ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈರೆತ ಸಾರ್ವಜನಿಕರು: ಕೋವಿಡ್‌ ಹೆಚ್ಚಳ: ಜಿಲ್ಲಾಧಿಕಾರಿ ಜಿ.ಜಗದೀಶ್ ಅಸಮಾಧಾನ

Last Updated 31 ಜುಲೈ 2021, 15:06 IST
ಅಕ್ಷರ ಗಾತ್ರ

ಉಡುಪಿ: ಸಾರ್ವಜನಿಕ ಸಮಾರಂಭಗಳಲ್ಲಿ ಮಾಸ್ಕ್ ಧರಿಸದೆ, ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸದ ಪರಿಣಾಮ ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇ 5ಕ್ಕೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಮುಗಿದಿಲ್ಲ. ಕೊರೊನಾ ಹೋಗಿದೆ ಎಂದು ಜನರು ಮೈಮರೆಯಬಾರದು ಎಂದರು.

ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮೊದಲು ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಾದರಿಯಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕರು, ಸಂಘ ಸಂಸ್ಥೆಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ದೇವಸ್ಥಾನಗಳಲ್ಲಿ ಜನ ಅಂತರ ಮರೆತು ಸೇರುತ್ತಿರುವುದು ಸರಿಯಲ್ಲ. ಇದರಿಂದ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಸುಲಭವಾಗಿ ಕೊರೊನಾ ಹರಡುತ್ತದೆ. ಕೇರಳದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗಡಿಯಲ್ಲಿ ಚೆಕ್ ಪೋಸ್ಟ್ ರಚನೆ ಮಾಡಲಾಗಿದ್ದು, ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಕೋವಿಡ್‌ ನೆಗೆಟಿವ್ ವರದಿ ಇಲ್ಲದೆ ಬರುವಂತಿಲ್ಲ ಎಂದರು.

ಜಿಲ್ಲೆಯಲ್ಲಿ ತಿಂಗಳಿಂದ ಪ್ರತಿದಿನ 100 ಸೋಂಕಿತ ಪ್ರಕರಣಗಳು ದೃಢಪಡುತ್ತಿವೆ. ಶೇ 3 ಇದ್ದ ಪಾಸಿಟಿವಿಟಿ ದರ 5ಕ್ಕೆ ಹೆಚ್ಚಾಗಿದೆ. ಕೇರಳ ಮತ್ತು ಮಹಾರಾಷ್ಟ್ರದೊಂದಿಗೆ ಉಡುಪಿ ನಿಕಟ ಸಂಪರ್ಕದಲ್ಲಿರುವುದರಿಂದ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ ಎಂದರು.

ಕೋವಿಡ್‌ ಹೆಚ್ಚಾಗುತ್ತಿದ್ದರೂ ಎಗ್ಗಿಲ್ಲದೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಆಯೋಜಕರೇ ಮೂರನೇ ಅಲೆಗೆ ಕಾರಣರಾಗುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಸಾವಿರಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಎರಡನೇ ಅಲೆ ಮುಂದುವರಿದಿದೆಯೇ, ಮೂರನೇ ಅಲೆ ಬಂದಿದೆಯೇ ಎಂದು ತಜ್ಞರು ನಿರ್ಧಾರ ಮಾಡಬೇಕು. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಂದಂಕಿಗೆ ಇಳಿಮುಖವಾಗಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಜಿಲ್ಲೆಯಲ್ಲಿ ಕೊರೊನಾ ಸ್ಥಿತಿ ಗತಿಗಳ ಬಗ್ಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಯಲಿದ್ದು, ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT