ಶನಿವಾರ, ಅಕ್ಟೋಬರ್ 24, 2020
18 °C
ವೆಂಟಿಲೇಟರ್, ಐಸಿಯು ಬಳಕೆಯೂ ಕಡಿಮೆ: ಜಿಲ್ಲಾಧಿಕಾರಿ ಜಿ.ಜಗದೀಶ್‌

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್ ದರ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಅಕ್ಟೋಬರ್‌ ಮೊದಲ ವಾರದಲ್ಲಿ ಪಾಸಿಟಿವ್‌ ದರ ಶೇ 10ಕ್ಕಿಂತ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಆಗಸ್ಟ್‌ ಮಧ್ಯದಲ್ಲಿ ಪಾಸಿಟಿವ್‌ ದರ ಶೇ 25 ರಿಂದ 30ಕ್ಕೆ ಏರಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಶೇ 20ಕ್ಕೆ ಕುಸಿಯಿತು. ಅಕ್ಟೋಬರ್‌ನಲ್ಲಿ ಶೇ 10ಕ್ಕೆ ಇಳಿಕೆಯಾಗಿದ್ದು, ಆಶಾದಾಯಕ ಬೆಳವಣಿಗೆ ಎಂದರು.

ವೆಂಟಿಲೇಟರ್ ಬಳಕೆಯೂ ಕುಸಿತ:

ತಿಂಗಳ ಹಿಂದೆ ಜಿಲ್ಲೆಯಲ್ಲಿ ಎಲ್ಲ ಐಸಿಯು ಬೆಡ್‌ಗಳು ಭರ್ತಿಯಾಗಿದ್ದವು. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಐಸಿಯು ಬೆಡ್‌ಗಳಿಗೆ ಬರುತ್ತಿರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಸೋಂಕಿತರ ಪ್ರಮಾಣವೂ ಕುಸಿಯುತ್ತಿದೆ. ಸದ್ಯ, ಕೆಲವು ಐಸಿಯು ಹಾಗೂ ವೆಂಟಿಲೇಟರ್ ಬೆಡ್‌ಗಳು ಖಾಲಿ ಇವೆ ಎಂದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್‌ ಪರೀಕ್ಷೆ:

ರಾಜ್ಯದಲ್ಲೇ ಉಡುಪಿಯಲ್ಲಿ ಅತಿ ಹೆಚ್ಚು ಕೋವಿಡ್‌ ಪರೀಕ್ಷೆ ಮಾಡಲಾಗಿದೆ. 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ 91,000 ಪರೀಕ್ಷೆ ಮಾಡಲಾಗಿದ್ದರೆ, ದೇಶದಲ್ಲಿ 69,000 ಪರೀಕ್ಷೆ ನಡೆದಿದೆ. ಆದರೆ, ಉಡುಪಿಯಲ್ಲಿ 1,16,268 ಜನರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಲಾಗಿದೆ. ಇದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದರು.

ಮರಣ ಪ್ರಮಾಣವೂ ಇಳಿಕೆ:

ದೇಶದಲ್ಲಿ ಸೋಂಕಿತರ ಮರಣ ಪ್ರಮಾಣ ಶೇ 1.6 ರಷ್ಟಿದ್ದರೆ, ಜಿಲ್ಲೆಯಲ್ಲಿ ಶೇ 0.83 ಮಾತ್ರ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಪೈಕಿ ಚಿತ್ರದುರ್ಗ, ಯಾದಗಿರಿ ಹೊರತುಪಡಿಸಿದರೆ ಉಡುಪಿ ಮೂರನೇ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ ಗಂಭೀರ ಪ್ರಕರಣಗಳನ್ನು ದಾವಣಗೆರೆಗೆ, ಯಾದಗಿರಿಯಲ್ಲಿ ಕಲಬುರಗಿಗೆ ಕಳುಹಿಸಿದರೆ, ಉಡುಪಿಯಲ್ಲಿ ಗಂಭೀರ ಪ್ರಕರಣಗಳಿಗೆ ಜಿಲ್ಲೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸವಾಲುಗಳ ಮಧ್ಯೆಯೂ ಮರಣ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಡಿಎಚ್‌ಒ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ
ಡಾ. ಪ್ರಶಾಂತ್ ಭಟ್, ಡಾ.ಪ್ರೇಮಾನಂದ್ ಇದ್ದರು.

‘ದೇವಸ್ಥಾನಗಳಲ್ಲಿ ದಟ್ಟಣೆ ತಡೆಗೆ ಕ್ರಮ’

ನವರಾತ್ರಿ, ಸೇರಿದಂತೆ ಹಬ್ಬಗಳು ಬರುತ್ತಿದ್ದು ದೇವಸ್ಥಾನಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಭಕ್ತರು ಹಾಗೂ ಆಡಳಿತ ಮಂಡಳಿ ಪಾಲಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ಕಳಿಸಲಾಗಿದೆ. ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಉತ್ಸವ, ರಥೋತ್ಸವದಲ್ಲಿ ನಿಗದಿಗಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಹಿಂದಿನಿಂದಲೂ ನಡೆಸಿಕೊಂಡು ಬಂದ ದೇವಸ್ಥಾನಗಳಿಗೆ ಮಾತ್ರ ಅನ್ನದಾನಕ್ಕೆ (ಬಫೆ ವ್ಯವಸ್ಥೆ) ಅವಕಾಶ ಕೊಡಲಾಗಿದೆ. ಹೊಸದಾಗಿ ಅನ್ನದಾನ ಆರಂಭಿಸದಂತೆ ದೇವಸ್ಥಾನಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು