ಮಂಗಳವಾರ, ಜೂನ್ 15, 2021
27 °C
ಹಸಿದವರಿಗೆ ಆಹಾರದ ಪೊಟ್ಟಣಗಳ ವಿತರಣೆ, ಈದ್ ದಿನವೂ ಶವ ಸಾಗಿಸಲು ನೆರವು

ಉಡುಪಿಯಲ್ಲಿ ಸರಳ ಈದ್‌ ಉಲ್ ಫಿತ್ರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗುರುವಾರ ಮುಸ್ಲಿಮರು ಸರಳವಾಗಿ ಈದ್ ಉಲ್‌ ಫಿತ್ರ್‌ ಹಬ್ಬ ಆಚರಿಸಿದರು. ಮಸೀದಿ, ಈದ್ಗಾ ಹಾಗೂ ಖಬರ್‌ಸ್ತಾನಗಳಿಗೆ ತೆರಳದೆ ಮನೆಯಲ್ಲಿಯೇ ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ನೆರೆ ಹೊರೆಯವರಿಗೆ ಖಾದ್ಯ

ಪ್ರತಿವರ್ಷ ಈದ್ ಹಬ್ಬ ರಂಗು ಪಡೆಯುತ್ತಿತ್ತು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಬಟ್ಟೆ ಅಂಡಿಗಳಲ್ಲಿ ಹೊಸ ಬಟ್ಟೆ ಖರೀದಿ ಕಾಣುತ್ತಿತ್ತು. ಬಂಧುಗಳಿಗೆ, ಸ್ನೇಹಿತರಿಗೆ ಭೋಜನ ಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಈ ವರ್ಷ ಲಾಕ್‌ಡೌನ್‌ ಕಾರಣದಿಂದ ಆಚರಣೆ ಸರಳವಾಗಿತ್ತು. ನೆರೆಹೊರೆಯವರಿಗೆ ಹಬ್ಬಕ್ಕೆ ಸಿದ್ಧಪಡಿಸಿದ್ದ ಖಾದ್ಯಗಳನ್ನು ಹಂಚುವ ಮೂಲಕ ಮುಸ್ಲಿಮರು ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಿದರು. ಕಳೆದ ವರ್ಷವೂ ಕೊರೊನಾ ಕಾರಣದಿಂದ ಹಬ್ಬ ಸರಳವಾಗಿತ್ತು.

ಬಂಧುಗಳ ಮನೆಗಳಿಗೆ ತೆರಳಲು ಸಾಧ್ಯವಾಗದೆ ಹೆಚ್ಚಿನವರು ಮೊಬೈಲ್‌ನಲ್ಲಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಡವರಿಗೆ ಜಕಾತ್ ನೀಡಿದರು. ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮಾಂಸದ ಮಾರುಕಟ್ಟೆಯಲ್ಲಿ ದಟ್ಟಣೆ ಹೆಚ್ಚಾಗಿದ್ದು ಕಂಡುಬಂತು.

ಆಹಾರ ವಿತರಣೆ

ಲಾಕ್‌ಡಾನ್ ಸಂಕಷ್ಟದಲ್ಲಿ ಸಿಲುಕಿದ್ದ ನಿರಾಶ್ರಿತರಿಗೆ, ಭಿಕ್ಷುಕರಿಗೆ, ಅಸಹಾಯಕರಿಗೆ ಹ್ಯುಮಾನಿಟಿ ಸರ್ವಿಸ್ ಡಿಫೆನ್ಸ್ ಪೋರ್ಸ್ ಉಡುಪಿ, ಚಿಸ್ತಿಯ್ಯಾ ದ್ರಿಕ್ಸ್ ಸ್ವಲಾತ್ ಚಾರಿಟಬಲ್ ಕಮಿಟಿ ಸಹಕಾರದೊಂದಿಗೆ ಈದ್ ಅಂಗವಾಗಿ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.

ಉಡುಪಿ ಬಸ್ ನಿಲ್ದಾಣ, ಕಲ್ಸಂಕ, ಅಜ್ಜರಕಾಡು, ಸಂತೆಕಟ್ಟೆ, ಬ್ರಹ್ಮಾವರ ಪರಿಸರದಲ್ಲಿರುವ 200ಕ್ಕೂ ಅಧಿಕ ಆಹಾರ ಪೊಟ್ಟಣ ಹಂಚಲಾಯಿತು. ಡಿಪೆನ್ಸ್ ಫೋರ್ಸ್‌ ತಂಡದ ಉಪಾಧ್ಯಕ್ಷ ರಿಝ್ವಾನ್ ಕೃಷ್ಣಾಪುರ ನೇತೃತ್ವದಲ್ಲಿ ಸುರತ್ಕಲ್ ಭಾಗದಲ್ಲಿ ನಿರಾಶ್ರಿತರಿಗೆ ಆಹಾರ ಕಿಟ್ ನೀಡಲಾಯಿತು.

ಎಸ್‌ಎಸ್‌ಎಫ್‌ ಉಡುಪಿ ಡಿವಿಷನ್ ಅಧ್ಯಕ್ಷರಾದ ಸೈಯ್ಯದ್ ಯೂಸುಫ್ ಹೂಡೆ ತಂಙಲ್ ದುವಾದೊಂದಿಗೆ ಚಾಲನೆ ನೀಡಿದರು. ಡಿಫೆನ್ಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ‌ಕಟಪಾಡಿ, ತಾಜುಲ್ ಉಲಮಾ ರಿಲೀಫ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್, ಡಿಫೆನ್ಸ್ ಸಮಿತಿಯ ಕಾರ್ಯದರ್ಶಿ ಸಿದ್ದೀಕ್, ನಾಸೀರ್, ನಝೀರ್, ಇಮ್ತಿಯಾಝ್, ಬಿಲಾಲ್, ಅಪ್ನಾನ್, ಸರ್ಫರಾಜ್‌, ಅಲ್ತಾಪ್ ಮಲ್ಪೆ, ಸಲ್ಮಾನ್ ಮಣಿಪುರ, ಸಯ್ಯದ್ ಅಸ್ರಾರ್ ತಂಙಲ್, ಮಬೀನ್ ಹೊನ್ನಾಳ ಇದ್ದರು.

ಈದ್ ದಿನವೂ ಶವ ಸಾಗಿಸಲು ನೆರವು

ಪವಿತ್ರ ಈದ್ ಉಲ್ ಫಿತ್ರ್‌ ಹಬ್ಬದ ದಿನವೂ ಇಬ್ರಾಹಿಂ ಗಂಗೊಳ್ಳಿ ನೇತೃತ್ವದ ರಜಬ್ ಬುಡ್ಡ, ನದೀಮ್‌, ವಿಲ್ಸನ್‌, ಸುಭಾನ್ ತಂಡ ಮಣಿಪಾಲದ ಆಸ್ಪತ್ರೆಯ ಶವಾಗಾರದಿಂದ ಕುಂದಾಪುರದ ರುದ್ರಭೂಮಿಗೆ ಉಚಿತವಾಗಿ ಆಂಬುಲೆನ್ಸ್‌ನಲ್ಲಿ ಶವ ಸಾಗಿಸಿ ಮಾನವೀಯ ಕಾರ್ಯ ಮಾಡಿತು. ‌ ಹಲವು ದಿನಗಳಿಂದ ಸೋಂಕಿತರ ಶವ ಸಾಗಾಟ ಹಾಗೂ ಅಂತ್ಯಕ್ರಿಯೆಯಲ್ಲಿ ತಂಡ ತೊಡಗಿಸಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.