ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯ ಸಮಿತಿ ಸಭೆ: ಎಚ್‌1 ಎನ್1 ಬಗ್ಗೆ ಜಾಗೃತಿ ಮೂಡಿಸಿ

ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಎಚ್1 ಎನ್1 ರೋಗದ ಲಕ್ಷಣಗಳು, ಹರಡುವಿಕೆ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 2019ರಲ್ಲಿ 424 ಎಚ್1 ಎನ್1 ಪ್ರಕರಣಗಳು ಕಂಡುಬಂದಿದ್ದು, 10 ಜನರು ಮೃತಪಟ್ಟಿದ್ದರು. 2020ರ ಫೆಬ್ರವರಿವರೆಗೆ 55 ಪ್ರಕರಣ ದಾಖಲಾಗಿದ್ದು, ಯಾರೂ ಸಾವನ್ನಪ್ಪಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಎಚ್1 ಎನ್1 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರಲ್ಲಿ ರೋಗದ ಬಗ್ಗೆ ಅರಿವಿನ ಕೊರತೆ ಇದ್ದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಜಪಾನೀಸ್ ಎನ್ಸೆಫಲೈಟಿಸ್ ರೋಗದ 5 ಪ್ರಕರಣಗಳು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. 7 ಚಿಕೂನ್ ಗುನ್ಯ ಪ್ರಕರಣ ಪತ್ತೆಯಾಗಿದ್ದು, ನಾಲ್ವರಲ್ಲಿ ರೋಗ ಲಕ್ಷಣಗಳು ಧೃಢಪಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಮಲೇರಿಯಾ ಪ್ರಕರಣಗಳು ಕಡಿಮೆ ಇವೆ.

ಡೆಂಗಿ ಪ್ರಕರಣಗಳು ರಾಜ್ಯದಾದ್ಯಂತ ಹೆಚ್ಚಿದ್ದು, ಉಡುಪಿಯಲ್ಲಿ ಈ ವರ್ಷ 25 ಪ್ರಕರಣಗಳು ದಾಖಲಾಗಿವೆ. ಸಾಂಕ್ರಮಿಕ ರೋಗಗಳು ಹೆಚ್ಚಾಗಿ ಸೊಳ್ಳೆಗಳಿಂದ ಹರಡುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡಬೇಕು ಎಂದು ಜಿಲ್ಲಾ ಕೀಟ ಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.

ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಕಡೆಗಳಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ರೋಗ ಹರಡುವ ಭೀತಿ ಇದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಮಾತನಾಡಿ, ಮಂಗನ ಖಾಯಿಲೆ ಮಂಗನಲ್ಲಿರುವ ಉಣ್ಣಿಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಅರಣ್ಯದಲ್ಲಿ ವಾಸಿಸುವ ಹಾಗೂ ಕಾಡಿಗೆ ಹೋಗುವವರಿಗೆ ಉಣ್ಣಿ ಕಚ್ಚಿದಾಗ ವೈರಸ್‍ಗಳು ಮನುಷ್ಯರ ದೇಹ ಪ್ರವೇಶಿಸುತ್ತವೆ.

ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 2 ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದಿದ್ದು, ಈ ಬಾರಿ ಪ್ರಕರಣ ದಾಖಲಾಗಿಲ್ಲ. ಮಂಗನ ಕಾಯಿಲೆಯಿಂದ ಬಳಲುತ್ತಿರುವ ವಿವಿಧ ಜಿಲ್ಲೆಗಳ 8 ಮಂದಿ ಕೆಎಂಸಿಯಲ್ಲಿ ದಾಖಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಮಂಗಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದರು.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಮೂಲಗಳಿಂದ ಬರುವ ನೀರಿನ ಪರೀಕ್ಷೆ ನಡೆಸಿದ್ದು, ಅಸುರಕ್ಷಿತ ನೀರನ್ನು ಕ್ಲೋರೀನ್ ಮೂಲಕ ಶುದ್ದೀಕರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ರೋಗದ ಪ್ರಕರಣಗಳು ಪತ್ತೆಯಾಗಿಲ್ಲ. ಚೀನಾದಿಂದ ಪ್ರವಾಸ ಬಂದ ಮೂವರ ರಕ್ತ ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವುದು ಧೃಢಪಟ್ಟಿದೆ ಎಂದು ಡಾ.ವಾಸುದೇವ ಉಪಾಧ್ಯಾಯ ತಿಳಿಸಿದರು.

ಜಿಲ್ಲೆಯಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತ ಲಸಿಕೆ ಸೇರಿದಂತೆ ಅಗತ್ಯ ಔಷಧ ಹಾಗೂ ಲಸಿಕೆಗಳ ದಾಸ್ತಾನು ಇದೆ ಎಂದು ಡಾ.ವಾಸುದೇವ ಭಟ್ ತಿಳಿಸಿದರು.

ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಆರ್.ಶೇಷಪ್ಪ, ಡಿಡಿಪಿಐ ಶೇಷಶಯನ ಕಾರಿಂಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಪಶುಸಂಗೋಪನೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT