ಗುರುವಾರ , ಜೂಲೈ 9, 2020
28 °C
ಸಣ್ಣ ವ್ಯಾಪಾರಿಗಳ ಬದುಕಿಗೆ ಪೆಟ್ಟುಕೊಟ್ಟ ಕೊರೊನಾ; ಜೀವನ ನಿರ್ವಹಣೆಗೆ ರಸ್ತೆ ಬದಿ ವ್ಯಾಪಾರ

ಮೂಲವೃತ್ತಿ ಬಿಟ್ಟು ಅನ್ಯವೃತ್ತಿಯತ್ತ ಹೊರಳಿದರು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಲಾಕ್‌ಡೌನ್‌ ಜಾರಿಯಾದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ವ್ಯಾಪಾರಿಗಳು ಮೂಲವೃತ್ತಿ ಬಿಟ್ಟು ಅನ್ಯವೃತ್ತಿಯತ್ತ ಚಿತ್ತ ಹರಿಸಿದ್ದಾರೆ. ಜ್ಯೂಸ್‌ ಸೆಂಟರ್‌ಗಳು, ಸಣ್ಣ ಹೋಟೆಲ್‌ಗಳು ತರಕಾರಿ ಮಾರಾಟ ಮಳಿಗೆಗಳಾಗಿ ಬದಲಾಗಿವೆ. ಬಡಗಿಗಳು, ಕ್ಷೌರಿಕರು, ಕೂಲಿ ಕಾರ್ಮಿಕರು ರಸ್ತೆ ಬದಿಗಳಲ್ಲಿ ಹಣ್ಣು, ತರಕಾರಿ ವ್ಯಾಪಾರ ಶುರು ಮಾಡಿದ್ದಾರೆ.

ಮಧ್ಯಮ ಹಾಗೂ ಕೆಳ ಮಧ್ಯಮವರ್ಗದವರ ಬದುಕಿಗೆ ಕೊರೊನಾ ಬಲವಾದ ಪೆಟ್ಟುಕೊಟ್ಟಿದೆ. ಸಣ್ಣ ವ್ಯಾಪಾರಿಗಳಂತೂ ಕುಟುಂಬ ನಿರ್ವಹಣೆಗೆ ಮೂಲವೃತ್ತಿಯನ್ನೇ ಬಿಟ್ಟು, ರಸ್ತೆ ಬದಿಗಳಲ್ಲಿ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.

ರಸ್ತೆ ಬದಿಯೇ ತಾತ್ಕಾಲಿಕ ವ್ಯಾಪಾರ ಕೇಂದ್ರ

ಲಾಕ್‌ಡೌನ್‌ ಮುಗಿಯುತ್ತದೆ ಎಂದು ತಿಂಗಳಿನಿಂದ ಮನೆಯಲ್ಲಿ ಕುಳಿತು ಸಾಕಾಯಿತು. ಕೈಲಿದ್ದ ಹಣವೆಲ್ಲ ಖರ್ಚಾಗಿ, ಭವಿಷ್ಯದ ಚಿಂತೆ ಕಾಡತೊಡಗಿತು. ಬೇರೆ ದಾರಿ ಕಾಣದೆ 15 ದಿನಗಳಿಂದ ಮೊಬೈಲ್‌ ಸಂಚಾರಿ ವಾಹನದಲ್ಲಿ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ ಎಂದರು ಎಸ್‌ಪಿ ಕಚೇರಿ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಹರೀಶ್‌.

ಈ ರಸ್ತೆಯಲ್ಲಿಯೇ ನಾಲ್ಕೈದು ಕಡೆ ವ್ಯಾಪಾರ ಶುರುವಾಗಿದೆ. ಇವರೆಲ್ಲ ಹಿಂದಿನಿಂದಲೂ ತರಕಾರಿ ವ್ಯಾಪಾರ ಮಾಡಿಕೊಂಡವರಲ್ಲ. ಕೊರೊನಾ ಬಂದನಂತರ ಅನಿವಾರ್ಯವಾಗಿ ವೃತ್ತಿಗಿಳಿದವರು. ಕರಾವಳಿಯಲ್ಲಿ ಹಿಂದೆ ತಳ್ಳುಗಾಡಿ ವ್ಯಾಪಾರ ಇರಲಿಲ್ಲ. ಈಗ ವ್ಯಾಪಾರಿಗಳು ಮನೆಮನೆಗೆ ಹೋಗಿ ಮಾರುವಂತಹ ಸ್ಥಿತಿ ಬಂದಿದೆ ಎಂದರು.

ಇನ್ನೂ ಶಿವಮೊಗ್ಗದಿಂದ ಬಡಗಿ ಕೆಲಸಕ್ಕೆ ಉಡುಪಿಗೆ ಬಂದಿದ್ದ ಸೈಯದ್‌ ಹಾಗೂ ಅಫ್ಸರ್ ಕೂಡ ಸಗಟು ತರಕಾರಿ ವ್ಯಾಪಾರ ಶುರು ಮಾಡಿದ್ದಾರೆ. ನಗರದ ಮಸೀದಿ ಬಳಿಯ ವಿಶಾಲವಾದ ಮಳಿಗೆಯ ಮುಂದೆ ಈರುಳ್ಳಿ, ಟೊಮೆಟೊ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದ ಕಟ್ಟಡ ಕಾಮಗಾರಿಗಳು ನಿಂತಿದ್ದು ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಹಾಗಾಗಿ, ಶಿವಮೊಗ್ಗದಿಂದ 2 ದಿನಕ್ಕೊಮ್ಮೆ ಒಂದು ಲೋಡ್‌ ತರಕಾರಿ ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ ಎಂದರು ಅಫ್ಸರ್‌.

ಕೂಲ್‌ಡ್ರಿಂಕ್ಸ್ ಅಂಗಡಿ ತರಕಾರಿ ಮಳಿಗೆ

ಕೂಲ್‌ಡ್ರಿಂಕ್ಸ್‌ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಕೊರೊನ ಬಂದ ಮೇಲೆ ಅಂಗಡಿ ಬಂದ್ ಆಯಿತು. ತಿಂಗಳಿಂದ ಒಂದು ರೂಪಾಯಿ ದುಡಿಮೆ ಇಲ್ಲ. ಮನೆಯಲ್ಲಿ ಕುಳಿತರೆ ಜೀವನದ ಬಂಡಿ ಸಾಗುವುದಿಲ್ಲ ಎಂದು ಕೂಲ್‌ಡ್ರಿಂಕ್ಸ್‌ ಮಾರಾಟ ಮಳಿಗೆಯನ್ನೇ ತರಕಾರಿ, ಹಣ್ಣುಗಳ ಅಂಗಡಿಯಾಗಿ ಬದಲಿಸಿದ್ದೇನೆ. ಹೇಗೋ ಜೀವನ ಸಾಗುತ್ತಿದೆ ಎಂದು ನಿಟ್ಟುಸಿರು ಬಿಟ್ಟರು ಮಾಲೀಕರಾದ ಗಣೇಶ್‌.

ಹೀಗೆ, ಕೊರೊನಾ ಸಂಕಷ್ಟಕ್ಕೆ ಸಿಲುಕಿ ಅನ್ಯವೃತ್ತಿಯತ್ತ ಹೊರಳಿರುವ ನೂರಾರು ಸಣ್ಣ ವ್ಯಾಪಾರಿಗಳು ಜಿಲ್ಲೆಯಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು