ಗುರುವಾರ , ಜೂನ್ 30, 2022
27 °C
ಕೊಲ್ಲೂರು, ಮುದೂರು, ಜಡ್ಕಲ್‌ನಲ್ಲಿ ಹೆಚ್ಚು ಪ್ರಕರಣಗಳು ದೃಢ

ಉಡುಪಿಯಲ್ಲಿ ಡೆಂಗಿ ಉಲ್ಬಣ; 160 ಪ್ರಕರಣ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು 160ಕ್ಕೂ ಹೆಚ್ಚು ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೂ ಪತ್ತೆಯಾಗಿರುವ ಡೆಂಗಿ ಪ್ರಕರಣಗಳ ಪೈಕಿ 120 ಪ್ರಕರಣಗಳು ಬೈಂದೂರು ತಾಲ್ಲೂಕಿನ ಕೊಲ್ಲೂರು ಭಾಗದಲ್ಲಿ ಕಂಡುಬಂದಿದೆ. ಜಿಲ್ಲೆಯ ಇತರೆಡೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ.

ಬೆಂಗಳೂರು, ಮೈಸೂರು ಜಿಲ್ಲೆ ಹೊರತುಪಡಿಸಿದರೆ ಉಡುಪಿಯಲ್ಲಿ ಅತಿ ಹೆಚ್ಚು ಡೆಂಗಿ ಕಾಣಿಸಿಕೊಂಡಿರುವುದು ಹಾಗೂ ಡೆಂಗಿ ಚಿಕಿತ್ಸೆಗೆ ಸ್ಪಂದಿಸದೆ ಈಚೆಗೆ ವೃದ್ಧರೊಬ್ಬರು ಮೃತಪಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಡೆಂಗಿ ಹೆಚ್ಚಳಕ್ಕೆ ಕಾರಣ:

ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶದಲ್ಲಿ ನೂರಾರು ಹೆಕ್ಟೇರ್‌ನಲ್ಲಿ ರಬ್ಬರ್ ಪ್ಲಾಂಟೇಷನ್‌ ಇದೆ. ಇಲ್ಲಿ ರಬ್ಬರ್ ಹಾಲಿನ ಸಂಗ್ರಹಕ್ಕೆ ಇಟ್ಟಿರುವ ಗೆರಟೆಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಡೆಂಗಿ ರೋಗಕ್ಕೆ ಕಾರಣವಾಗುವ ಏಡಿಸ್ ಲಾರ್ವಾಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತಿರುವುದರಿಂದ ಕೊಲ್ಲೂರು ಭಾಗದಲ್ಲಿ ಡೆಂಗಿ ಹೆಚ್ಚಾಗಿದೆ.

ಕೊಲ್ಲೂರಿನಲ್ಲಿ ಅನಾನಸ್ ಹಾಗೂ ಅಡಿಕೆ ಬೆಳೆಯನ್ನೂ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಅನಾನಸ್‌ ಎಲೆಗಳ ಮೇಲೆ ಹಾಗೂ ಅಡಿಕೆ ಹಾಳೆಗಳಲ್ಲಿ ನಿಲ್ಲುವ ನೀರಿನಲ್ಲಿ ಡೆಂಗಿ ಹರಡುವ ಸೊಳ್ಳೆಗಳು ಉತ್ಪತ್ತಿಯಾಗಿ, ಡೆಂಗಿ ಉಲ್ಬಣಗೊಂಡಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಆರೋಗ್ಯ ಇಲಾಖೆ ಕ್ರಮ ಏನು?

ಡೆಂಗಿ ನಿಯಂತ್ರಣಕ್ಕೆ ರಬ್ಬರ್ ತೋಟಗಳ ಮಾಲೀಕರಿಗೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಿದ್ದಾರೆ. ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಡೆಂಗಿ ಜ್ವರ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದೆ. ಡೆಂಗಿ ಪ್ರಕರಣಗಳನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್.

ಚಿಕಿತ್ಸೆಗೆ ಬೆಡ್ ಮೀಸಲು:

ಡೆಂಗಿ ಪೀಡಿತರಿಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್ ತೆರೆಯಲಾಗಿದ್ದು, ತಲಾ 25 ಬೆಡ್‌ಗಳನ್ನು ಪುರುಷರು ಹಾಗೂ ಮಹಿಳೆಯರಿಗೆ ಹಾಗೂ 10 ಬೆಡ್‌ಗಳನ್ನು ಮಕ್ಕಳಿಗೆ ಮೀಸಲಿರಿಸಲಾಗಿದೆ. ಅಗತ್ಯವಿದ್ದವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಪೇಟ್ಲೇಟ್‌ಗಳ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯಾಧಿಕಾರಿಗಳನ್ನು ಒಳಗೊಂಡ 13 ತಂಡಗಳು ಮುದೂರು ಮತ್ತು ಜಡ್ಕಲ್‌ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಡೆಂಗಿ ಅರಿವು ಮೂಡಿಸುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಲಾಗುತ್ತಿದೆ. ಉಚಿತವಾಗಿ ಸೊಳ್ಳೆ ಪರದೆ ಹಾಗೂ ತಲಾ 2 ಬಾಟೆಲ್ ಡಿಎಂಪಿ ತೈಲವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು ಪ್ರಶಾಂತ್ ಭಟ್‌.

ಡೆಂಗಿ ಪೀಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 2 ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಫಾಗಿಂಗ್ ನಡೆಯುತ್ತಿದೆ. ಬೀದಿ ನಾಟಕ, ಸಾಕ್ಷ್ಯಚಿತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿ, ಚರ್ಚ್‌ಗಳಲ್ಲಿನ ಡೆಂಗಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸ್ತುತ ಮಳೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ಮುದೂರು ಉಪ ಆರೋಗ್ಯ ಕೇಂದ್ರ, ಕೊಲ್ಲೂರು, ಹಳ್ಳಿಹೊಳೆ, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಫೀವರ್ ಕ್ಲಿನಿಕ್‌ಗಳಲ್ಲಿ ಪರೀಕ್ಷಿಸಿಕೊಳ್ಳಬೇಕು. ಸೊಳ್ಳೆ ಕಡಿತದಿಂದ ಪಾರಾಗಲು ಮೈ ಮುಚ್ಚುವಂತಹ ಬಟ್ಟೆ ಧರಿಸಬೇಕು. ಮನೆಯಲ್ಲಿ ಸೊಳ್ಳೆ ಪರದೆ ಬಳಸಬೇಕು. ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಡಾ.ಪ್ರಶಾಂತ್ ಭಟ್ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು