ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಮಾದರಿ ಸರ್ಕಾರಿ ಗೋಶಾಲೆ ನಿರ್ಮಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಅತ್ಯಾಧುನಿಕ ಮೂಲಸೌಲಭ್ಯಗಳು ಇರುವಂತೆ ನೀಲನಕ್ಷೆ ರೂಪಿಸಿ
Last Updated 17 ಜೂನ್ 2022, 15:25 IST
ಅಕ್ಷರ ಗಾತ್ರ

ಉಡುಪಿ‌: ಸಹಭಾಗಿತ್ವದಲ್ಲಿ ಸರ್ಕಾರಿ ಗೋಶಾಲೆಯನ್ನು ರಾಜ್ಯಕ್ಕೆ ಮಾದರಿಯಾಗಿ ನಿರ್ಮಿಸಬೇಕು. ಗೋವುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಗೋಶಾಲೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಆಯವ್ಯಯದಲ್ಲಿ ಗೋಶಾಲೆಯನ್ನು ಪ್ರಾರಂಭಿಸಲು ಸರ್ಕಾರ ಘೋಷಿಸಿದ್ದು, ಅಗತ್ಯ ಅನುದಾನ ನೀಡಿದೆ.

ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಅಗತ್ಯವಿರುವ ಭೂಮಿ ನೀಡಿದ್ದು, ಗೋಶಾಲೆಯನ್ನು ಆಧುನಿಕ ಶೈಲಿಯಲ್ಲಿ , ವೈಜ್ಞಾನಿಕ ಮೂಲಸೌಕರ್ಯಗಳನ್ನು ಒಳಗೊಂಡಿರುವಂತೆ ನೀಲ ನಕ್ಷೆಯನ್ನು ತಯಾರಿಸಬೇಕು. ಅದರಂತೆ ಗೋಶಾಲೆಯನ್ನು ನಿರ್ಮಿಸಿ, ಶೀಘ್ರ ಆರಂಭಿಸಬೇಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ರಿ ತಾಲ್ಲೂಕಿನ ಕೆರೆಬೆಟ್ಟು ಗ್ರಾಮದ ಸರ್ವೇ ನಂ.79/2 ರಲ್ಲಿ 13.24 ಎಕರೆ ಜಮೀನನ್ನು ಹಾಗೂ ಕುಂದಾಪುರದ ಗೋಳಿಹೊಳೆ ಗ್ರಾಮದ ಸರ್ವೆ ನಂ.279 ರಲ್ಲಿ 9.85 ಎಕ್ರೆ ಜಮೀನನ್ನು ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ಕಾಯ್ದಿರಿಸಲಾಗಿದೆ. ಗೋಶಾಲೆಗೆ ತಡೆ ಬೇಲಿ, ಕೆರೆ ನಿರ್ಮಾಣದ ಕಾಮಗಾರಿಗಳನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಸಮರ್ಪಕ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 12 ಗೋಶಾಲೆಗಳನ್ನು ಖಾಸಗಿ ಸಂಸ್ಥೆಗಳು ನಡೆಸುತ್ತಿದ್ದು, ಇಲ್ಲಿ 2660ಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ ಎಂದರು.

ಜಾನುವಾರುಗಳನ್ನು ರಕ್ಷಣೆ ಮಾಡುವ ರೀತಿಯಲ್ಲಿಯೇ ಇತರೆ ಪ್ರಾಣಿಗಳನ್ನು ರಕ್ಷಿಸಲು ಗೋಶಾಲೆ ಮಾದರಿಯಲ್ಲಿ ಪ್ರಾಣಿ ರಕ್ಷಣಾ ಶೆಲ್ಟರ್‌ಗಳನ್ನು ಪ್ರಾರಂಭಿಸಲು ಪ್ರಾಣಿಪ್ರಿಯರು ಹಾಗೂ ಅಧಿಕಾರಿಗಳು ಚಿಂತಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸರ್ಕಾರದಿಂದ ಜಿಲ್ಲಾ ಪ್ರಾಣಿದಯಾ ಸಂಘಕ್ಕೆ ಬಿಡುಗಡೆಯಾಗಿರುವ ಅನುದಾನವನ್ನು ಬಳಕೆ ಮಾಡಿಕೊಂಡು ಪ್ರಾಣಿಗಳ ರಕ್ಷಣೆಗೆ ಜಾರಿಗೆ ತಂದಿರುವ ಕಾಯ್ದೆಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಅಭಿಯಾನ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಶಂಕರ್ ಶೆಟ್ಟಿ , ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಜಿಲ್ಲೆಯ ಪ್ರಾಣಿದಯಾ ಸಂಘದ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT