ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಕೃಷಿಕರ ಅನ್ನ ಕಸಿದ ಸೀತಾ ನದಿ ಪ್ರವಾಹ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಿವಿಧೆಡೆ ನೆರೆಗೆ ಬತ್ತದ ಕೃಷಿ ನಾಶ
ನವೀನ್‌ ಕುಮಾರ್‌ ಜಿ.
Published : 6 ಆಗಸ್ಟ್ 2024, 6:12 IST
Last Updated : 6 ಆಗಸ್ಟ್ 2024, 6:12 IST
ಫಾಲೋ ಮಾಡಿ
Comments

ಉಡುಪಿ: ಐದು ಎಕರೆ ಗದ್ದೆ ಗೇಣಿಗೆ ಪಡೆದು, ₹50 ಸಾವಿರ ಖರ್ಚು ಮಾಡಿ ಭತ್ತದ ಸಸಿ ನಾಟಿ ಮಾಡಿಸಿದ್ದೆ, ಜಡಿ ಮಳೆಗೆ ಪ್ರವಾಹ ಬಂದು ಒಂಬತ್ತು ದಿನಗಳಾದರೂ ಗದ್ದೆಯಿಂದ ನೀರು ಇಳಿಯಲೇ ಇಲ್ಲ. ಈಗ ಭತ್ತದ ಸಸಿ ಕೊಳೆತು ಹೋಗಿದೆ. ಹಾಕಿದ ಬಂಡವಾಳವೂ ನೀರಿನಲ್ಲಿ ಕೊಚ್ಚಿ ಹೋಗಿದೆ...

ಇದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಪಡುನೀಲಾವರದ ರೈತ ಬಾವ್ತೀಸ್‌ ಡಿಸೋಜಾ ಅವರ ನೋವಿನ ಮಾತು.

ಬಾವ್ತೀಸ್‌ ಅವರ ಎರಡು ಎಕರೆ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದೆ. ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಉಕ್ಕಿ ಹರಿದ ಸೀತಾನದಿಯು ಸಮೀಪದ ಗದ್ದೆಗಳಿಗೆ ನುಗ್ಗಿ ಈ ಅವಾಂತರ ಸೃಷ್ಟಿಸಿದೆ.

ಈ ಬಾರಿ ಎರಡು ಸಲ ಭಾರಿ ನೆರೆ ಬಂದಿದೆ. ತುಂಬಾ ದಿನ ನೀರಿನಲ್ಲಿ ಮುಳುಗಿದ್ದ ಕಾರಣ ಸಸಿಗಳು ಸಂಪೂರ್ಣ ಕೊಳೆತು ಹೋಗಿವೆ. ಮತ್ತೆ ಹಣ ಖರ್ಚು ಮಾಡಿ ಅದೇ ಗದ್ದೆಯನ್ನು ಹದಗೊಳಿಸಿ ಸಸಿ ನಾಟಿ ಮಾಡಿದರೂ ಬೆಳೆ ಕೈಗೆ ಬರುವ ವಿಶ್ವಾಸ ಇಲ್ಲ. ನಮ್ಮ ಪ್ರದೇಶದಲ್ಲಿ ಅಂದಾಜು 30 ಎಕರೆ ಕೃಷಿ ನಾಶವಾಗಿದೆ ಎಂದೂ ಬಾವ್ತೀಸ್‌ ಹೇಳುತ್ತಾರೆ.

ನೀಲಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ ಕುದ್ರು, ಎಳ್ಳಂಪಳ್ಳಿ ಮೊದಲಾದೆಡೆಗಳಲ್ಲಿ ಹಲವು ಎಕರೆ ಪ್ರದೇಶಗಳಲ್ಲಿ ಭತ್ತದ ಕೃಷಿ ನಾಶವಾಗಿದೆ.

ಇಲ್ಲಿನ ರೈತರು ಗದ್ದೆ ಉಳುಮೆ, ನಾಟಿ ಮಾಡಲು ಭದ್ರಾವತಿಯಿಂದ ಕೃಷಿಯಂತ್ರಗಳನ್ನು ತರಿಸುತ್ತಾರೆ. ಈ ಬಾರಿ ಯಂತ್ರಗಳಿಗೆ ನೀಡಿದ ಬಾಡಿಗೆಯೂ ನಷ್ಟವಾಗಿದೆ ಎನ್ನುತ್ತಾರೆ ಕೃಷಿಕರು.

ನಮ್ಮ ಪ್ರದೇಶದಲ್ಲಿ ಈ ಬಾರಿ ಅಂದಾಜು 60 ಎಕರೆಯಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ನಾಶವಾಗಿದೆ. ಸಸಿ ನಾಟಿ ಮಾಡಿ ಎರಡು ತಿಂಗಳಾಗುವ ಮೊದಲು ಎರಡು ಬಾರಿ ಪ್ರವಾಹ ಬಂದು ಎಲ್ಲಾ ಹಾಳಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಮಧ್ಯಸ್ಥಬೆಟ್ಟುವಿನ ರೈತ ರಮೇಶ್‌ ಆಗ್ರಹಿಸಿದರು.

ಕುಂದಾಪುರ ತಾಲ್ಲೂಕಿನ ಜೋರಾಡಿ ಆಸುಪಾಸಿನ ಪ್ರದೇಶದಲ್ಲೂ ಭತ್ತದ ಕೃಷಿ ನಾಶವಾಗಿದೆ. ಬೈಂದೂರು ತಾಲ್ಲೂಕಿನ ವ್ಯಾಪ್ತಿಯಲ್ಲೂ ಹಲವು ಎಕರೆ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ.

192.65 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ: ಉಡುಪಿ ಜಿಲ್ಲೆಯಲ್ಲಿ ಬೆಳೆ ಹಾನಿಯ ಸಮೀಕ್ಷೆ ಪ್ರಗತಿಯಲ್ಲಿದ್ದು, ಜುಲೈನಿಂದ ಈವರೆಗೆ 192.65 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ಬೆಳೆ ಹಾನಿ ಕುರಿತು ರೈತರು ನೀಡುವ ಮಾಹಿತಿಯನ್ನೂ ಪಡೆಯಲಾಗುತ್ತಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಭತ್ತದ ಕೃಷಿ ಮಾಡುವವರ ಸಂಖ್ಯೆ ಇಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕೃಷಿ ಮಾಡಿದರೆ ನೆರೆಯಿಂದಾಗಿ ಬೆಳೆಯನ್ನೇ ಕಳೆದುಕೊಳ್ಳುತ್ತಿದ್ದೇವೆ
ರಾಜೀವ ಶೆಟ್ಟಿ, ರೈತ, ಮಧ್ಯಸ್ಥರ ಬೆಟ್ಟು
ಬ್ರಹ್ಮಾವರ ತಾಲ್ಲೂಕಿನ ಮಧ್ಯಸ್ಥರಬೆಟ್ಟುವಿನ ಗದ್ದೆಯೊಂದರಲ್ಲಿ ಬತ್ತದ ಸಸಿ ಕೊಳೆತಿರುವುದು
ಬ್ರಹ್ಮಾವರ ತಾಲ್ಲೂಕಿನ ಮಧ್ಯಸ್ಥರಬೆಟ್ಟುವಿನ ಗದ್ದೆಯೊಂದರಲ್ಲಿ ಬತ್ತದ ಸಸಿ ಕೊಳೆತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT