ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕ್ಯಾಮೆರಾಗಳ ಕಾರ್ಯ ಸ್ಥಗಿತ; ಸುರಕ್ಷತೆಗೆ ಬೇಕು ಸಿಸಿಟಿವಿ ಕಣ್ಗಾವಲು

Published 20 ನವೆಂಬರ್ 2023, 8:26 IST
Last Updated 20 ನವೆಂಬರ್ 2023, 8:26 IST
ಅಕ್ಷರ ಗಾತ್ರ

ಉಡುಪಿ: ನ.12ರಂದು ಉಡುಪಿ ಜಿಲ್ಲೆಯ ಜನರು ಬೆಚ್ಚಿ ಬೀಳುವಂತಹ ಘಟನೆ ನಡೆಯಿತು. ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಹಾಡಹಗಲೇ ನಡೆದ ಭೀಕರ ಕೊಲೆ ಉಡುಪಿ ನಗರ ನಿಜವಾಗಿಯೂ ಸುರಕ್ಷಿತವೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಉಡುಪಿ ನಗರಕ್ಕೆ ಸಮರ್ಥ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇಲ್ಲದಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಉಡುಪಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜ್ಯಕ್ಕೆ ಮಾದರಿಯಾಗಿ ಬೆಳೆದಿರುವ ಜಿಲ್ಲೆ. ಉಡುಪಿ ಧಾರ್ಮಿಕವಾಗಿ ಶ್ರೀಮಂತವಾಗಿದ್ದರೆ, ಉಡುಪಿಗೆ ಹೊಂದಿಕೊಂಡಿರುವ ಮಣಿಪಾಲ ನಗರ ಆರೋಗ್ಯ, ಶಿಕ್ಷಣ ಹಾಗೂ ಬ್ಯಾಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಉಡುಪಿಯ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ನೂರಾರು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಸುಂದರ ಕಡಲ ಕಿನಾರೆಗಳು, ಕಣ್ಮನ ಸೆಳೆಯುವ ನದಿ ಸಮುದ್ರ ಸೇರುವ ಹಿನ್ನೀರಿನ ತಾಣಗಳು, ಪಶ್ಚಿಮ ಘಟ್ಟ ಹಾಗೂ ಕರಾವಳಿಯ ರಮಣೀಯ ಸ್ಥಳಗಳನ್ನು ಒಡಲಲ್ಲಿಟ್ಟುಕೊಂಡಿದೆ ಉಡುಪಿ.

ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿರುವ, ರಾಜ್ಯದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅಗತ್ಯವಾಗಿ ಬೇಕಿರುವ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಅತಿ ಹೆಚ್ಚು ಜನದಟ್ಟಣೆ ಇರುವ ಉಡುಪಿ ನಗರದ ಆಯಕಟ್ಟಿನ ಜಾಗಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ.

ಅಪರಾಧ ಕೃತ್ಯಗಳನ್ನು ತಡೆಯುವಲ್ಲಿ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುವ ಸಿಸಿಟಿವಿ ಕ್ಯಾಮೆರಾಗಳು ಉಡುಪಿಯಲ್ಲಿ ಸಮರ್ಪಕವಾಗಿ ಅಳವಡಿಸದ ಪರಿಣಾಮ ಪರೋಕ್ಷವಾಗಿ ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಗಿದೆ.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಕಳವು, ಸುಲಿಗೆ, ಕೊಲೆ, ದರೋಡೆಯಂತಹ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಹರಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮೋಸ್ಟ್‌ ವಾಟೆಂಡ್‌ ಕ್ರಿಮಿನಲ್‌ಗಳ ಮೇಲೆ ಹದ್ದಿನ ಕಣ್ಣಿಡಲೂ ಸಾಧ್ಯವಾಗುತ್ತಿಲ್ಲ.

ಸಣ್ಣ ಪುಟ್ಟ ಪ್ರಕರಣಗಳನ್ನು ಪತ್ತೆಹಚ್ಚಲೂ ಪೊಲೀಸರು ನಗರದ ಖಾಸಗಿ ವಾಣಿಜ್ಯ ಮಳಿಗೆಗಳು, ಮನೆಗಳ ಮಾಲೀಕರು, ವಿದ್ಯಾಸಂಸ್ಥೆಗಳು, ಬ್ಯಾಂಕ್‌ ಕಚೇರಿಗಳನ್ನು ಸಂಪರ್ಕಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸಾಕ್ಷ್ಯಗಳು ಲಭ್ಯವಾಗದೆ ಆರೋಪಿಗಳ ಪತ್ತೆ ವಿಳಂಬವಾಗುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿ.

ಕೆಲವೊಮ್ಮೆ ಖಾಸಗಿ ಸಂಸ್ಥೆಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಆರೋಪಿಯ ಗುರುತು ಪತ್ತೆಹಚ್ಚುವುದೇ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.

ಉಡುಪಿ ನಗರದ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ ಎಂದಲ್ಲ. ಹಲವು ವರ್ಷಗಳ ಹಿಂದೆ ಮಣಿಪಾಲದ ಟೈಗರ್‌ ಸರ್ಕಲ್‌, ಸಿಂಡಿಕೇಟ್‌ ಸರ್ಕಲ್‌, ಉಡುಪಿಯ ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ವೃತ್ತ, ಕರಾವಳಿ ಬೈಪಾಸ್‌, ತ್ರಿವೇಣಿ ಸರ್ಕಲ್‌, ಸಂತೆಕಟ್ಟೆ ಜಂಕ್ಷನ್‌, ಮಲ್ಪೆ ಬಸ್‌ನಿಲ್ದಾಣ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ನಿರ್ವಹಣೆ ಕೊರತೆಯಿಂದ ಇವುಗಳಲ್ಲಿ ಬಹುತೇಕ ಕ್ಯಾಮೆರಾಗಳು ಸದ್ಯ ಕಾರ್ಯ ನಿರ್ವಹಿಸುತ್ತಿಲ್ಲ. ನಗರದ ಅಲ್ಲಲ್ಲಿ ಇಂದಿಗೂ ಕೆಟ್ಟುನಿಂತ ಸಿಸಿಟಿವಿ ಕ್ಯಾಮೆರಾಗಳ ಅವಶೇಷಗಳನ್ನು ಕಾಣಬಹುದು. ಹೊಲಗಳಲ್ಲಿ ಬೆಳೆ ರಕ್ಷಣೆಗೆ ಹಾಕಿರುವ ಬೆಚ್ಚಪ್ಪನಂತೆ ನಿಂತಿರುವ ಸಿಸಿಟಿವಿ ಕ್ಯಾಮೆರಾಗಳಿಂದ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಸಿಸಿಟಿವಿ ಕಣ್ಗಾವಲು ಯಾಕೆ ಬೇಕು: ನಗರದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರವಾಸಿ ತಾಣಗಳಿಗೆ ಯಾರೆಲ್ಲ ಭೇಟಿ ನೀಡುತ್ತಾರೆ ಎಂದು ಕಣ್ಗಾವಲು ಇರಿಸಲು ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಅತ್ಯಂತ ತುರ್ತಾಗಿ ಆಗಬೇಕಿದೆ. ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದರು ಕ್ರಿಮಿನಲ್‌ಗಳ ಮೇಲೆ ಸುಲಭವಾಗಿ ನಿಗಾ ವಹಿಸಬಹುದು. ಅಪರಾಧ ಕೃತ್ಯಗಳು ನಡೆದಾಗ ಆರೋಪಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಜತೆಗೆ ಅಪರಾಧ ಕೃತ್ಯಗಳು ನಡೆಯದಂತೆ ತಡೆಯಲೂ ಸಾಧ್ಯವಿದೆ ಎನ್ನುತ್ತಾರೆ ನಾಗರಿಕರು.

ಸಿಸಿಟಿವಿ ಅಳವಡಿಕೆಯಿಂದ ಸಂಚಾರ ವ್ಯವಸ್ಥೆಯನ್ನು ಬಲಗೊಳಿಸಬಹುದು. ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಿ ದಂಡ ವಿಧಿಸಬಹುದು. ಹಿಟ್‌ ಆ್ಯಂಡ್ ರನ್ ಪ್ರಕರಣಗಳ ತನಿಖೆಗೂ ಸಹಕಾರಿಯಾಗಲಿದೆ.

ಉಡುಪಿ ಮಣಿಪಾಲ ಮುಖ್ಯರಸ್ತೆ
ಉಡುಪಿ ಮಣಿಪಾಲ ಮುಖ್ಯರಸ್ತೆ
ಉಡುಪಿ ನಗರಕ್ಕೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು.
ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾ ಉಸ್ತುವಾರಿ ಸಚಿವೆ
‘ಶೀಘ್ರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ’
ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ನಡೆದ ಬಳಿಕ ಉಡುಪಿ ನಗರದ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಅದರಂತೆ ನಗರದ ಆಯುಕಟ್ಟಿನ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಆಧುನಿಕ ತಂತ್ರಜ್ಞಾನ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ. ವರದಿ ಬಂದ ಕೂಡಲೇ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಟೆಂಡರ್ ಕರೆಯಲಾಗುವುದು. ರಾಯಪ್ಪ ನಗರಸಭೆ ಪೌರಾಯುಕ್ತ
ಸ್ಮಾರ್ಟ್‌ ಟ್ರಾಫಿಕ್ ಜಂಕ್ಷನ್‌ ಕಾಮಗಾರಿ ವಿಳಂಬ
ಉಡುಪಿ ಹಾಗೂ ಮಣಿಪಾಲ ನಗರದ 15 ಕಡೆಗಳಲ್ಲಿ ಸ್ಮಾರ್ಟ್‌ ಟ್ರಾಫಿಕ್ ಜಂಕ್ಷನ್ ನಿರ್ಮಾಣ ಮಾಡುವ ಆಧುನಿಕ ತಂತ್ರಜ್ಞಾನ ಹೊಂದಿರುವ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಹಾಗೂ ಸಿಗ್ನಲ್ ಲೈಟ್‌ ಅಳವಡಿಸುವ ಕಾಮಗಾರಿ ಹಲವು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಕುಂಟುತ್ತಾ ತೆವಳುತ್ತಿರುವ ಕಾಮಗಾರಿ ಸದ್ಯಕ್ಕೆ ಮುಗಿಯುವ ಲಕ್ಷಣಗಳೂ ಕಾಣುತ್ತಿಲ್ಲ. ನಗರದ ಅಲ್ಲಲ್ಲಿ ಟ್ರಾಫಿಕ್‌ ಕಂಬಗಳನ್ನು ಮಾತ್ರ ಹಾಕಲಾಗಿದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ.
‘ಸಿಸಿಟಿವಿ ಅಳವಟಿಕೆಗೆ ಇಲಾಖೆ ಮುಂದಾಗಬೇಕು’
ಕಾಪು: ತಾಲ್ಲೂಕಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಕಾಪು ಬೀಚ್ ಪಡುಬಿದ್ರಿ ಬೀಚ್ ಹಾಗೂ ಬ್ಲೂಫ್ಲ್ಯಾಗ್ ಬೀಚ್‌ಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಾಪು ಬೀಚ್‌ನಲ್ಲಿರುವ ದೀಪಸ್ಥಂಭದ ಬಳಿ ಸಿಸಿಟಿವಿ ಕ್ಯಾಮೆರಾ ಪೊಲೀಸ್ ಇಲಾಖೆ ಅಳವಡಿಸಿತ್ತು. ಬಳಿಕ ದುರಸ್ಥಿಗಾಗಿ ಅದನ್ನು ತೆರವುಗೊಳಿಸಿದ್ದು ಇದುವರೆಗೂ ಕ್ಯಾಮೆರಾ ಅಳವಡಿಸಿಲ್ಲ. ಪಡುಬಿದ್ರಿ ಬೀಚ್‌ನಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಸೂಕ್ಷ್ಮ ಸ್ಥಳಗಳಲ್ಲಿ ಇದುವರೆಗೂ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ.  ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಸಂದಣಿ ಇರುವುದರಿಂದ ಪ್ರವಾಸಿಗರ ಸುರಕ್ಷಿತೆಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪ್ರವಾಸೋಧ್ಯಮ ಇಲಾಖೆ ಮುಂದಾಗಬೇಕು ಎಂಬುವುದು ಜನರ ಆಗ್ರಹ.
‘ಹೆಬ್ರಿ ಪಟ್ಟಣದಲ್ಲಿ ಸಿಸಿಟಿವಿ ಅಗತ್ಯ’
ಹೆಬ್ರಿ: ಪಟ್ಟಣದ ಬಳಿ ಇರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ ಪ್ರವಾಸಿತಾಣದಲ್ಲಿ ಕೆಲವು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಭದ್ರತೆಯ ದೃಷ್ಠಿಯಿಂದ ಇನ್ನಷ್ಟು ಕಡೆಗಳಲ್ಲಿ ಸಿಸಿಟಿವಿ ಅಳವಡಿಸುವುದು ಅಗತ್ಯವಾಗಿದೆ. ಹೆಬ್ರಿ ಪೇಟೆಯಲ್ಲಿದ್ದ ಪೊಲೀಸ್‌ ಠಾಣೆಯನ್ನು ಪೇಟೆಯ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದ್ದು ಮತ್ತಷ್ಟು ಭದ್ರತೆಗೋಸ್ಕರ ಪಟ್ಟಣದ ಆಯಾಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವುದು ಸೂಕ್ತ. ಜಾನುವಾರು ಕಳವು ಹಿಟ್‌ ಆ್ಯಂಡ್‌ ರನ್‌ ಪ್ರಕರಣ ಅಪಘಾತ ಕಳವು ಪ್ರಕರಣಗಳನ್ನು ತಪ್ಪಿಸಲು ಕ್ಯಾಮೆರಾ ಅಗತ್ಯವಾಗಿ ಬೇಕಾಗಿದೆ. ಹೆಬ್ರಿಯು ಉಡುಪಿ–ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ಹೆಬ್ರಿಯ ಮೂಲಕ ಊಡುಪಿ ಜಿಲ್ಲೆಯ ಪ್ರಮುಖ ಧಾರ್ಮಿಕ ಶೃದ್ಧಾಕೇಂದ್ರಗಳಿಗೆ ಪ್ರತಿದಿನವೂ ಸಾವಿರಾರು ಭಕ್ತರು ವಾಹನಗಳ ಸಂಚಾರದಟ್ಟಣೆ ಇರುತ್ತದೆ. ಈಗ ತಾಲ್ಲೂಕು ಕೇಂದ್ರವಾಗಿರುವ ಹೆಬ್ರಿಯಲ್ಲಿ ಹಲವಾರು ಹಣಕಾಸು ಸಂಸ್ಥೆಗಳು ಇರುವುದರಿಂದ ಸಾರ್ವಜನಿಕ ಭದ್ರತೆ ಮತ್ತು ಹಿತದೃಷ್ಠಿಯಿಂದ ಎಲ್ಲೆಡೆಯು ಸಿಸಿಟಿವಿ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.
‘ಸಿಸಿಟಿವಿ ಕ್ಯಾಮೆರಾ ದುರಸ್ತಿಗೊಳಿಸಿ’
ಬ್ರಹ್ಮಾವರ‌: ಹಂದಾಡಿ ಹಾರಾಡಿ ವಾರಂಬಳ್ಳಿ ಮತ್ತು ಚಾಂತಾರು ಈ ನಾಲ್ಕು ಗ್ರಾಮ‌ ಪಂಚಾಯಿತಿಗೆ ಹಂಚಿ‌ ಹೋಗಿರುವ ಬ್ರಹ್ಮಾವರ‌ ನಗರದ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಯ ಬಗ್ಗೆ ಪೊಲೀಸ್ ಇಲಾಖೆ ಗಮನ‌ ಹರಿಸಿದ್ದರೂ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ‌. ಪೊಲೀಸ್ ಇಲಾಖೆಯಿಂದ ನಗರದ ಬಸ್‌ ನಿಲ್ದಾಣದ ಬಳಿ ಮತ್ತು ಕುಂಜಾಲು ವೃತ್ತದ ಬಳಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಕಳೆದ ಐದು ವರ್ಷದಿಂದ ಕಾರ್ಯ ನಿರ್ವಹಿಸದೇ ನಿಷ್ಕ್ರಿಯಗೊಂಡಿದೆ. ಆದರೆ ಇದನ್ನು ಸರಿಪಡಿಸುವ ಬಗ್ಗೆ ಇಲಾಖೆ‌ ಇನ್ನೂ ಎಚ್ಚೆತ್ತುಕೊಂಡಿಲ್ಲದೇ ಇರುವುದು ವಿಷಾಧನೀಯ. ಪೊಲೀಸ್ ಇಲಾಖೆಯ ಕೋರಿಕೆ ಮೇರೆಗೆ ನಗರದ ಆಕಾಶವಾಣಿ ವೃತ್ತದ ಬಳಿ ಹಂದಾಡಿ ವಾರಂಬಳ್ಳಿ ಗ್ರಾಮ ಪಂಚಾಯಿತಿ ಮತ್ತು ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ಮೂರು ಕ್ಯಾಮೆರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಒಳ್ಳೆಯ ಸಂಗತಿ. ಸಿಸಿಟಿವಿ ಅಗತ್ಯತೆ: ಬ್ರಹ್ಮಾವರ ನಗರದ ಆಶ್ರಯ ಹೋಟೆಲ್ ಬಳಿ ಬಸ್‌ ನಿಲ್ದಾಣದ ಬಳಿ ಮತ್ತು ಕುಂಜಾಲು ರಸ್ತೆಯ ಬಳಿ ಸಿಸಿಟಿವಿ ಅಗತ್ಯವಾಗಿ ಬೇಕಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯವಾಗಿ ಗಮನ ಹರಿಸಬೇಕೆನ್ನುವುದು ಸ್ಥಳೀಯರ ಅಭಿಪ್ರಾಯ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಿರುವ ನಗರದ ಆಡಳಿತ ಕಚೇರಿ ಮತ್ತು ಸುತ್ತಮುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಬೇಕಾಗಿದೆ. ಕಚೇರಿಯ ಸುತ್ತಮುತ್ತ ಸದ್ಯ ಕಡಿಮೆ‌ ಸಾಮರ್ಥ್ಯದ ಸಿಸಿ ಕ್ಯಾಮೆರಾ ಇದ್ದು ಅಲ್ಲಿಯೂ ಉತ್ತಮ ಕ್ಯಾಮೆರಾ ಅಳವಡಿಸಿದಲ್ಲಿ ಹೆದ್ದಾರಿಯಲ್ಲಿ ಸಾಗುವ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಬಹುದು. ಬಸ್‌ ನಿಲ್ದಾಣ ಮತ್ತು ಕುಂಜಾಲು ರಸ್ತಯಲ್ಲಿರುವ ಕ್ಯಾಮೆರಾವನ್ನು ದುರಸ್ತಿಗೊಳಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಒಳ ರಸ್ತೆಗಳಲ್ಲಿ ಸಂಚರಿಸುವವರ / ವಾಹನಗಳ ಬಗ್ಗೆ ಹೆಚ್ಚಿನ ಗಮನ ನೀಡಬಹುದು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT