ಬುಧವಾರ, ಅಕ್ಟೋಬರ್ 21, 2020
22 °C
ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್‌ ಫೆಡರೇಷನ್‌ ಒತ್ತಾಯ

ತಂತ್ರಜ್ಞಾನ ಆಧಾರಿತ ಮೀನುಗಾರಿಕೆ ಇಂದಿನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮೀನುಗಾರಿಕೆಗೆ ತೆರಳಿದಾಗ ಅವಘಡಗಳು ಸಂಭವಿಸಿದರೆ ಮೀನುಗಾರರ ಪ್ರಾಣ ರಕ್ಷಣೆಯ ಜತೆಗೆ ಮುಳುಗಿದ ಬೋಟ್‌ ಅನ್ನು ಮೇಲೆತ್ತುವ ವ್ಯವಸ್ಥೆ ಮಾಡಬೇಕು ಎಂದು ಮಲ್ಪೆ ಆಳಸಮುದ್ರ ಟ್ರಾಲ್‌ಬೋಟ್‌ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಒತ್ತಾಯಿಸಿದರು.

ಬುಧವಾರ ಓಷನ್‌ ಪರ್ಲ್‌ ಹೋಟೆಲ್‌ನಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್‌ ಫೆಡರೇಷನ್‌ ಜಂಟಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೋಟ್‌ ಬೆಲೆ ₹ 1 ಕೋಟಿಗೂ ಹೆಚ್ಚಿದ್ದು, ಮುಳುಗಡೆಯಾದರೆ ಮೀನುಗಾರರ ಬದುಕು ಕೂಡ ಮುಳುಗುತ್ತದೆ. ಈ ನಿಟ್ಟಿನಲ್ಲಿ ಅವಘಡಗಳಾದಾಗ ಬೋಟ್ ಅನ್ನು ಸಮುದ್ರದಿಂದ ಮೇಲೆತ್ತುವ ಸೌಲಭ್ಯವನ್ನು ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮೀನುಗಾರರು ಸಮುದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ತುರ್ತು ವೈದ್ಯಕೀಯ ನೆರವಿಗೆ ಏರ್ ಆಂಬುಲೆನ್ಸ್‌ ಸೌಲಭ್ಯ ಸಿಗಬೇಕು. ಹೃದಯಾಘಾತದಂತಹ ಸಂದರ್ಭ ತುರ್ತು ನೆರವಿಗೆ ಆಂಬುಲೆನ್ಸ್‌ನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇರಬೇಕು. ಮೀನುಗಾರರ ಪ್ರಾಣ ರಕ್ಷಣೆಗೆ ಇರುವ ಕರಾವಳಿ ಕಾವಲುಪಡೆಯಲ್ಲಿ ಸ್ಥಳೀಯ ನುರಿತ ಮೀನುಗಾರರನ್ನು ನೇಮಕ ಮಾಡಬೇಕು ಎಂದರು.

ಮೀನುಗಾರಿಕೆ ಮಾಡುವಾಗ ಅನಾರೋಗ್ಯಕ್ಕೆ ತುತ್ತಾಗಿ ಮಹಾರಾಷ್ಟ್ರ, ಕೇರಳದಲ್ಲಿ ಚಿಕಿತ್ಸೆ ಪಡೆಯಲು ಹೋದರೆ ಅಲ್ಲಿನ ಬಂದರುಗಳಲ್ಲಿ ನಮ್ಮನ್ನು ಶತ್ರುಗಳಂತೆ ಕಾಣುತ್ತಾರೆ. ಮೊದಲು ಚಿಕಿತ್ಸೆಗೆ ಅವಕಾಶ ಕೊಡದೆ ವಿಚಾರಣೆ ಹೆಸರಿನಲ್ಲಿ ಕಿರಿಕಿರಿ ಮಾಡುತ್ತಾರೆ. ಪರಿಣಾಮ ತುರ್ತು ಸಂದರ್ಭ ಚಿಕಿತ್ಸೆ ಸಿಗದೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದ ಕರಾವಳಿ ಕಾವಲುಪಡೆ ಅಧಿಕಾರಿಗಳು ಸಭೆ ನಡೆಸಿ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕು ಎಂದರು.

ಎಲ್ಲ ಮೀನುಗಾರರಿಗೂ ರೈತರಿಗೆ ನೀಡುವಂತೆ ಕಿಸಾನ್ ಕ್ರೆಡಿಟ್‌ ಕಾರ್ಡ್ ಸಾಲ ಸೌಲಭ್ಯ ಸಿಗಬೇಕು. ನದಿ ಹಾಗೂ ಸಮುದ್ರದಲ್ಲಿ ಮೃತಪಟ್ಟ ಮೀನುಗಾರರಿಗೆ ಸಮಾನವಾಗಿ ₹ 6 ಲಕ್ಷ ಪರಿಹಾರ ನೀಡಬೇಕು ಎಂದು ರವಿರಾಜ್ ಸುವರ್ಣ ಒತ್ತಾಯಿಸಿದರು.

ಮೀನುಗಾರರ ಮುಖಂಡ ನಿತಿನ್ ರಮಾನಂದ್‌ ಮಾತನಾಡಿ, ‘ತಂತ್ರಜ್ಞಾನ ಆಧಾರಿತ ಮೀನುಗಾರಿಕೆಗೆ ಕೇಂದ್ರ ಸರ್ಕಾರ ಅಗತ್ಯ ನೆರವು ಸಿಗಬೇಕು. ಆಳಸಮುದ್ರ ಮೀನುಗಾರಿಕೆ ಮಾಡುವಾಗ 4 ರಿಂದ 5 ನಾಟಿಕಲ್‌ ಮೈಲಿನ ನಂತರ ಮೊಬೈಲ್‌ ನೆಟ್‌ವರ್ಕ್‌ ಸಿಗುವುದಿಲ್ಲ. ಕನಿಷ್ಠ 100 ರಿಂದ 150 ನಾಟಿಕಲ್‌ ಮೈಲಿನವರೆಗೂ ಮೀನುಗಾರರು ಸಂವಹನ ನಡೆಸಲು ಸಾದ್ಯವಾಗುವಂತಹ ತಂತ್ರಜ್ಞಾನವನ್ನು ಬೋಟ್‌ಗಳಿಗೆ ಅಳವಡಿಸಿದರೆ, ಅವಘಡಗಳಾದಾಗ ತುರ್ತು ನೆರವು ಪಡೆಯಬಹುದು. ಜತೆಗೆ, ಬೋಟ್‌ ಮುಳುಗಡೆಯಾದ ಸ್ಥಳವನ್ನು ನಿಖರವಾಗಿ ಪತ್ತೆ ಹಚ್ಚಿ ಬೋಟ್‌ ಮೇಲೆತ್ತಬಹುದು ಎಂದರು.

‘ತಂತ್ರಜ್ಞಾನ ಆಧಾರಿತ ಮೀನುಗಾರಿಕೆಗೆ ಒತ್ತು ನೀಡಿ’

ಮೀನುಗಾರರನ್ನು ಮೊಬೈಲ್ ಸಾಧನಗಳೊಂದಿಗೆ ಸಂಪರ್ಕಿಸಲು ಸಾದ್ಯವಾಗಬಲ್ಲ ಉಪಗ್ರಹ ಆಧಾರಿತ ನೇವಿಗೇಷನ್ ತಂತ್ರಜ್ಞಾನ ವ್ಯವಸ್ಥೆ ಮೀನುಗಾರರಿಗೆ ಒದಗಿಸಬೇಕು. ಈ ವ್ಯವಸ್ಥೆ ಇಲ್ಲದೆ ಪ್ರತಿವರ್ಷ ಸಾವಿರಾರು ಮೀನುಗಾರರ ಕಡಲಿನಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆಯಿಂದ ಕಡಲು ಪ್ರಕ್ಷುಬ್ಧಗೊಂಡಾಗ ಮೀನುಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಬಹುದು. ಸಮುದ್ರದಲ್ಲಿ ಹೇರಳವಾದ ಮೀನು ಎಲ್ಲಿ ಲಭ್ಯವಾಗುತ್ತದೆ ಎಂಬ ಮಾಹಿತಿ ನೀಡಬಹುದು ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು