ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೊರೊನಾ ಜಾಗೃತಿಗೆ 21 ಭಾಷೆಗಳ ಬಳಕೆ

ಕೊರೊನಾ ವಾರಿಯರ್ಸ್‌ ತಂಡದ ವಿಭಿನ್ನ ಪ್ರಯತ್ನ
Last Updated 19 ಏಪ್ರಿಲ್ 2020, 19:33 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಉಡುಪಿ ಕೊರೊನಾ ವಾರಿಯರ್ಸ್ ತಂಡ ವಿಭಿನ್ನ ಪ್ರಯತ್ನ ಮಾಡಿದ್ದು, 21 ಭಾಷೆಗಳನ್ನು ಬಳಸಿಕೊಂಡು 2 ನಿಮಿಷ 50 ಸೆಕೆಂಡ್‌ಗಳ ಧ್ವನಿಮುದ್ರಿಕೆ ತಯಾರಿಸಿ ಬಿಡುಗಡೆ ಮಾಡಿದೆ.

‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ಉಡುಪಿ ಕೊರೊನಾ ವಾರಿಯರ್ಸ್‌ ತಮ್ಮ ರಕ್ಷಣೆಗೆ’ ಎಂಬ ವಾಕ್ಯವನ್ನು 21 ಭಾಷೆಗಳ ಜನರಿಂದ ಹೇಳಿಸಿ ಅದನ್ನು ಧ್ವನಿಮುದ್ರಿಕೆಯಾಗಿಸಿ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಹಾಗೂ ಟ್ವಿಟ್ಟರ್‌ಗಳಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಈ ಆಡಿಯೋ ಸಂದೇಶ ಈಗಾಗಲೇ ಸಾವಿರಾರು ಜನರನ್ನು ತಲುಪಿದೆ.

ಉಡುಪಿಯಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ, ತೆಲಂಗಾಣ, ತಮಿಳುನಾಡು, ದೆಹಲಿ, ಮುಂಬೈ ಸೇರಿದಂತೆ ಉತ್ತರ ಭಾರತ ಮೂಲದ ಹೆಚ್ಚಿನವರು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಪ್ರಾದೇಶಿಕ ಭಾಷೆಗಳ ಅರಿವಿಲ್ಲ. ಅವರಿಗೂ ಕೊರೊನಾ ಜಾಗೃತಿ ಸಂದೇಶ ತಲುಪಲಿ ಎಂಬ ಉದ್ದೇಶದಿಂದ ಧ್ವನಿಮುದ್ರಿಕೆ ಸಿದ್ಧಪಡಿಸಲಾಗಿದೆ ಎಂದು ಉಡುಪಿ ಕೊರೊನಾ ವಾರಿಯರ್ಸ್‌ ತಂಡದ ದೀಪಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಲಾಕ್‌ಡೌನ್ ಜಾರಿಯಾದ ಬಳಿಕ ಮಣಿಪಾಲದಿಂದ ಕರೆಮಾಡಿದ್ದ ಒಡಿಶಾ ಮೂಲದವರು ಅವರ ಮಾತೃಭಾಷೆಯಲ್ಲಿ ಆಹಾರಕ್ಕೆ ಬೇಡಿಕೆ ಇಟ್ಟಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ, ಅರ್ಥವೂ ಆಗುತ್ತಿರಲಿಲ್ಲ. ಇಲ್ಲಿನ ಪ್ರಾದೇಶಿಕ ಭಾಷೆ ಬಾರದ ಸಾವಿರಾರು ಜನ ಜಿಲ್ಲೆಯಲ್ಲಿದ್ದು, ಎಲ್ಲರಿಗೂ ಕೊರೊನಾ ಜಾಗೃತಿ ಮೂಡಿಸುವ ದೃಷ್ಟಿಯಿಂದ ಧ್ವನಿಮುದ್ರಿಕೆ ಸಿದ್ಧಪಡಿಸುವ ಪ್ರಯತ್ನಕ್ಕೆ ಕೈಹಾಕಲಾಯಿತು. ಉಡುಪಿ ಕೊರೊನಾ ವಾರಿಯರ್ಸ್‌ ಸದಸ್ಯರು ಇದಕ್ಕೆ ಸಾಥ್ ನೀಡಿದರು. ಅನ್ಯರಾಜ್ಯದಲ್ಲಿರುವ ಸ್ನೇಹಿತರು, ಸಂಬಂಧಿಗಳಿಂದ ಆಡಿಯೋ ಮಾಡಿಸಿ ನೀಡಿದ್ದಾರೆ ಎಂದರು.

ಒಂದೊಂದು ಭಾಷೆಯ ಸಂದೇಶಕ್ಕೆ ತಲಾ 5 ಸೆಕೆಂಡ್‌ ನೀಡಲಾಗಿದೆ. ಮುಂದೆಸಮುದಾಯಕ್ಕೆ ಮೈಕ್‌ಗಳ ಮೂಲಕ ಜಾಗೃತಿ ಸಂದೇಶ ಸಾರುವ ಯೋಚನೆ ಇದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್‌ಕ್ರಾಸ್ ಹಾಗೂ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಧ್ವನಿಮುದ್ರಿಕೆ ಸಿದ್ಧಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT