ಬುಧವಾರ, ಮೇ 12, 2021
18 °C
ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ

ಕೋವಿಡ್‌ ನಿಯಂತ್ರಣ: ಹಿಂದಿನ ಸಮಿತಿಗಳ ಪುನರ್ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಿಸಲು ನಿಯೋಜಿಸಿರುವ ಅಧಿಕಾರಿಗಳು ಜವಾಬ್ದಾರಿ ಅರಿತು ಕರ್ತವ್ಯದಲ್ಲಿ ಲೋಪಗಳಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಸೂಚಿಸಿದರು.

ಶುಕ್ರವಾರ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಹಿಂದೆ ರಚಿಸಲಾಗಿದ್ದ ಎಲ್ಲ ಸಮಿತಿಗಳನ್ನು ತಕ್ಷಣದಿಂದ ಬರುವಂತೆ ಪುನರ್‌ ರಚಿಸಲಾಗಿದೆ. ಅಧಿಕಾರಿಗಳು ವಹಿಸಲಾಗಿರುವ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.

ಸೋಂಕಿತರ ಪತ್ತೆಹಚ್ಚುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಕೋವಿಡ್ ಪರೀಕ್ಷೆಗೆ ರಚಿಸಿರುವ ತಂಡದ ಅಧಿಕಾರಿಗಳು ನಿಗಧಿತ ಸಂಖ್ಯೆಯ ಪರೀಕ್ಷೆ ನಡೆಸಬೇಕು. ಕೋವಿಡ್ ಪರೀಕ್ಷೆ ನಡೆಸಲು ವಿರೋಧಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸೂಚಿಸಿದರು.

ತಹಶೀಲ್ದಾರ್‌ಗಳು,  ತಾಲ್ಲೂಕು ಪಂಚಾಯಿತಿ ಇಒಗಳು, ಆರೋಗ್ಯ ಅಧಿಕಾರಿಗಳು ತಂಡ ರಚಿಸಿಕೊಂಡು ಕೋವಿಡ್ ಪರೀಕ್ಷೆ ನಡೆಸುವ ಸಿಬ್ಬಂದಿಗೆ ಸಹಕಾರ ನೀಡಬೇಕು. ಅಂತರ ಪಾಲನೆ, ಮಾಸ್ಕ್ ಧರಿಸದವರ ವಿರುದ್ದ ದಂಡ ವಿಧಿಸುವ ಅಧಿಕಾರ ನೀಡಿದ್ದರೂ ದಂಡ ವಿಧಿಸದ ಕ್ರಮದ ಬಗ್ಗೆ ಅಸಮದಾನ ವ್ಯಕ್ತಪಡಿಸಿದ ಡಿಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಕುವಂತೆ ತಿಳಿಸಿದರು.

ದಿನದ 24ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಬೇಕು. ಕ್ವಾರಂಟೈನ್ ವಾಚ್ ಶೇ 100 ಸಾಧನೆ ಆಗಬೇಕು. ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ನಿಯಮಿತ ತಪಾಸಣೆ ಮಾಡಬೇಕು ಎಂದರು.

ಐಎಲ್‌ಐ ಹಾಗೂ ಸಾರಿ ಪ್ರಕರಣಗಳ ಕುರಿತು ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದುಗೊಳಿಸಿ, ಮೃತದೇಹಗಳ ವಿಲೇವಾರಿ ಸಂದರ್ಭ ಗೊಂದಲಗಳಾಗದಂತೆ ಎಚ್ಚರವಹಿಸಿ, ಜಿಲ್ಲೆಗೆ ಅಗತ್ಯವಿರುವ ಲಸಿಕೆ, ಆಮ್ಲಜನಕ, ಪಿಪಿಇ ಕಿಟ್, ಮಾಸ್ಕ್‌ಗಳ ಸಂಗ್ರಹ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಕಾರ್ಯತಂಡಗಳನ್ನು ರಚಿಸಿದ ಜಿಲ್ಲಾಧಿಕಾರಿ, ಶೀಘ್ರ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು. ತಂಡಗಳು ಸಂಘಟಿತ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ದಿನದ ಕಾರ್ಯ ಪ್ರಗತಿಯ ವಿವರ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾದಿಕಾರಿ ಸದಾಶಿವ ಪ್ರಭು, ಉಪ ವಿಬಾಗಾಧಿಕಾರಿ ಕೆ.ರಾಜು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್,  ಡಿಎಚ್ಒ ಡಾ. ಸುದೀರ್ ಚಂದ್ರ ಸೂಡ, ಡಾ. ಪ್ರಶಾಂತ ಭಟ್, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.