ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಸಾಂಕ್ರಾಮಿಕ ರೋಗ: ಇರಲಿ ಮುಂಜಾಗ್ರತೆ

ನಗರದ ವಿವಿಧೆಡೆ ಮಳೆ ನೀರು ಸಂಗ್ರಹ: ತ್ಯಾಜ್ಯ, ಕೊಳಚೆಗಳಿಂದ ಸೊಳ್ಳೆ ಉತ್ಪತ್ತಿಯಾಗುವ ಆತಂಕ
ನವೀನ್‌ ಕುಮಾರ್‌ ಜಿ.
Published 10 ಜೂನ್ 2024, 7:56 IST
Last Updated 10 ಜೂನ್ 2024, 7:56 IST
ಅಕ್ಷರ ಗಾತ್ರ

ಉಡುಪಿ: ಮುಂಗಾರು ಮಳೆ ಚುರುಕುಗೊಂಡು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮುದ ನೀಡಿದರೂ ದಾಂಗುಡಿ ಇಡುತ್ತಿರುವ ಸಾಂಕ್ರಾಮಿಕ ರೋಗಗಳು ಭೀತಿ ಉಂಟು ಮಾಡಿದೆ.

ಉಡುಪಿ ನಗರದಲ್ಲಿ ಪ್ರತಿ ವರ್ಷ ಡೆಂಗಿ ಜ್ವರದ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಅಪರೂಪಕ್ಕೆ ಮಲೇರಿಯಾ ಪ್ರಕರಣಗಳೂ ದಾಖಲಾಗುತ್ತಿವೆ. ಈ ವರ್ಷದ ಜನವರಿಯಿಂದ ಇದುವರೆಗೆ 77 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ಮಲೆನಾಡಿನ ಜನರನ್ನು ಹೈರಾಣಾಗಿಸಿದ್ದ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌–ಕೆಎಫ್‌ಡಿ) ಪ್ರಕರಣ ಕೂಡ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ದೃಢಪಡುವ ಮೂಲಕ ಜನರಲ್ಲಿ ಭಯ ಉಂಟು ಮಾಡಿತ್ತು.

ನಗರದ ಕೆಲವೆಡೆ ಹರಿದು ಹೋಗದೆ ಸಂಗ್ರಹಗೊಂಡಿರುವ ಮಳೆ ನೀರು, ಸ್ವಚ್ಛತೆ ಕೊರತೆ, ತೆರೆದ ಚರಂಡಿಗಳು, ತ್ಯಾಜ್ಯ ನಿರ್ವಹಣೆ ಕೊರತೆ ಸೊಳ್ಳೆಗಳ ಉಗಮಕ್ಕೆ ಕಾರಣವಾಗುತ್ತಿದೆ.

ಬನ್ನಂಜೆಯ ನಿಡಂಬೂರು, ನಿಟ್ಟೂರು, ಪ್ರದೇಶಗಳಲ್ಲಿನ ಖಾಲಿ ನಿವೇಶನಗಳಲ್ಲಿ ಕಸ ಸಂಗ್ರಹಗೊಂಡು ಅದರಲ್ಲಿರುವ ಎಳನೀರು ಚಿಪ್ಪು, ಪ್ಲಾಸ್ಟಿಕ್‌ ಬಾಟಲಿ ಮೊದಲಾದ ವಸ್ತುಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗುತ್ತಿವೆ.

ಸಿಟಿ ಬಸ್‌ ನಿಲ್ದಾಣ ಸಮೀಪ, ಅಂಬಲಪಾಡಿ ಸಮೀಪದ ಹೆದ್ದಾರಿ ಬದಿ, ಕಲ್ಸಂಕದ ರಸ್ತೆ ಸಮೀಪ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಕಟ್ಟಿ ನಿಲ್ಲುತ್ತಿದ್ದು, ರೋಗಭೀತಿ ಕಾಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬನ್ನಂಜೆಯ ನಿಡಂಬೂರಿನ ಖಾಲಿ ಜಾಗದಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು
ಬನ್ನಂಜೆಯ ನಿಡಂಬೂರಿನ ಖಾಲಿ ಜಾಗದಲ್ಲಿ ತ್ಯಾಜ್ಯ ಸಂಗ್ರಹಗೊಂಡಿರುವುದು

‘ಡೆಂಗಿ ಪ್ರಕರಣಗಳು ಹೆಚ್ಚಾಗಿ ನಗರದಲ್ಲೇ ದೃಢಪಡುತ್ತಿವೆ. ಜ್ವರದ ಕುರಿತು ಸಮೀಕ್ಷೆ ಮಾಡಿ, ಜನರ ರಕ್ತ ಪರೀಕ್ಷೆ ಮಾಡುವ ಕಾರ್ಯ 4 ತಿಂಗಳಿಂದಲೂ ಕಟ್ಟುನಿಟ್ಟಾಗಿ ನಡೆಸುತ್ತಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ್‌ ತಿಳಿಸಿದರು.

ಬನ್ನಂಜೆ ಬಳಿ ಮಳೆ ನೀರು ಸಂಗ್ರಹಗೊಂಡಿರುವುದು
ಬನ್ನಂಜೆ ಬಳಿ ಮಳೆ ನೀರು ಸಂಗ್ರಹಗೊಂಡಿರುವುದು

ಮಲೇರಿಯಾ ಪ್ರಕರಣಗಳು ಹೊರಗಿನಿಂದ ಬರುವ ಕಾರ್ಮಿಕರಲ್ಲಿ ಕಾಣಿಸಿಕೊಳ್ಳುತ್ತಿವೆ. ಅಸ್ಸಾಂನಿಂದ ಬಂದಿರುವ ಒಬ್ಬರಿಗೆ ಮಲೇರಿಯಾ ದೃಢಪಟ್ಟಿದೆ. ಈ ನಿಟ್ಟಿನಲ್ಲಿ, ಕಟ್ಟಡ ಕಾಮಗಾರಿಗಾಗಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವಂತೆ ಬಿಲ್ಡರ್‌ಗಳಿಗೆ ಸೂಚಿಸಲಾಗಿದೆ. ಕಾರ್ಮಿಕರ ಆರೋಗ್ಯ ತಪಾಣೆ ವಿಚಾರವಾಗಿ ಬಿಲ್ಡರ್‌ಗಳ ಜೊತೆಗೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಹೊರಗಿನಿಂದ ಬರುವ ಕಾರ್ಮಿಕರಿಂದ ಮಲೇರಿಯಾ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ  ಎಂದೂ ಅವರು ವಿವರಿಸಿದರು.

ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸುವ ಕ್ರಮವಾಗಿ ನಗರಸಭೆ ಜೊತೆ ಸೇರಿ ಸಿವಿಕ್ ಬೈಲಾ ಜಾರಿಗೊಳಿಸಲು ಚಿಂತನೆ ನಡೆಸಿದ್ದೇವೆ. ಸಿವಿಕ್‌ ಬೈಲಾ ಎಂದರೆ ನಾಗರಿಕರಿಗೆ ಅವರೇ ಕಟ್ಟಳೆಗಳನ್ನು ಹಾಕಿಕೊಳ್ಳುವುದು. ಅದರಂತೆ ಮನೆಯ ಆವರಣ ಎಷ್ಟಿದೆಯೋ ಅದರ ಜವಾಬ್ದಾರಿ ಆ ಆಸ್ತಿಯ ಮಾಲಕರದ್ದಾಗಿರುತ್ತದೆ. ಅಲ್ಲಿ ಏನಾದರೂ ಕೊಳಚೆ ತುಂಬಿ, ನೀರು ಸಂಗ್ರವಾಗಿ ನೆರೆಹೊರೆಯವರಿಗೆ ತೊಂದರೆಯಾದರೆ ಆ ಆಸ್ತಿ ಮಾಲಕರನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ, ಅವರಿಗೆ ದಂಡ ಹಾಕಲು ಅವಕಾಶವಿರುತ್ತದೆ ಎಂದು ಗಡಾದ್‌ ತಿಳಿಸಿದರು.

ಬೈಲಕೆರೆ ಬಳಿ ಗದ್ದೆಯಲ್ಲಿ ಮಳೆ ನೀರು ನಿಂತಿರುವುದು
ಬೈಲಕೆರೆ ಬಳಿ ಗದ್ದೆಯಲ್ಲಿ ಮಳೆ ನೀರು ನಿಂತಿರುವುದು

ಮಳೆ ಚುರುಕಾಗಿರುವುದರಿಂದ ಮಂಗನ ಕಾಯಿಲೆ ಹರಡುವ ಸಾಧ್ಯತೆ ಕಡಿಮೆ ಎಂದಿರುವ ಅವರು ಯಾವುದೇ ಜ್ವರ ಬಂದರೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಸಮೀಪದ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಯ ವಹಿಸಿದರೆ ಪ್ರಾಣಕ್ಕೆ ಅಪಾಯವಿದೆ ಎಂದು ಸಲಹೆ ನೀಡಿದರು.

ಡಾ.ಗಡಾದ್‌
ಡಾ.ಗಡಾದ್‌
ರಾಯಪ್ಪ
ರಾಯಪ್ಪ
ಸಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಕಾರ್ಯಪಡೆಗಳಿವೆ. ಅವುಗಳು ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ
ಡಾ. ಐ.ಪಿ. ಗಡಾದ್‌ ಜಿಲ್ಲಾ ಆರೋಗ್ಯಾಧಿಕಾರಿ

‘ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕ್ರಮ’

ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು 19 ಸಿಬ್ಬಂದಿಯನ್ನು ನಾವು ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಪ್ರತಿ ವರ್ಷ ₹20 ಲಕ್ಷ ಅವರ ವೇತನಕ್ಕಾಗಿ ನಗರಸಭೆಯಿಂದ ಪಾವತಿ ಮಾಡಲಾಗುತ್ತದೆ ಎಂದು ನಗರಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದರು.

ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಿ, ಟ್ಯಾಂಕ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವ ಬಗ್ಗೆ ಹಾಗೂ ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಗರಸಭೆಯ ವತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾರ್ಮಿಕರು ನೆಲೆಸಿರುವ ಕಾಲೊನಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ನಗರಸಭೆಯ ವಾಹನಗಳಿಗೆ ಹಾಕುವ ಬಗ್ಗೆಯೂ ಜನರಿಗೆ ಸಲಹೆ ನೀಡಲಾಗುತ್ತದೆ ಎಂದು ವಿವರಿಸಿದರು.

ಫಾಗಿಂಗ್‌ಗೆ ಬೇಕಾದ ಸಲಕರಣೆಗಳೂ ನಮ್ಮಲ್ಲಿ ಸಿದ್ಧವಾಗಿವೆ. ಅಗತ್ಯ ಬಿದ್ದಾಗ ಬಳಸಲಿದ್ದೇವೆ. ಪ್ರತಿಯೊಬ್ಬರೂ ಮನೆಯ ಕಿಟಕಿಗಳನ್ನು ಸಂಜೆ 6ಗಂಟೆಗೆ ಮುಚ್ಚಿ 7.30ರ ನಂತರ ತೆರೆಯಿರಿ. ಬೆಳಿಗ್ಗೆಯೂ 7ಗಂಟೆಯ ನಂತರ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು. ಈ ಸಮಯದಲ್ಲಿ ಡೆಂಗಿ ಹರಡುವ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುತ್ತವೆ. ಈ ರೀತಿ ಮುಂಜಾಗ್ರತೆ ವಹಿಸಿದರೆ ರೋಗವನ್ನು ನಿಯಂತ್ರಿಸಬಹುದು.

‘ಸ್ವಚ್ಛತೆಗೆ ಆದ್ಯತೆ ನೀಡಿ’

ಮನೆಯ ಪರಿಸರವನ್ನು ಜನರೇ ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಹಾಗೆ ಮಾಡಿದರೆ ಚರಂಡಿಗಳಲ್ಲಿ ಕಸ ಸಂಗ್ರಹಗೊಂಡು ಕೊಳಚೆ ನೀರು ಹರಿದು ಹೋಗದೆ ಸೊಳ್ಳೆಗಳ ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಜನರೇ ಸ್ವಯಂ ಜಾಗೃತಿ ಮೂಡಿಸಿಕೊಳ್ಳಬೇಕು. ನಗರಸಭೆ ಕೂಡ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಬನ್ನಂಜೆ ರಾಘವೇಂದ್ರ ಪೈ ಹೇಳಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸಿ’

ಬನ್ನಂಜೆ, ಮೂಡ ನಿಡಂಬೂರು, ಕಲ್ಸಂಕ ಸೇರಿದಂತೆ ನಗರದ ಕೆಲ ಪ್ರದೇಶಗಳ್ಲಲಿ ಪ್ರತಿ ವರ್ಷ ಮಳೆ ನೀರು ನಿಂತು, ಕೊಳಚೆ ಸೃಷ್ಟಿಯಾಗಿ ಸೊಳ್ಳೆಗಳ ಉತ್ಪತಿಗೆ ಕಾರಣವಾಗುತ್ತಿದೆ. ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸಲಾಗುತ್ತಿದೆ. ಈಗ ಅದು ನಿಂತು ಹೋಗಿದೆ. ಅದನ್ನು ಶೀಘ್ರ ಪುನರಾರಂಭಿಸಬೇಕು ಎಂದು ಸರಳೇಬೆಟ್ಟು ಗಣೇಶ್‌ರಾಜ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT