ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ಬೆಡ್ ಮೀಸಲು

ಜಿಲ್ಲಾಡಳಿತ ಶಿಫಾರಸು ಮಾಡುವ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚನೆ
Last Updated 6 ಜನವರಿ 2022, 16:04 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಜ.7ರಿಂದಲೇ ಎಲ್ಲ ವಿಭಾಗಗಳಲ್ಲಿರುವ ಶೇ 50ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10ರಿಂದ ಖಾಸಗಿ ಆಸ್ಪತ್ರೆಯಗಳು ವೈದ್ಯಕೀಯ ಕಾಲೇಜುಗಳು ಲಭ್ಯವಿರುವ ಶೇ 75ರಷ್ಟು ಹಾಸಿಗೆಗಳನ್ನು(ಐಸಿಯು, ಐಸಿಯು ವೆಂಟಿಲೇಟರ್‌, ಎಚ್‌ಡಿಯು, ಆಮ್ಲಜನಕ ಆಧಾರಿತ ಹಾಸಿಗೆಗಳು) ಸೋಂಕಿತರ ಚಿಕಿತ್ಸೆಗೆ ಕಾಯ್ದಿರಿಸಬೇಕು. ಆರೋಗ್ಯ ಇಲಾಖೆಯಿಂದ ಶಿಫಾರಸ್ಸಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಕಳೆದ 14 ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇ 0.7 ಇತ್ತು. ಕಳೆದ ಒಂದು ವಾರದಲ್ಲಿ ಪಾಸಿಟಿವಿಟಿ ದರ ಶೇ 1ಕ್ಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 4,820ನಂತೆ ಕಳೆದ ಒಂದು ವಾರದಲ್ಲಿ 33,719 ಶಂಕಿತರಿಗೆ ಕೋವಿಡ್ ಪರೀಕ್ಷೆ ನಡೆಸಲಾದ್ದು, ಶೇ 1.01ರಷ್ಟು ಪಾಸಿಟಿವಿಟಿ ದರ ಪತ್ತೆಯಾಗಿದೆ. ಪತ್ತೆಯಾದ 339 ಸೋಂಕಿತರಲ್ಲಿ 254 ಸೋಂಕಿತರು ಮಣಿಪಾಲದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ 95.22ರಷ್ಟು ಮಂದಿ ಕೋವಿಡ್ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.ಶೇ 84.8 ಎರಡನೇ ಡೋಸ್ ಪಡೆದಿದ್ದಾರೆ. 18 ವರ್ಷ ಕೆಳಗಿರುವ 23,924 ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದ್ದು, ಉಳಿದವರಿಗೆ ಶೀಘ್ರ ಲಸಿಕೆ ಹಾಕಲಾಗುವುದು ಎಂದರು.

ಕೇರಳದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್ ಪ್ರಮಾಣ ಪತ್ರ ಸಲ್ಲಿಸಬೇಕು, ಇಲ್ಲವಾದರೆ ಜಿಲ್ಲೆಗೆ ಪ್ರವೇಶ ನೀಡುವುದಿಲ್ಲ. ಬಂದವರು 1 ವಾರ ನಿಗಾವಣೆಯಲ್ಲಿದ್ದು, ನೆಗೆಟಿವ್ ವರದಿ ಬಂದ ಬಳಿಕವಷ್ಟೆ ಜಿಲ್ಲೆ ಪ್ರವೇಶಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಹೋಟೆಲ್, ರೆಸ್ಟೊರೆಂಟ್,ಕ್ಯಾಟರಿಂಗ್, ಪಬ್‌, ಬಾರ್‌, ಸಿನಿಮಾ ಹಾಲ್, ಮಲ್ಪಿಪ್ಲೆಕ್ಸ್‌ ಸಿಬ್ಬಂದಿ, ವರ್ತಕರು, ಕಾರ್ಖಾನೆ, ಕಚೇರಿ ಸಿಬ್ಬಂದಿಯನ್ನು ರ‍್ಯಾಂಡಮ್‌ ಪರೀಕ್ಷೆಗೊಳಪಡಿಲಾಗುವುದು. ದಕ್ಷಿಣ ಆಫ್ರಿಕಾ, ಬೋತ್ಸವಾನ, ಹಾಂಕಾಂಗ್ ದೇಶಗಳಿಂದ ಬಂದವರಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ, ವರದಿ ನೆಗೆಟಿವ್ ಬಂದರೆ ಮಾತ್ರ ನಿಲ್ದಾಣದಿಂದ ನಿರ್ಗಮಿಸಲು ಅನುಮತಿಸಲಾಗುವುದು.

ಡಿ.23ರಿಂದ ಜ.5ರವರೆಗೆ ಮೂರು ದೇಶಗಳಿಂದ ಬಂದವರನ್ನು ಪತ್ತೆ ಹಚ್ಚಿ, ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗುವುದು. ಸೋಂಕು ಪತ್ತೆಯಾದರೆ, 10 ದಿನ ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಸೋಂಕಿತರ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌, ಎಸ್‌ಪಿ ಎನ್‌.ವಿಷ್ಣುವರ್ಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT