ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಪೂನಾ ಒಪ್ಪಂದ ತಿರಸ್ಕಾರ: ದಲಿತರಿಗೆ ಅನ್ಯಾಯ’

ಈಶ್ವರಪ್ಪ, ಬಿ.ಸಿ.ನಾಗೇಶ್‌ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
Last Updated 24 ಸೆಪ್ಟೆಂಬರ್ 2022, 15:51 IST
ಅಕ್ಷರ ಗಾತ್ರ

ಉಡುಪಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತಾಪಿಸಿದ್ದ ದಲಿತರಿಗೆ ನ್ಯಾಯ ಕೊಡುವಂತಹ, ಶಕ್ತಿ ತುಂಬುವಂತಹ ಪೂನಾ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ದಲಿತರಿಗೆ ಅನ್ಯಾಯ ಎಸಗಲಾಯಿತು ಎಂದು ಚಿಂತಕ ಕೆ.ಫಣಿರಾಜ್ ಅಭಿಪ್ರಾಯಪಟ್ಟರು.

ಪೂನಾ ಒಪ್ಪಂದದಿಂದ ದಲಿತರಿಗೆ ಆಗಿರುವ ಅನ್ಯಾಯ ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಶನಿವಾರ ನಗರದ ಹುತಾತ್ಮರ ಸ್ಮಾರಕದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪೂನಾ ಒಪ್ಪಂದವನ್ನು ಜಾರಿ ಮಾಡುವ ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಹಾಕುವ ನಿರ್ಧಾರವನ್ನು ದಲಿತರು ಮಾಡಬೇಕು. ಈ ಮೂಲಕ ರಾಜಕೀಯ ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಜಾತಿವಾದಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್‌ ಮೌಢ್ಯವನ್ನು ಒಳಗೊಂಡಿರುವ ವೇದ ಗಣಿತವನ್ನು ಮಕ್ಕಳಿಗೆ ಕಲಿಸುವ ಹುನ್ನಾರ ಮಾಡುತ್ತಿದ್ದಾರೆ. ತರಬೇತಿಗೆ 60 ಕೋಟಿ ಮಂಜೂರು ಮಾಡುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಬಿಜೆಪಿ ನಾಯಕ ಈಶ್ವರಪ್ಪ ಅವರ ಮೀಸಲಾತಿ ವಿರೋಧಿ ಹೇಳಿಕೆಗಳು ಹಾಗೂ ಶಿಕ್ಷಣ ಸಚಿವ ವೇದಗಣಿತ ಕಲಿಸಿಕೊಡುವ ಧೋರಣೆಗಳು ಖಂಡನೀಯ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಬದಲು ಎಲ್ಲರೂ ಬದುಕುವ ರಾಷ್ಟ್ರ ನಿರ್ಮಾಣ ಮಾಡುವ ಅಗತ್ಯವಿದೆ, ಆದರೆ, ಪ್ರಧಾನಿ ಮೋದಿ ಸ್ನೇಹಿತರಾದ ಅದಾನಿ ಅಂಬಾನಿಯ ರಾಷ್ಟ್ರ ನಿರ್ಮಾಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಗೂ ಮುನ್ನ ನಗರದ ಬೋರ್ಡ್‌ ಹೈಸ್ಕೂಲ್‌ನಿಂದ ಹುತಾತ್ಮ ಸ್ಮಾರಕದ ವರೆಗೂ ಜಾಥಾ ನಡೆಸಲಾಯಿತು. ಈಶ್ವರಪ್ಪ ಹಾಗೂ ಬಿ.ಸಿ.ನಾಗೇಶ್ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT