ಶುಕ್ರವಾರ, ನವೆಂಬರ್ 22, 2019
22 °C
ಹೆಚ್ಚಿದ ಅಲರ್ಜಿ, ನೇತ್ರ, ಶ್ವಾಸಕೋಶ ಸಂಬಂಧಿ ಸಮಸ್ಯೆ,ಗಳು: ಹೆಲ್ಮೆಟ್‌ ಧರಿಸಿದರೂ ತಪ್ಪದ ಗೋಳು

ವಾಹನ ಸವಾರರಿಗೆ ನಿತ್ಯ ದೂಳಿನ ಅಭಿಷೇಕ

Published:
Updated:
Prajavani

ಉಡುಪಿ: ಚಳಿಗಾಲ ಆರಂಭಕ್ಕೂ ಮುನ್ನವೇ ನಗರದಲ್ಲಿ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಉಡುಪಿಯಿಂದ ಮಣಿಪಾಲ ಮಾರ್ಗವಾಗಿ ಪರ್ಕಳದವರೆಗೂ ಕಾರ್ಮೋಡ ಕವಿದಂತಹ ದೃಶ್ಯ ಕಾಣಬಹುದು. ಇದು ಮೈ, ಮನಸ್ಸಿಗೆ ಮುದ ನೀಡುವ ಮಂಜು ಅಲ್ಲ. ಉಸಿರುಗಟ್ಟಿಸುವಂತಹ, ಅನಾರೋಗ್ಯಕ್ಕೆ ಆಹ್ವಾನ ನೀಡುವ ದೂಳಿನ ಮೋಡ.

ರಾಷ್ಟ್ರೀಯ ಹೆದ್ದಾರಿ 169 ‘ಎ’ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಾಗರಿಕರನ್ನು ಹೈರಾಣಾಗಿಸಿದೆ. ಕಾಮಗಾರಿಗೆ ತಂದು ಸುರಿದಿರುವ ಮಣ್ಣು ನಡು ರಸ್ತೆಗೆ ಬಂದು ಬಿದ್ದಿದ್ದು, ರಸ್ತೆಯ ಮೇಲೆ ವಾಹನಗಳು ಓಡಾಡಿದರೆ ಸಾಕು ದಟ್ಟವಾದ ದೂಳು ಆವರಿಸಿಕೊಳ್ಳುತ್ತಿದೆ. ಪರಿಣಾಮ ಉಡುಪಿಯಿಂದ ಮಣಿಪಾಲಕ್ಕೆ ಸಾಗುವ ವಾಹನ ಸವಾರರಿಗೆ ನಿತ್ಯ ಧೂಳಿನ ಅಭಿಷೇಕವಾಗುತ್ತಿದೆ.

ವಾಹನ ಸವಾರರಿಗೆ ಸಂಕಷ್ಟ: ಕಾರು, ಬಸ್‌ನಲ್ಲಿ ಓಡಾಡುವವರು ಕಿಟಕಿ ಗಾಜುಗಳನ್ನು ಬಂದ್‌ ಮಾಡಿ ದೂಳಿನಿಂದ ಹೇಗೋ ಬಚಾವಾದರೆ, ದ್ವಿಚಕ್ರ ವಾಹನಗಳು, ಆಟೊ ಚಾಲಕರು ಮಾತ್ರ ಯಾತನೆ ಪಡುವಂತಾಗಿದೆ. ಹೆಲ್ಮೆಟ್ ಧರಿಸಿದರೂ ಉಸಿರಾಟದ ಮೂಲಕ ದೂಳಿನ ಕಣಗಳು ಶ್ವಾಸಕೋಶ ಪ್ರವೇಶಿಸಿ ವಾಹನ ಸವಾರರಿಗೆ ಉಸಿರುಗಟ್ಟಿಸುವಂತಹ ಅನುಭವವಾಗುತ್ತಿದೆ.

ಇನ್ನೂ ಶ್ವಾಸಕೋಶ ಸೋಂಕು ಹಾಗೂ ಆಸ್ತಮಾ ರೋಗಿಗಳಂತೂ ಹೆದ್ದಾರಿಯಲ್ಲಿ ಓಡಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಸಾಮಾನ್ಯ ಜನರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್‌ ಓಡಿಸಬೇಕಿದೆ. ಎದುರಿಗೆ ಬರುವ ವಾಹನಗಳು ಕಾಣದಷ್ಟು ದಟ್ಟವಾದ ದೂಳು ಆವರಿಸಿಕೊಂಡಿದೆ.

ಬಸ್‌ಗೆ ಕಾಯುವವರ ಸಂಕಟ: ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯುವವರ ಸ್ಥಿತಿಯಂತೂ ಶೋಚನೀಯ. ಪ್ರತಿ ನಿಲ್ದಾಣದಲ್ಲೂ ಮೂಗು, ಬಾಯಿಗೆ ಕರವಸ್ತ್ರವನ್ನು ಅಡ್ಡಲಾಗಿ ಇಟ್ಟುಕೊಂಡು ನಿಂತಿರುವ ಪ್ರಯಾಣಿಕರನ್ನು ಕಾಣಬಹುದು. ನಿಲ್ದಾಣದಲ್ಲಿ ಸೀನುತ್ತಾ, ಕೆಮ್ಮುತ್ತಾ, ಮುಖಕ್ಕೆ ಮೆತ್ತಿಕೊಂಡ ದೂಳನ್ನು ಒರೆಸಿಕೊಳ್ಳುತ್ತಾ ವ್ಯವಸ್ಥೆಗೆ ಹಿಡಿಶಾಪ ಹಾಕುವ ಪ್ರಯಾಣಿಕರು ಕಾಣಿಸಿತ್ತಾರೆ.

‘ಬೆಳಿಗ್ಗೆ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಕಚೇರಿಗೆ ಹೋಗುವವರಿಗೆ, ಶಾಲೆಗೆ ತೆರಳುವ ಮಕ್ಕಳಿಗೆ, ಆಸ್ಪತ್ರೆಗೆ ತೆರಳುವ ವೃದ್ಧರಿಗೆ ತುಂಬಾ ಸಮಸ್ಯೆಯಾಗಿದೆ. ಧೂಳಿನಿಂದ ಅಲರ್ಜಿ, ಉಸಿರಾಟದ ತೊಂದರೆ, ಕಣ್ಣಿನ ತುರಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ’ ಎಂದು ಬಸ್‌ನಿಲ್ದಾಣದಲ್ಲಿ ನಿಂತಿದ್ದ ವೈದ್ಯೆ ಡಾ.ಸುನೀತಾ ತಿಳಿಸಿದರು.

‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ನಾಗರಿಕರು ನೆಮ್ಮದಿಯಿಂದ ಓಡಾಡಲು ಅನುಕೂಲವಾಗುವಂತೆ ರಸ್ತೆಯನ್ನು ದೂಳುಮುಕ್ತ ಮಾಡಲು ಸಾಧ್ಯವಾಗಿಲ್ಲ. ನಿತ್ಯ ಒಂದೆರಡು ಬಾರಿ ನೀರು ಸಿಂಪರಣೆ ಮಾಡಿದರೆ ಧೂಳು ಕಡಿಮೆಯಾಗುತ್ತದೆ. ಈ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ಅಥವಾ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ನಾಗರಿಕ ಜನಾರ್ದನ್‌.

ಮಣಿಪಾಲದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿ ಆಟೊ ಓಡಿಸಲು ಸಾಧ್ಯವಾಗುತ್ತಿಲ್ಲ. ಮುಖಕ್ಕೆ ಬಟ್ಟೆಕಟ್ಟಿಕೊಂಡು ವಾಹನ ಓಡಿಸಿದರೂ ದೂಳು ಶ್ವಾಸಕೋಶ ಸೇರುತ್ತಿದೆ. ಸಂಜೆಯ ಹೊತ್ತಿಗೆ ಕೆಮ್ಮಿದರೆ, ಸೀನಿದರೆ ದೂಳುಮಿಶ್ರಿತ ಕಫ ಹೊರಬರುತ್ತದೆ. ನಿಲ್ದಾಣದಲ್ಲಿ ಹಲವರು, ಕೆಮ್ಮು, ಅಲರ್ಜಿಯಂತಹ ಸಮಸ್ಯೆಯಿಂದ ನರಳುತ್ತಿದ್ದಾರೆ’ ಎಂದು ಆಟೊ ಚಾಲಕ ಮಂಜುನಾಥ್‌ ಸಮಸ್ಯೆ ಹೇಳಿಕೊಂಡರು.

‘ಹೊಂಡ ಗುಡ್ಡಿ ಬಿದ್ದ ರಸ್ತೆಗಳಿಗೆ ಮಣ್ಣು, ಜೆಲ್ಲಿಯ ಪುಡಿಯನ್ನು ತಂದು ಸುರಿದಿದ್ದಾರೆ. ಬಸ್‌, ಲಾರಿ, ಕಾರುಗಳು ವೇಗವಾಗಿ ಸಾಗಿದರೆ ಮಣ್ಣಿನ ಕಣಗಳು ಕಣ್ಣಿಗೆ ಬೀಳುತ್ತಿವೆ. ಪರಿಣಾಮ ನಿತ್ಯವೂ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆಟೊ ಚಾಲಕ ರಜಬ್ ಹೇಳಿದರು.

ರೋಗಿಗಳಿಗೆ ಸಂಕಷ್ಟ: ಮಣಿಪಾಲದ ಕೆಎಂಸಿ ಆಸ್ಪತ್ರೆಯ ಎದುರು ದೂಳಿನ ಸಮಸ್ಯೆ ಗಂಭೀರವಾಗಿದ್ದು, ರೋಗಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆಗೆ ಭೇಟಿನೀಡುವ ಸಾವಿರಾರು ರೋಗಿಗಳು ಹಾಗೂ ಸಂಬಂಧಿಗಳು ಆಸ್ಪತ್ರೆ ಎದುರಿಗಿರುವ ರಸ್ತೆ ದಾಟಲು, ಔಷಧ ಖರೀದಿಸಲು, ಹೋಟೆಲ್‌ಗಳಿಗೆ ಹೋಗಬೇಕಾದರೆ ದೂಳು ಕುಡಿಯಬೇಕಿದೆ. ಇದರಿಂದ ಅನಾರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಅಪಾಯವಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಕಾಮಗಾರಿ ಮಾಡದ ಕಡೆಗಳಲ್ಲಿ ರಸ್ತೆಗಳು ಗುಂಡಿಬಿದ್ದಿದ್ದು, ಪ್ರತಿನಿತ್ಯ ಸವಾರರು ಕಷ್ಟ ಅನುಭವಿಸುತ್ತಿದ್ದಾರೆ. ಇದರ ಜತೆಗೆ, ಇದೀಗ ದೂಳಿನ ಸಮಸ್ಯೆಯೂ ಸೇರಿಕೊಂಡಿದೆ. ಮಳೆಗಾಲ ಮುಗಿಯುವ ಮೊದಲೇ ದೂಳಿನ ಸಮಸ್ಯೆ ಹೆಚ್ಚಿದ್ದು, ಚಳಿ ಹಾಗೂ ಬೇಸಿಗೆಯಲ್ಲಿ ಸಮಸ್ಯೆ ಗಂಭೀರವಾಗಲಿದೆ.

ಶೀಘ್ರ ದೂಳು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)