ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ, ಮೀನುಗಾರಿಕಾ ಬೋಟ್‌ ವಿಮಾ ವ್ಯಾಪ್ತಿಗೊಳಪಡಿಸಿ: ಆಶೀಶ್ ಕುಮಾರ್

ಜಿಲ್ಲೆಯಲ್ಲಿ ಮಳೆಹಾನಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ
Last Updated 8 ಸೆಪ್ಟೆಂಬರ್ 2022, 13:00 IST
ಅಕ್ಷರ ಗಾತ್ರ

ಉಡುಪಿ: ರೈತರು ಬೆಳೆಯುವ ಎಲ್ಲ ಬಗೆಯ ಬೆಳೆಗಳು, ಮೀನುಗಾರಿಕಾ ಬೋಟ್ ಹಾಗೂ ಪರಿಕರಗಳನ್ನು ವಿಮಾ ವ್ಯಾಪ್ತಿಗೆ ತಂದರೆ ವೈಯಕ್ತಿಕ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ತಿಳಿಸಿದರು.

ಉಡುಪಿ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾಡಳಿತದಿಂದ ನಷ್ಟದ ಅಂಕಿ ಅಂಶ ಪಡೆದು ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಮತ್ತಿತರ ಬೆಳೆ ವಿಮೆಗೆ ಸರ್ಕಾರ ಪ್ರೀಮಿಯಂ ಹಣವನ್ನು ಶೇ 98ರಷ್ಟು ತುಂಬುತ್ತಿದ್ದು, ಬಾಕಿ ಶೇ 2ರಷ್ಟು ಹಣವನ್ನು ರೈತರು ಪಾವತಿಸಿದರೆ ಬೆಳೆ ನಷ್ಟ ಪರಿಹಾರ ಪಡೆಯಬಹುದು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಬರುವಂತೆ ಮಾಡಬೇಕು ಎಂದರು.

ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಬೋಟ್‌ಗಳು ನಾಶವಾದರೆ ವಿಮೆಯಡಿ ಹೆಚ್ಚಿನ ಪರಿಹಾರ ಪಡೆಯಲು ಸಾದ್ಯವಿದೆ. ನೆರೆ ರಕ್ಷಣಾ ಕಾರ್ಯದಲ್ಲಿ ಸಮುದಾಯದ ಜನರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ರಕ್ಷಣಾ ಸಾಮಗ್ರಿಗಳೊಂದಿಗೆ ತ್ವರಿತವಾಗಿ ರಕ್ಷಣಾ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭ ತಕ್ಷಣ ನೆರವಿಗೆ ಧಾವಿಸಲು ಉಡುಪಿ ಜಿಲ್ಲಾಡಳಿತ ರೂಪಿಸಿರುವ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ಮಾದರಿಯಾಗಿದೆ. 300ಕ್ಕೂ ಹೆಚ್ಚು ಆಪದ್ ಮಿತ್ರ ಸ್ವಯಂ ಸೇವಕರಿಗೆ ಹಾಗೂ 180ಕ್ಕೂ ಹೆಚ್ಚು ನೆಹರೂ ಯುವಕೇಂದ್ರದ ಸ್ವಯಂ ಸೇವಕರಿಗೆ ವಿಪತ್ತು ರಕ್ಷಣಾ ಕಾರ್ಯಾಚರಣೆ ತರಬೇತಿ ನೀಡಲಾಗಿದೆ ಎಂದರು.

ಬೆಳೆ ಹಾನಿ ಸಮೀಕ್ಷೆಯನ್ನು ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್ ಮೂಲಕ ಸಮೀಕ್ಷೆ ನಡೆಸಿ ನಿಖರ ವರದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಆ.5 ರಿಂದ 7ರವರೆಗೆ ಹೆಚ್ಚು ಮಳೆ ಸುರಿದು ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಕಡಲ್ಕೊರೆತ ತಡೆಗೆ ಕಡಲ ಕಿನಾರೆಯಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿದ್ದರೂ ಹೊಸ ಜಾಗದಲ್ಲಿ ಕಡಲ್ಕೊರೆತ ಉಂಟಾಗುತ್ತಿದೆ. ನೆರೆ ಬಂದರೆ ಎದುರಿಸಲು ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಸರ್ವ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ಕೇಂದ್ರ ಹಣಕಾಸು ಇಲಾಖೆಯ ಉಪ ನಿರ್ದೇಶಕ ಮಹೇಶ್ ಕುಮಾರ್, ಕೇಂದ್ರ ಇಂಧನ ಇಲಾಖೆಯ ಸಹಾಯಕ ನಿರ್ದೇಶಕಿ ಭವ್ಯಾ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಇದ್ದರು.

ಸಭೆಯ ನಂತರ ಕೇಂದ್ರ ತಂಡದ ಅಧಿಕಾರಿಗಳು ಮಳೆ ಹಾನಿಗೀಡಾದ ಜಿಲ್ಲೆಯ ಮರವಂತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT