೊಂಡ ಯಶಸ್ವಿ ಕಾರ್ಯಕ್ರಮಗಳು. ಬಿಜೆಪಿ ಕಾಂಗ್ರೆಸ್‌ನ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿನಯ್‌ ಕುಮಾರ್ ಸೊರಕೆ, ಮುಖಂಡರಾದ ಎಂ.ಎ.ಗಫೂರ್‌ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರು ಇದ್ದರು.

ಪ್ರಮೋದ್ ಕಾಂಗ್ರೆಸ್‌ನಲ್ಲಿ ಸಕ್ರಿಯ
ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬುದು ವದಂತಿಯಷ್ಟೆ. ಈಚೆಗೆ ನಡೆದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 15 ದಿನ ನಿರಂತರವಾಗಿ ಪಕ್ಷದ ಅಭ್ಯರ್ಥಿ ಪರ ಪ್ರಮೋದ್ ಪ್ರಚಾರ ನಡೆಸಿದ್ದರು. ಪ್ರಮೋದ್‌ ಕಾಂಗ್ರೆಸ್‌ ಪಕ್ಷದ ಸಕ್ರಿಯ ಮುಖಂಡರಲ್ಲೊಬ್ಬರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT