ಗುರುವಾರ , ಮೇ 19, 2022
21 °C
ಪೆಟ್ರೋಲ್ ಬಂಕ್ ಎದುರು ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ

ಬೆಲೆ ಏರಿಕೆ; ಸೌಟು ಲಟ್ಟಣಿಗೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಮಹಿಳಾ ಘಟಕದಿಂದ ಲಟ್ಟಣಿಗೆ, ಸೌಟು, ತಟ್ಟೆ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.

ಉಡುಪಿಯ ಸರ್ವೀಸ್‌ ಬಸ್ ನಿಲ್ದಾಣದ ಎದುರಿನ ಪೆಟ್ರೋಲ್‌ ಬಂಕ್‌ ಎದುರು ಮಹಿಳಾ ಕಾಂಗ್ರೆಸ್‌ ನಾಯಕಿಯರು ತೈಲ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿ, ಕೋವಿಡ್‌ನಿಂದ ಇಡೀ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರ ಜನರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

₹ 35 ರೂಪಾಯಿ ಮೂಲಬೆಲೆಯ ಪೆಟ್ರೋಲ್‌ಗೆ ₹ 65 ತೆರಿಗೆ ವಿಧಿಸುವ ಮೂಲಕ ಜನರನ್ನು ದೋಚಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ ಎಂದು ಟೀಕಿಸಿದರು.

ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಮಾತನಾಡಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಬಿಜೆಪಿ ನಾಯಕಿಯರಾದ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ಯಾಸ್ ದರ ದುಪ್ಪಟ್ಟಾಗಿದೆ. ಆದರೂ ಯಾವ ಬಿಜೆಪಿ ನಾಯಕರೂ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.

ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಕೆಪಿಸಿಸಿ ಸಂಯೋಜಕಿ ಡಾ.ಸುನೀತಾ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಮಹಿಳಾ ಕಾಂಗ್ರೆಸ್ ಜತೆ ಕಾರ್ಯದರ್ಶಿ ಜಯಶ್ರೀ ಶೇಟ್, ಶೈಲಾ ಇದ್ದರು.

ಯುವ ಕಾಂಗ್ರೆಸ್‌ ಪ್ರತಿಭಟನೆ: ಇಂಧನ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಅಲೆವೂರಿನ ಪೆಟ್ರೋಲ್ ಬಂಕ್ ಎದುರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿತು. ನಗರಸಭೆ ಸದಸ್ಯ ರಮೇಶ್ ಕಾಂಚನ್ ಅವರು ಮಾತನಾಡಿ, ಅಧಿಕಾರಕ್ಕೆ ಬರುವಾಗ ಸರ್ಕಾರ ನೀಡಿದ್ದ ಭರವಸೆಗೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ನಿರಂತರವಾಗಿ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಿಸುವ ಮೂಲಕ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯುವ ಕಾರ್ಯ ಮಾಡುತ್ತಿದೆ. ಮುಂದೆ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾದರೆ ಪ್ರತಿ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳ ದರ ಇಳಿಕೆಯಾಗಬೇಕಾದರೆ ಒಟ್ಟಾಗಿ ಹೋರಾಟ ಮಾಡಬೇಕು. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

‌ಯುವ ಕಾಂಗ್ರೆಸ್ ಘಟಕದ ಅದ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಂಚನ್, ಉಪಾಧ್ಯಕ್ಷ ಸುಧಾಕರ ಪೂಜಾರಿ, ಅಲೆವೂರು ಹರೀಶ್ ಕಿಣಿ, ಯತೀಶ್ ಕರ್ಕೆರಾ, ವಿಶ್ವಾಸ್ ಅಮೀನ್, ಅಲೆವೂರು ಪಂಚಾಯತ್ ಸದಸ್ಯ ಜಲ್ಲೇಶ್, ಶಬರೀಶ್ ಇದ್ದರು.

ಬೆಲೆ ಏರಿಕೆ ವಿರುದ್ಧ ಜಿಲ್ಲಾ ಕಿಸಾನ್ ಘಟಕದಿಂದಲೂ ಪ್ರತಿಭಟನೆ ನಡೆಸಲಾಯಿತು. ಕಿಸಾನ್ ಘಟಕದ ಅಧ್ಯಕ್ಷ ಶಶಿಧರ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯನ್, ಕಾರ್ಯದರ್ಶಿ ಉದಯ್ ಹೇರೂರು, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ಹರೀಶ್ ಶೆಟ್ಟಿ ಕೀಳಂಜೆ, ಉದ್ಯಾವರ ಅಧ್ಯಕ್ಷ ಎ.ಹಮೀದ್ ಇದ್ದರು.

‘ಕೋವಿಡ್ ಮಧ್ಯೆ ಬೆಲೆ ಹೆಚ್ಚಳ’

ಕೋವಿಡ್‌ನಿಂದ ಜನರು ಸಂಕಷ್ಟ ಎದುರಿಸುತ್ತಿರುವಾಗ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್‌, ಸಿಲಿಂಡರ್‌, ವಿದ್ಯುತ್‌ ದರ ಹೆಚ್ಚಳ ಮಾಡುವ ಮೂಲಕ ಬಡವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕೋವಿಡ್‌ ಎರಡನೇ ಅಲೆ ತಡೆಯಲು ಸರ್ಕಾರ ವಿಫಲವಾಗಿದೆ. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಾರ್ವಜನಿಕರಿಗೆ ಲಸಿಕೆ ಕೊಡಿ ಎಂದು ಸುಪ್ರೀಂಕೋರ್ಟ್‌ ಸೂಚನೆ ಕೊಡುವಂತಹ ಕೆಟ್ಟ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು