ಕುಂದಾಪುರ: ‘ವಿದ್ಯೆಯನ್ನು ಶ್ರೇಷ್ಠ ದಾನವೆಂದು ಪರಿಗಣಿಸಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಅನ್ನವನ್ನು ವ್ಯಾಪಾರ ಮಾಡಬಾರದು ಎನ್ನುವ ಆದರ್ಶ ತತ್ವ ಹಾಗೂ ಸಿದ್ದಾಂತಗಳು ಇತ್ತು. ಬದಲಾದ ಕಾಲಘಟ್ಟದಲ್ಲಿ ನಮ್ಮ ನಂಬಿಕೆಗಳು ಬದಲಾಗುತ್ತಿರುವುದು ಖೇದಕರ’ ಎಂದು ಶಾಸಕ ವಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕೋಟೇಶ್ವರ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿಯ ಆಶ್ರಯದಲ್ಲಿ ಜಿಲ್ಲೆಯ ಅನುದಾನಿತ ಹಾಗೂ ಪ್ರೌಢಶಾಲೆಯ 41 ಸಾವಿರ ವಿದ್ಯಾರ್ಥಿಗಳಿಗೆ ನೀಡಲಾದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಹಾಗೂ ಶಿಕ್ಷಣ ಇಂದು ಮಾರುಕಟ್ಟೆಯ ಸರಕಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅತ್ಯಂತ ಹೆಚ್ಚು ಆದಾಯ ಬರುವ ಕ್ಷೇತ್ರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಎನ್ನುವ ವಾಸ್ತವ ಸತ್ಯದ ಕಾಲದಲ್ಲಿ, ಅದರಿಂದ ಯಾವುದೇ ಆದಾಯವನ್ನು ನಿರೀಕ್ಷೆ ಮಾಡದೆ ಉದ್ಯಮಿ ಎಚ್.ಎಸ್. ಶೆಟ್ಟಿ ಅವರು ಜಿಲ್ಲೆಯ 41 ಸಾವಿರ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಕೆ ಹಾಗೂ ಇನ್ನಿತರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿರುವ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಹರಿಪ್ರಸಾದ್ ಕೋಣೆಮನೆ ಮಾತನಾಡಿದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಗುರುರಾಜ್ ಗಂಟಿಹೊಳೆ, ಯಶ್‍ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಶಿಕ್ಷಣಾಧಿಕಾರಿ ಗಣಪತಿ ಕೆ., ಸೊಸೈಟಿಯ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಇದ್ದರು.
ಉಡುಪಿ ನಿಟ್ಟೂರು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಉಡುಪಿಯ ಯಕ್ಷಗಾನ ಕಲಾರಂಗ (ರಿ) ಕಾರ್ಯದರ್ಶಿ ಮುರಳಿ ಕಡೆಕಾರ್ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ವತಿಯಿಂದ ಮೊದಲ ಬಾರಿ ಆರಂಭಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ ಹಾಗೂ ₹1 ಲಕ್ಷ ನಗದು ನೀಡಿ ಗೌರವಿಸಲಾಯಿತು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ವಾಗತಿಸಿದರು. ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ಉಪ ಪ್ರಾಂಶುಪಾಲ ಚೇತನ ಶೆಟ್ಟಿ ಕೋವಾಡಿ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಾ ಆಚಾರ್ ಪ್ರಾರ್ಥಿಸಿದರು. ಟ್ರಸ್ಟ್‌ನ ಕೋಶಾಧಿಕಾರಿ ಶಿಕ್ಷಕ ಎಚ್.ರಾಜೀವ್ ಶೆಟ್ಟಿ ವಂದಿಸಿದರು.
ಯಾವ ರಾಜಕೀಯ ಉದ್ದೇಶ ಇಲ್ಲ: ಎಚ್.ಎಸ್.ಶೆಟ್ಟಿ
2005ರಲ್ಲಿ ಐನೂರು ವಿದ್ಯಾರ್ಥಿಗಳಿಂದ ಆರಂಭವಾದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಪ್ರಸ್ತುತ ಜಿಲ್ಲೆಯ ಅನುದಾನಿತ ಹಾಗೂ ಸರ್ಕಾರಿ ಪ್ರೌಢಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸಮವಸ್ತ್ರ ನೀಡುವಲ್ಲಿಯವರೆಗೆ ಬಂದಿರುವುದು ಸಂತಸ ತಂದಿದೆ. ಯಾವುದೇ ಪ್ರತಿಫಲದ ನಿರೀಕ್ಷೆ ಇಟ್ಟುಕೊಳ್ಳದೆ ಭವಿಷ್ಯದ ಉತ್ತಮ ಸಮಾಜವನ್ನು ರೂಪಿಸುವ ನಮ್ಮ ಭವ್ಯ ಭಾರತದ ವಿದ್ಯಾರ್ಥಿಗಳ ಮೊಗದಲ್ಲಿ ಕಾಣುವ ಮಂದಹಾಸವೇ ಅವಿಸ್ಮರಣೀಯ ಅನುಭವವನ್ನು ನೀಡುತ್ತಿದೆ. ಈ ಕಾರ್ಯಕ್ರಮದ ಹಿಂದೆ ಯಾವ ರಾಜಕೀಯ ಅಥವಾ ಪ್ರಚಾರದ ಉದ್ದೇಶಗಳು ಇಲ್ಲ. ಧರ್ಮ-ಜಾತಿಯನ್ನು ನೋಡದೆ ವಿದ್ಯಾರ್ಥಿ ಎನ್ನುವ ಒಂದೇ ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸುವ ಬಗ್ಗೆ ಮುಂದೆಯೂ ಇಂತಹ ಸದುದ್ದೇಶದ ಯೋಚನೆಗಳ ಮುಂಚೂಣಿಯಲ್ಲಿ ಇರುತ್ತೇನೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಹೇಳಿದರು.
ಸಂಸ್ಕಾರಯುಕ್ತ ಶಿಕ್ಷಣ ದೇಶದ ಶಕ್ತಿ ವೃದ್ಧಿಸಲು ಪೂರಕ: ಹರಿಪ್ರಸಾದ್ ಕೋಣೆಮನೆ
ಶಿಕ್ಷಣ ಹಾಗೂ ವಿದ್ಯಾವಂತರ ಕೊರತೆ ದೇಶವನ್ನು ನಷ್ಟಕ್ಕೆ ತಳ್ಳಲಿದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ. ಶ್ರೀಮಂತಿಕೆ ಹಾಗೂ ಅಧಿಕಾರಗಳಿಂದ ಯಾರು ದೊಡ್ಡವರಾಗೋದಿಲ್ಲ. ಸಮಾಜವನ್ನು ಹಾಗೂ ಎಲ್ಲ ವರ್ಗದ ಜನರನ್ನು ಸಮಾನವಾಗಿ ಪ್ರೀತಿಸುವ ದೊಡ್ಡ ಮನಸ್ಸು ಇದ್ದವರು ಮಾತ್ರ ದೊಡ್ಡವರಾಗುತ್ತಾರೆ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣದಲ್ಲಿ ದೊಡ್ಡ ಭಾಗವನ್ನು ಸಮಾಜ ಸೇವೆಗಾಗಿ ಸದ್ವಿನಿಯೋಗ ಮಾಡುವ ಎಚ್.ಎಸ್.ಶೆಟ್ಟಿಯವರು ಈ ಕಾರಣಕ್ಕಾಗಿ ವಿಶೇಷವಾಗಿ ಕಾಣಿಸುತ್ತಾರೆ. ವ್ಯಕ್ತಿತ್ವ ವಿಕಸನಕ್ಕೆ ಭಾಷೆ ಮಾಧ್ಯಮವಾಗಿದ್ದು ತ್ಯಾಗ ಬಲಿದಾನ ದೇಶೀಯತೆ ಸಂಸ್ಕೃತಿ ಸಂಸ್ಕಾರಯುಕ್ತ ಶಿಕ್ಷಣ ದೇಶದ ಶಕ್ತಿ ವೃದ್ಧಿಸಲು ಪೂರಕ. ಕಳೆದ ವರ್ಷಗಳಲ್ಲಿ ಉಡುಪಿ ಹಾಗೂ ಹೊರ ಜಿಲ್ಲೆಗಳಲ್ಲಿ ಶಾಲೆಗಳ ದತ್ತು ಸ್ವೀಕಾರ ಸಮವಸ್ತ್ರ ವಿತರಣೆ ಭೋಜನ ನಿಧಿ ವಿದ್ಯಾರ್ಥಿ ವೇತನ ಸೇರಿದಂತೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟಬಲ್ ಸೊಸೈಟಿ ಸಾಮಾಜಿಕ ಕೈಂಕರ್ಯಕ್ಕಾಗಿ ಅಂದಾಜು ₹7 ಕೋಟಿಗೂ ಮಿಕ್ಕಿ ಆರ್ಥಿಕ ಸಹಕಾರ ನೀಡಿದ್ದು ಸೊಸೈಟಿ ಸಂಸ್ಥಾಪಕರ ಇಚ್ಛಾಶಕ್ತಿಯಿಂದ ಈ ಸೇವೆ ಮುಂದೆಯೂ ಮುಂದುವರೆಯಲಿದೆ ಎಂದು ಪತ್ರಕರ್ತ ಹರಿಪ್ರಸಾದ್ ಕೋಣೆಮನೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.