ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ 6 ಸಾವು: 919 ಮಂದಿಗೆ ಸೋಂಕು

ಜೇಷ್ಠತೆ ಆಧಾರದಲ್ಲಿ ಲಸಿಕೆ ವಿತರಣೆ; ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು
Last Updated 12 ಮೇ 2021, 15:15 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರ ಜತೆಗೆ ಸೋಂಕಿತರ ಮರಣ ಪ್ರಮಾಣವೂ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಬುಧವಾರ ಜಿಲ್ಲೆಯಲ್ಲಿ 6 ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕುಂದಾಪುರ ತಾಲ್ಲೂಕಿನ 77, 68 ಮತ್ತು 58 ವರ್ಷದವರು ಹಾಗೂ ಉಡುಪಿ ತಾಲ್ಲೂಕಿನ 80 ಮತ್ತು 75 ವರ್ಷದ ವೃದ್ಧರು ಹಾಗೂ 88 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 245ಕ್ಕೆ ಏರಿಕೆಯಾಗಿದೆ

919 ಮಂದಿಗೆ ಸೋಂಕು ದೃಢ

ಜಿಲ್ಲೆಯಲ್ಲಿ 919 ಜನರಿಗೆ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಉಡುಪಿ ತಾಲ್ಲೂಕಿನ 576, ಕುಂದಾಪುರದದ 257, ಕಾರ್ಕಳದ 83 ಹಾಗೂ ಹೊರ ಜಿಲ್ಲೆಯ ಮೂವರಿಗೆ ಸೋಂಕು ತಗುಲಿದೆ. 237 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ, 682 ಜನರಲ್ಲಿ ಲಕ್ಷಣಗಳು ಇಲ್ಲ. 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಹೋಂ ಐಸೊಲೇಷನ್‌ನಲ್ಲಿ ಇದ್ದಾರೆ.

837 ಮಂದಿ ಸೋಂಕು ಮುಕ್ತ

ಜಿಲ್ಲೆಯ 837 ಮಂದಿ ಸೋಂಕು ಮುಕ್ತರಾಗಿದ್ದಾರೆ. ಈವರೆಗೆ 35,539 ಮಂದಿ ಗುಣಮುಖರಾಗಿದ್ದಾರೆ. 5,37,062 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 42,736 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 6,952 ಸಕ್ರಿಯ ಸೋಂಕಿತರಿದ್ದಾರೆ.‌ ಬುಧವಾರ 2,957 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇ 31.07 ಕಂಡುಬಂದಿದೆ. ಚೇತರಿಕೆ ಪ್ರಮಾಣ ಶೇ 83.15ರಷ್ಟಿದೆ. ‌

ಎಸ್‌ಎಂಎಸ್ ಬಂದವರು ಮಾತ್ರ ಬನ್ನಿ

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಉಡುಪಿ ನಗರದಲ್ಲಿರುವ ಲಸಿಕಾ ಕೇಂದ್ರಗಳಿಗೆ ಮುಗಿಬೀಳುತ್ತಿರುವುದನ್ನು ತಪ್ಪಿಸಲು ಮೊದಲ ಡೋಸ್ ಪಡೆದ ದಿನಾಂಕದಂತೆ ಜೇಷ್ಠತೆ ಆಧಾರದ ಮೇಲೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಸುಖಾಸುಮ್ಮನೆ ಸರದಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸುವುದು ಬೇಡ. ಎರಡನೆ ಡೋಸ್‌ ಲಸಿಕೆ ಪಡೆಯಲು ಅರ್ಹರಿರುವ ವ್ಯಕ್ತಿಗಳ ಮೊಬೈಲ್‌ಗೆ ಜಿಲ್ಲಾಡಳಿತದಿಂದ ಲಸಿಕೆ ಪಡೆಯುವ ಮುಂಚಿನ ದಿನ ಎಸ್‌ಎಂಎಸ್‌ ಕಳಿಸಲಾಗುವುದು. ಸಂದೇಶ ಬಂದವರು ಮಾತ್ರ ಲಸಿಕಾ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಬಂದು ಲಸಿಕೆ ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಉಡುಪಿ ನಗರದಲ್ಲಿರುವ ಸೈಂಟ್ ಸಿಸಿಲಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರದಲ್ಲಿ 100 ಡೋಸ್ ಮತ್ತು ಮಣಿಪಾಲದ ವೇಣುಗೋಪಾಲ ದೇವಸ್ಥಾನದ ಬಳಿಯ ನಗರ ಆರೋಗ್ಯ ಕೇಂದ್ರದಲ್ಲಿ 70 ಡೋಸ್ ಲಸಿಕೆಯನ್ನು ಗುರುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯೊಳಗೆ ನೀಡಲಾಗುವುದು ಎಂದು ಎಡಿಸಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT