ಗುರುವಾರ , ಅಕ್ಟೋಬರ್ 6, 2022
22 °C
ಸ್ವತಂತ್ರ ಸಾಕ್ಷಿಗಳ ಹೇಳಿಕೆಯಿಂದ ಕಠಿಣ ಶಿಕ್ಷೆ

ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಅಜೀವ ಕಾರಾಗೃಹ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3 ವರ್ಷಗಳ ಹಿಂದೆ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಹನುಮಂತಪ್ಪ ಚನ್ನಬಸಪ್ಪ ಕಂಬಳಿಗೆ ಮಂಗಳವಾರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಪೋಕ್ಸೋ ವಿಶೇಷ ಕೋರ್ಟ್ ಅಜೀವ ಕಾರಾಗೃಹ ಶಿಕ್ಷೆ ವಿಧಿಸಿದೆ.

ಸೋಮವಾರ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದರು. ಅದರಂತೆ, ಅಪರಾಧಿಗೆ ಜೀವ ಇರುವವರೆಗೂ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಶಿಕ್ಷೆ ಪ್ರಮಾಣ: ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ 20 ವರ್ಷ ಜೈಲು, ಸಾಕ್ಷ್ಯ ನಾಶ ಮಾಡಿದ್ದಕ್ಕೆ 7 ವರ್ಷ ಜೈಲು, ಬಾಲಕಿಯ ಅಪಹರಣಕ್ಕೆ 10 ವರ್ಷ ಶಿಕ್ಷೆ ನೀಡಿರುವ ನ್ಯಾಯಾಲಯ ₹ 32,000 ದಂಡ ವಿಧಿಸಿದೆ. ಇದರಲ್ಲಿ 7 ಸಾವಿರ ಸರ್ಕಾರಕ್ಕೆ ಭರಿಸಿ, ಸಂತ್ರಸ್ತ ಬಾಲಕಿಯ ಪೋಷಕರಿಗೆ 25,000 ಭರಿಸುವುದರ ಜತೆಗೆ ಸರ್ಕಾರ ₹ 4 ಲಕ್ಷ ಪರಿಹಾರ ನೀಡುವಂತೆಯೂ ಸೂಚಿಸಿದೆ.

ಏನಿದು ಪ್ರಕರಣ: ಅಪರಾಧಿ ಹನುಮಂತಪ್ಪ ಚನ್ನಬಸಪ್ಪ ಕಂಬಳಿ 2019ರ ಮಾರ್ಚ್‌ 6ರಂದು 17 ವರ್ಷದ ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮಾರ್ಚ್‌ 30ರಂದು ಆರೋಪಿಯ ಬಂಧನವಾಗಿತ್ತು.

ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿಗಳನ್ನು ಪ್ರಾಸಿಕ್ಯುಷನ್ ಪರವಾಗಿ ವಿಚಾರಣೆಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯ ಹಾಗೂ ಸಾಕ್ಷಿಗಳ ಹೇಳಿಕೆಯು ಆರೋಪಗಳಿಗೆ ಪೂರಕವಾಗಿದ್ದರಿಂದ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ.

ಸ್ವತಂತ್ರ ಸಾಕ್ಷಿಗಳ ಹೇಳಿಕೆ: ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಗಳು (ಕೊಲೆಯಾದ ಹಾಗೂ ಕೊಲೆ ಮಾಡಿದವನಿಗೆ ಪರಿಚಯ ಹಾಗೂ ಸಂಬಂಧ ಇಲ್ಲದವರು) ನಿರ್ಭೀತ ಹಾಗೂ ಸ್ಪಷ್ಟವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯಗಳನ್ನು ನುಡಿದಿದ್ದಾರೆ. ಆಟೋ ಚಾಲಕ, ಜ್ಯುವೆಲರಿ ಮಾಲೀಕ, ಕಾಡಿನಿಂದ ಸೌದೆ ತರುವ ವ್ಯಕ್ತಿ ಹೀಗೆ ಹಲವು ಸಾಕ್ಷಿದಾರರು ಪ್ರಕರಣದಲ್ಲಿ ಸ್ಪಷ್ಟವಾಗಿ ಸಾಕ್ಷ್ಯ ನುಡಿದ ಪರಿಣಾಮ ಆರೋಪಿಗೆ ಕಠಿಣ ಶಿಕ್ಷೆಯಾಗಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ವೈ.ಟಿ.ರಾಘವೇಂದ್ರ ತಿಳಿಸಿದರು.

ಪ್ರಕರಣ ಬೆಳಕಿಗೆ ಬಂದಿದ್ದು... ಸೌದೆ ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಬಾಲಕಿಯ ಶವ ಅನಾಥವಾಗಿ ಬಿದ್ದಿರುವುದನ್ನು ಕಂಡು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾನೆ. ಬಳಿಕ ಶವದ ಮರಣೋತ್ತರ ಪರೀಕ್ಷೆ ನಡೆದು ಅತ್ಯಾಚಾರ ಹಾಗೂ ಕೊಲೆ ನಡೆದಿರುವುದು ಬೆಳಕಿಗೆ ಬರುತ್ತದೆ. ಕೃತ್ಯ ನಡೆದ ದಿನ ಆರೋಪಿ ಬಟ್ಟೆ ಬದಲಿಸುವುದನ್ನು ನೋಡಿದ ವ್ಯಕ್ತಿಯು ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ನುಡಿದು ಆರೋಪಿಯನ್ನು ಗುರುತಿಸುತ್ತಾರೆ. ಜುವೆಲ್ಲರಿ ಅಂಗಡಿ ಮಾಲೀಕರು ಸಿಸಿಟಿವಿ ಕ್ಯಾಮೆರಾ ದಾಖಲೆ ಒದಗಿಸುವುದರ ಜತೆಗೆ ಕೋರ್ಟ್‌ಗೆ ಬಂದು ಸಾಕ್ಷ್ಯವನ್ನೂ ನುಡಿಯುತ್ತಾರೆ. ಹೀಗೆ, ಸಮಾಜದ ಸಹಕಾರದೊಂದಿಗೆ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗಿದೆ. ಬಾಲಕಿಯ ಸಾವಿಗೆ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ವಿಶೇಷ ಸರ್ಕಾರಿ ಅಭಿಯೋಜಕರಾದ ವೈ.ಟಿ.ರಾಘವೇಂದ್ರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು