ಸೋಮವಾರ, ಜೂನ್ 14, 2021
28 °C
ಡಾ. ಉಡುಪರ ಹಳ್ಳಿ ವೈದ್ಯ ಸೇವೆಗೆ ಸುವರ್ಣ ಸಂಭ್ರಮ, ಸನ್ಮಾನ

ಡಾ. ಉಡುಪರ ಹಳ್ಳಿ ವೈದ್ಯ ಸೇವೆಗೆ ಸುವರ್ಣ ಸಂಭ್ರಮ: ತಿಂಗಳಲ್ಲಿ ಒಂದು ದಿನ ಉಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಗ್ರಾಮೀಣ ಭಾಗದಲ್ಲಿ ಸುದೀರ್ಘ ವೈದ್ಯಕೀಯ ಸೇವೆ ಮಾಡಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಡಾ.ಪರಮೇಶ್ವರ ಉಡುಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಸಾಮಾಜಿಕ ಕಾರ್ಯಕರ್ತ ಉದ್ಯಮಿ ಸುರೇಶ್ ಶೆಟ್ಟಿ ಆರ್ಡಿ ಮಾತನಾಡಿ, ‘ಕೋವಿಡ್‌ ಹ ಸಂಕಷ್ಟ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡುವ ಮೂಲಕ ಡಾ. ಉಡುಪ ಅವರು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಮಾಣಿ ಡಾಕ್ಟರ್ ಎಂದೇ ಖ್ಯಾತಿಗಳಿಸಿದ ಇವರು ಆರ್ಡಿ, ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ ಭಾಗದ ಜನತೆಗೆ ಐವತ್ತು ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದ್ದಾರೆ. ಸರಳತೆಯ ಪ್ರತಿರೂಪವಾಗಿರುವ ಇವರ ಕೈಗುಣ ಎಂತಹ ರೋಗವನ್ನೂ ಗುಣಪಡಿಸುತ್ತದೆ. ಆರ್ಡಿಯಲ್ಲಿ ವೈದ್ಯಕೀಯ ಸೇವೆ ಆರಂಭಿಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವುವುದು ನಮ್ಮೂರಿನ ಸೌಭಾಗ್ಯ. ಇನ್ನೂ ಹೆಚ್ಚಿನ ಸೇವೆ ಹುಟ್ಟೂರಿಗೆ ಸಿಗುವಂತಾಗಲಿ’ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಉಡುಪ, ‘ಹುಟ್ಟಿದ ಹಳ್ಳಿಯಲ್ಲೇ ಸೇವೆ ಮಾಡುವುದಾದರೆ ವೈದ್ಯಕೀಯ ಕೋರ್ಸ್ ಮಾಡಬಹುದು ಎನ್ನುವ ತಂದೆಯ ಮಾತಿಗೆ ಕಟಿಬದ್ದನಾಗಿ ವೈದ್ಯನಾದೆ. ಸರ್ಕಾರಿ ಸೇವೆಗೆ ಅವಕಾಶ ದೊರೆತರೂ ತೆರಳದೆ, ಆರ್ಡಿಯಲ್ಲಿ ಕ್ಲಿನಿಕ್ ಆರಂಭಿಸಿದೆ. ಮೂಲ ಸೌಕರ್ಯವಿಲ್ಲದ ಕಾಲದಲ್ಲಿ ಹಗಲು ರಾತ್ರಿಎನ್ನದೆ ನಡೆದಾಡಿ ಸೇವೆ ನೀಡಿದ ಸಂತೃಪ್ತಿಯಿದೆ. ಗ್ರಾಮೀಣ ಭಾಗದಲ್ಲಿಯೇ ಸೇವೆ ಸಲ್ಲಿಸುತ್ತಾ ಐವತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಈ ವರ್ಷ ಪ್ರತಿ ತಿಂಗಳ 28ನೇ ದಿನಾಂಕದಂದು ಆರ್ಡಿಯಲ್ಲಿರುವ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಉಚಿತ ಸೇವೆ ನೀಡಲಿದ್ದೇನೆ’ ಎಂದರು.

ಉದ್ಯಮಿ ಪ್ರಶಾಂತ್ ಶೆಟ್ಟಿ ಆರ್ಡಿ, ಸುರೇಶ್ ಶೆಟ್ಟಿ ಆರ್ಡಿ, ಉದಯ ಪ್ರಸಾದ್ ಆರ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಯದೇವ ಹೆಗ್ಡೆ ನೂಜೆಟ್ಟು, ಗ್ರಾಮ ಪಂಚಾಯಿತಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಉಮೇಶ್ ಆರ್ಡಿ ಕೆರ್ಜಾಡಿ, ಬಾಲಕೃಷ್ಣ ಶೆಣೈ, ಪ್ರಕಾಶ್ ಶೆಣೈ, ಅನಿವಾಸಿ ಭಾರತೀಯ ಆರ್ಡಿ ಮಳಿಗೆಮನೆ ಸಂತೋಷ ಶೆಟ್ಟಿ, ಆನಂದ ಶೆಟ್ಟಿ ನೀರ್‍ಗಡಿಗೆ, ಅರುಣ್ ಅರಸಮ್ಮಕಾನು, ಪವನ್ ಶೆಟ್ಟಿ ಆರ್ಡಿ  ಇದ್ದರು.

ಕೊರೊನಾ ವಾರಿಯರ್‌ ‘ಮಾಣಿ ಡಾಕ್ಟರ್‘: ಸರ್ಕಾರಿ ಸೇವೆಗೆ ಅವಕಾಶ ದೊರತರೂ ಒಲವು ತೋರದೆ, ಗ್ರಾಮೀಣ ಭಾಗದ ಹುಟ್ಟೂರಿನಲ್ಲಿ ಸೇವೆ ಸಲ್ಲಿಸಲು ಆರ್ಡಿಯಲ್ಲಿ ಕ್ಲಿನಿಕ್ ಆರಂಭಿಸಿ ಜನಾನುರಾಗಿಯಾಗಿದ್ದರು. ಆರ್ಡಿ, ಮಡಾಮಕ್ಕಿ, ಅರಸಮ್ಮಕಾನು, ಶೇಡಿಮನೆ, ಬೆಪ್ಡೆ, ಅಲ್ಬಾಡಿ ಪರಿಸರದಲ್ಲಿ ಪ್ರಥಮ ವೈದ್ಯರು ಎನ್ನುವ ಖ್ಯಾತಿಯೊಂದಿಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಾ ಜನಮಾನಸದಲ್ಲಿ ‘ಮಾಣಿ ಡಾಕ್ಟರ್‘ ಎಂದೇ ಖ್ಯಾತರಾಗಿರುವ ಉಡುಪ ಅವರ ವೈದ್ಯ ವೃತ್ತಿಗೆ ಐವತ್ತರ ಸಂಭ್ರಮ. ‘ಕೊರೊನಾ ವಾರಿಯರ್‌’ ಆಗಿಯೂ ಉತ್ತಮ ಸೇವೆ ನೀಡುತ್ತಿರುವ ಡಾ.ಉಡುಪ ಅವರನ್ನು ಬುಧವಾರ ಗ್ರಾಮಸ್ಥರು ಗೌರವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು