ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ಫ್ಯೂ: ಉಡುಪಿ ನಗರ ಸ್ತಬ್ಧ

ಕರ್ಫ್ಯೂ ಉಲ್ಲಂಘನೆ: 20 ದ್ವಿಚಕ್ರ, 9 ಕಾರು ಮಾಲೀಕರಿಗೆ ದಂಡ
Last Updated 28 ಏಪ್ರಿಲ್ 2021, 15:58 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ 2ನೇ ಅಲೆ ತಡೆಗೆ 14 ದಿನಗಳ ಕರ್ಫ್ಯೂ ಜಾರಿಯಾಗಿದ್ದು, ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ 6ರಿಂದ 10ರವರೆಗೆ ಹಾಲು, ಹಣ್ಣು, ತರಕಾರಿ ಸೇರಿದಂತೆ ದಿನಸಿ ಸಾಮಾನುಗಳನ್ನು ಖರೀದಿಸಿದ ಸಾರ್ವಜನಿಕರು ಮನೆಗೆ ವಾಪಾಸಾದರು. ಬಳಿಕ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿರು.

ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಅಂತರ ಕಾಪಾಡಿಕೊಳ್ಳಲು ನೆರವಾಗುವಂತೆ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕರು ಮಾಸ್ಕ್ ಧರಿಸಿ ಸರದಿಯಲ್ಲಿ ನಿಂತು ತರಕಾರಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಮೆಡಿಕಲ್‌ ಶಾಪ್‌, ಪೆಟ್ರೋಲ್‌ ಬಂಕ್‌ ಹಾಗೂ ಹೋಟೆಲ್‌ಗಳನ್ನು ಹೊರತುಪಡಿಸಿ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಬ್ಧವಾಗಿದ್ದವು. ನಗರದ ಪ್ರಮುಖ ರಸ್ತೆಗಳು ಭಣಗುಡುತ್ತಿದ್ದವು.

ಖಾಸಗಿ ಸರ್ವೀಸ್‌, ನಗರ ಸಾರಿಗೆ, ಕೆಎಸ್‌ಆರ್‌ಟಿಸಿ ಹಾಗೂ ನರ್ಮ್‌ ಬಸ್‌ಗಳ ಸಂಚಾರ ಇರಲಿಲ್ಲ. ನಾಲ್ಕು ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ನಿರ್ಗತಿಕರು, ಭಿಕ್ಷುಕರು ನಿಲ್ದಾಣದಲ್ಲಿ ಮಲಗಿದ್ದ ದೃಶ್ಯ ಕಂಡುಬಂತು.

ನಗರದ ಕಲ್ಸಂಕ ವೃತ್ತ ಹಾಗೂ ಮಣಿಪಾಲದ ಟೈಗರ್ ಸರ್ಕಲ್‌ ಬಳಿ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿತ್ತು. ವೈದ್ಯಕೀಯ ತುರ್ತು ಕಾರಣಗಳಿಗೆ ಆಸ್ಪತ್ರೆಗಳಿಗೆ ತೆರಳುವವರಿಗೆ, ಆಹಾರ ಪದಾರ್ಥಗಳನ್ನು ಡೆಲಿವರ್ ಮಾಡುವ ಸಿಬ್ಬಂದಿಗೆ, ಹೋಟೆಲ್‌ಗಳಲ್ಲಿ ಊಟ ಪಾರ್ಸೆಲ್‌ ತರುವ ಸಾರ್ವಜನಿಕರಿಗೆ, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳುವವರಿಗೆ, ರಕ್ತದಾನ ಮಾಡಲು ಹೋಗುವವರಿಗೆ ಸಂಚರಿಸಲು ಅನುಮತಿ ನೀಡಲಾಯಿತು.

ಉಳಿದಂತೆ ಅನವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡಲು ಬಂದಿದ್ದವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು. ಕರ್ಫ್ಯೂ ನಿಯಮ ಉಲ್ಲಂಘಿಸಿದ 20 ಬೈಕ್‌ ಸವಾರರು, 9 ಕಾರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು. ಜತೆಗೆ ಡಿಎಂ ಕಾಯ್ದೆ ಅಡಿಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಎನ್‌.ವಿಷ್ಣುವರ್ಧನ್‌ ಮಾಹಿತಿ ನೀಡಿದರು.

ಕರ್ಫ್ಯೂ ಇದ್ದರೂ ಜನರ ಸಂಚಾರ:

ವಾಣಿಜ್ಯ ಚಟುವಟಿಕೆಗಳು, ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ಅಲ್ಲಲ್ಲಿ ಸಾರ್ವಜನಿಕರ ಓಡಾಟ ಕಂಡುಬಂತು. ಕೆಲವರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ನೆಪ ಹೇಳಿದರೆ, ಕೆಲವರು ಹೋಟೆಲ್‌ನಲ್ಲಿ ಪಾರ್ಸೆಲ್ ತರುವುದಾಗಿ ಹೇಳಿದರು. ಕೆಲವರು ಆಸ್ಪತ್ರೆಗೆ, ರಕ್ತದಾನಕ್ಕೆ ಹೋಗುತ್ತಿರುವುದಾಗಿ ಕಾರಣ ನೀಡಿದರು ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT