ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರ ಪಂಚಮಿಗೆ ಕೊರೊನಾ ಕರಿ ನೆರಳು: ಮನೆಯಲ್ಲಿಯೇ ಹಬ್ಬ ಆಚರಿಸಲು ಅನುಮತಿ

Last Updated 24 ಜುಲೈ 2020, 19:31 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮಕ್ಕೆ ಕೊರೊನಾ ಸೋಂಕಿನ ಛಾಯೆ ಆವರಿಸಿದೆ. ಕಳೆದ ವರ್ಷ ಹಬ್ಬದ ಮುನ್ನಾ ದಿನ ಗಿಜಿಗಿಡುತ್ತಿದ್ದ ಮಾರುಕಟ್ಟೆ ಈ ವರ್ಷ ಬಣಗುಡುತ್ತಿದೆ. ಕೃಷ್ಣಮಠದ ರಥಬೀದಿಯಲ್ಲೂ ಸಂಭ್ರಮ ಕಾಣಲಿಲ್ಲ.

ಹಬ್ಬದ ಉತ್ಸಾಹ ಇಲ್ಲ:

ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆಗೆ ವಿಶೇಷ ಮಹತ್ವವಿದೆ. ಹಬ್ಬಕ್ಕೆ ಹಿಂದಿನ ದಿನವೇ ಗ್ರಾಹಕರು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದರು. ನಾಗನ ಪೂಜೆಗೆ ಬೇಕಾದ ಹೂ, ಅಡಿಕೆ ಹಿಂಗಾರ, ಕೇದಗೆ ಹೂಗಳನ್ನು ಖರೀದಿಸುತ್ತಿದ್ದರು. ಪೂಜಾ ವಸ್ತುಗಳ ದರ ಏರಿಕೆಯಾದರೂ ಹಬ್ಬದ ಸಂಭ್ರಮ ಕಡಿಮೆಯಾಗುತ್ತಿರಲಿಲ್ಲ.

ಆದರೆ, ಈ ವರ್ಷ ಮಾರುಕಟ್ಟೆ ಬಿಕೊ ಎನ್ನುತ್ತಿವೆ. ಬೆರಳೆಣಿಕೆ ವ್ಯಾಪಾರಿಗಳು ಮಾತ್ರ ಹೂ, ಹಣ್ಣು ವ್ಯಾಪಾರದಲ್ಲಿ ತೊಡಗಿದ್ದು ಕಂಡುಬಂತು. ಜಿಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್ ಹಾಕಿ ತಪಾಸಣೆ ಮಾಡುತ್ತಿರುವ ಕಾರಣ ಹೊರ ಜಿಲ್ಲೆಗಳಿಂದ ಬರುತ್ತಿದ್ದ ಹೂ ಹಣ್ಣು ಮಾರಾಟಗಾರರು ಈ ಬಾರಿ ಹೆಚ್ಚಾಗಿ ಬಂದಿಲ್ಲ.

ಹಬ್ಬದ ವಾತಾವರಣ ತುಂಬಿರುತ್ತಿದ್ದ ರಥಬೀದಿಯಲ್ಲೂ ಖರೀದಿ ಉತ್ಸಾಹ ಕಾಣಲಿಲ್ಲ. ಇಕ್ಕೆಲಗಳಲ್ಲಿ ಭರ್ತಿಯಾಗಿರುತ್ತಿದ್ದ ವ್ಯಾಪಾರಿಗಳು ಕಡಿಮೆ ಸಂಖ್ಯೆಯಲ್ಲಿದ್ದರು. ಗ್ರಾಹಕರ ಉತ್ಸಾಹವೂ ಕುಂದಿತ್ತು. ಎಳನೀರು ಮಾರಾಟ ಕೂಡ ಹೆಚ್ಚು ಕಾಣಲಿಲ್ಲ.

ನಾಗಪಂಚಮಿಯಂದು ನಾಗಬನ, ನಾಗ ದೇವಾಲಯಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು. ಕೊರೊನಾ ಸೋಂಕು ಹರಡುವ ಭೀತಿಯಿಂದ ಸಾರ್ವಜನಿಕವಾಗಿ ಹಬ್ಬಗಳ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ದೇವಸ್ಥಾನಗಳು ಕಳೆಗುಂದಿವೆ.

ಸಾರ್ವಜನಿಕ ಆಚರಣೆ ಇಲ್ಲವಾದರೂಭಕ್ತರು ಮನೆಯಲ್ಲಿಯೇ ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಹಿ ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಶನಿವಾರ ಮನೆಗಳಲ್ಲಿ ನಾಗನ ಆರಾಧನೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT