ಭಾನುವಾರ, ನವೆಂಬರ್ 27, 2022
26 °C
ಗಂಗೊಳ್ಳಿಯಲ್ಲಿ ಮೀನುಗಾರಿಕಾ ಜೆಟ್ಟಿಗೆ ಕುಸಿತ: ಸಚಿವ ಅಂಗಾರ ಪರಿಶೀಲನೆ

‘ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ಇಲ್ಲಿಗೆ ಸಮೀಪದ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಜೆಟ್ಟಿ ಬುಧವಾರ ಕುಸಿದಿದೆ. ಪರಿಣಾಮವಾಗಿ 150 ಮೀಟರಿಗೂ ಅಧಿಕ ಭಾಗ ನೀರು ಪಾಲಾಗಿದೆ. ಸ್ಥಳಕ್ಕೆ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್.ಅಂಗಾರ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಮುತುವರ್ಜಿಯಿಂದ ಮೀನುಗಾರರ ಬೇಡಿಕೆಗೆ ಅನುಗುಣವಾಗಿ ಅಂದಾಜು ₹ 12.8 ಕೋಟಿ ಅನುದಾನದಲ್ಲಿ ನೂತನ ಜೆಟ್ಟಿ ಕಾಮಗಾರಿ ನಡೆಯುತ್ತಿದೆ. ಕೆಲ ದಿನಗಳಿಂದ ಕಾಮಗಾರಿ ನಡೆಯುತ್ತಿದ್ದ ಕಡೆಗಳಲ್ಲಿ ಅಲ್ಲಲ್ಲಿ ಕುಸಿತಗಳು ನಡೆಯುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿದ್ದರೂ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬುಧವಾರ ಸಂಜೆ ಕುಸಿತದ ಪ್ರಮಾಣ ಹೆಚ್ಚಾಗಿದ್ದರಿಂದ 150 ಮೀಟರಿಗೂ ಉದ್ದದಲ್ಲಿ ಜೆಟ್ಟಿ ಕುಸಿದಿದ್ದು, ನೀರು ಪಾಲಾಗಿದೆ. ಜೆಟ್ಟಿಯ ಕಾಂಕ್ರಿಟ್ ತುಂಡುಗಳು ನೀರು ಪಾಲಾಗುತ್ತಿದ್ದುದನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಹಳೆ ಜೆಟ್ಟಿ ಕುಸಿತವಾದ ಕಾರಣ ಹೊಸ ಜೆಟ್ಟಿಯ ವಿನ್ಯಾಸ ಬದಲಿಸುವ ಕುರಿತು ಇಲಾಖೆ ಪ್ರಯತ್ನದಲ್ಲಿದೆ. ಕಾಮಗಾರಿಗಾಗಿ ಹಳೆ ಜೆಟ್ಟಿಯ ಡಯಫ್ರಮ್ ವಾಲ್ ನಡುವೆಯಿದ್ದ ರಾಡ್ ತುಂಡರಿಸಿ ಹೊಸ ಪಿಲ್ಲರ್ ಹಾಕಿದ್ದು, ಎರಡಕ್ಕೂ ಕೊಂಡಿಯಾಗಿದ್ದ ರಾಡ್ ತುಂಡು ಮಾಡಿದ್ದರಿಂದ ಹಳೆ ಜೆಟ್ಟಿ ಕುಸಿತಕ್ಕೊಳಗಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಯ ಮೇಲೆ ಹಳೆಯ ಜೆಟ್ಟಿಯ ಕಾಂಕ್ರೀಟ್ ಅಂಶಗಳು ಕುಸಿದ ಬಿದ್ದು, ನಿರ್ಮಾಣ ಹಂತದಲ್ಲಿದ್ದ ಕಂಬಗಳು ಕುಸಿದು ನೀರು ಪಾಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮ: ಜೆಟ್ಟಿ ಕುಸಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ರಾಜ್ಯ ಮೀನುಗಾರಿಕಾ ಹಾಗೂ ಬಂದರು ಸಚಿವ ಎಸ್.ಅಂಗಾರ, ‘ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣ ಸರ್ಕಾರ ಹಾಗೂ ನಮಗೆ ಮಾಡಿದ ಅವಮಾನವಾಗಿದೆ. ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಿದೆ. ಕಾಮಗಾರಿಯಲ್ಲಿ ಕಳಪೆ ಕಂಡು ಬಂದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಹೇಳಿದರು.

ಜೆಟ್ಟಿ ಕುಸಿತದಿಂದ ಮೀನುಗಾರಿಕೆಗೆ ತೊಂದರೆಯಾಗದಂತೆ, ಜೆಟ್ಟಿ ಪುನರ್ ನಿರ್ಮಾಣಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಬಂದರುಗಳ ಯೋಜನೆಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ಸಂಬಂಧಿತ ಇತರ ಇಲಾಖೆಗಳ ಅನುಮತಿ ಪಡೆದುಕೊಂಡ ಬಳಿಕವಷ್ಟೇ ಅನುದಾನ ನೀಡಲಾಗುತ್ತದೆ ಎಂದರು.

ಜೆಟ್ಟಿ ಪುಣೆಯ ಸಿಡಬ್ಲ್ಯುಪಿಆರ್‌ಎಸ್ ಸಂಸ್ಥೆಯ ಬದಲು ಬೆಂಗಳೂರಿನ ಖಾಸಗಿ ಸಂಸ್ಥೆಯವರು ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಯ ವಿನ್ಯಾಸ ಮಾಡಿದ ಬಗ್ಗೆ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿವಿಧ ಸಂಸ್ಥೆಗಳು ಬೇರೆ ಬೇರೆ ತಾಂತ್ರಿಕತೆ ಬಗ್ಗೆ ವಿನ್ಯಾಸ ನೀಡುತ್ತಿದ್ದು, ವಿನ್ಯಾಸದಲ್ಲಿ ಲೋಪ ಕಂಡು ಬಂದಲ್ಲಿ ಕ್ರಮಕೈಗೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.

ಕಾಮಗಾರಿಗೆ ಯಾವ ಯಾವ ಹಂತದಲ್ಲಿ ಎಷ್ಟೆಷ್ಟು ಹಣ ಬಿಡುಗಡೆಯಾಗಿದೆ ಎನ್ನುವ ಮಾಹಿತಿ ಪಡೆದುಕೊಂಡು, ಲೋಪವಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಇಲಾಖಾಧಿಕಾರಿಗಳ ಸಭೆ ಕರೆಯಲಾಗಿದ್ದು, ಅಲ್ಲಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಬೇಕು ಎನ್ನುವ ಸ್ಥಳೀಯರ ಬೇಡಿಕೆಯನ್ನು ಪರಿಶೀಲಿಸಲಾಗುವುದು. ರಾಜಕೀಯಕ್ಕಾಗಿ ಸಿದ್ದರಾಮಯ್ಯ ಟ್ವಿಟ್ ಮೂಲಕ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು, ಎಷ್ಟು ಕಮೀಷನ್ ಪಡೆದಿದ್ದಾರೆ ಎನ್ನುದನ್ನು ಅವರು ಸ್ಪಷ್ಟಪಡಿಸಬೇಕು. ಬಿಜೆಪಿ ಸರ್ಕಾರ ಆರೋಪ ಕೇಳಿ ಬಂದಾಗ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ವ್ಯವಹಾರ ನಡೆದಿಲ್ಲವೇ ಎಂದು ಪ್ರಶ್ನಿಸಿದ ಅವರು, ಅವರ ಅನಗತ್ಯ ಪ್ರಶ್ನೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಕಳಪೆ ಕಾಮಗಾರಿಯಿಂದಾಗಿ ಮೀನುಗಾರರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇಲ್ಲಿನ ಅಪೂರ್ಣ ಹಾಗೂ ಅಸಮರ್ಪಕ ಕಾಮಗಾರಿಯಿಂದಾಗಿ ಮೀನುಗಾರರು ಭಟ್ಕಳ, ತದಡಿ, ಮಲ್ಪೆ ಬಂದರುಗಳಲ್ಲಿ ಬೋಟ್ ನಿಲ್ಲಿಸಿ, ಬರಬೇಕಾದ ಅನಿವಾರ್ಯತೆ ಇದೆ. ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಈ ರೀತಿಯ ದುರಂತಗಳು ಸಂಭವಿಸುತ್ತಿದೆ. ಮೀನುಗಾರರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೀನುಗಾರ ಮುಖಂಡರಾದ ರಮೇಶ್ ಕುಂದರ್, ರಾಮಪ್ಪ ಖಾರ್ವಿ, ಯಶವಂತ್ ಖಾರ್ವಿ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಂಜಿನಿಯರ್ ಶ್ರೀನಿವಾಸ ಮೂರ್ತಿ, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಪಿ.ನಾಗರಾಜ್, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾದ ಗಣೇಶ, ಉದಯಕುಮಾರ್, ಸುಮಲತಾ, ದಿವಾಕರ ಖಾರ್ವಿ, ಉಪನಿರ್ದೇಶಕ ಕುಮಾರಸ್ವಾಮಿ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಇದ್ದರು.

ಸಿದ್ದರಾಮಯ್ಯ ಟ್ವೀಟ್‌

ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರ ಇಂದು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ. ₹ 12 ಕೋಟಿ ವೆಚ್ಚದಲ್ಲಿ ಜೆಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರು ಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ ಬಿಜೆಪಿ ಕರ್ನಾಟಕಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು