‘ಯುವ ಪೀಳಿಗೆ ಸಂಶೋಧನೆಯತ್ತ ಹೊರಳಲಿ’

ಉಡುಪಿ: ಹಿರಿಯ ಪುರಾತತ್ವ ಶಾಸ್ತ್ರಜ್ಞರಾದ ಪ್ರೊ.ಅ.ಸುಂದರ ಅವರಿಗೆ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ಸಮುದಾಯ ಭವನದಲ್ಲಿ ಈಚೆಗೆ ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಅ.ಸಂದರ, ಇಂದಿನ ಯುವ ಪೀಳಿಗೆ ಮಂಜೇಶ್ವರ ಗೋವಿಂದ ಪೈ, ಕೋಟ ಶಿವರಾಮ ಕಾರಂತರ ಬರಹಗಳನ್ನು ಓದಿ ಸಂಶೋಧನೆಯತ್ತ ಗಮನ ಕೇಂದ್ರೀಕರಿಸಬೇಕು. ಇಲ್ಲಿಯವರೆಗೂ ಹೊರಗಿನವರು ಬರೆದ ಇತಿಹಾಸದಲ್ಲಿ ಹಲವು ತಪ್ಪುಗಳಾಗಿದ್ದು, ಅವುಗಳನ್ನು ತಿದ್ದಬೇಕಾಗಿರುವುದು ಇಂದಿನ ಅಗತ್ಯ ಎಂದರು.
ಕೆಲವು ಇತಿಹಾಸಕಾರರು ತಿಳಿದಷ್ಟು ಮಾಹಿತಿ ಸಂಗ್ರಹಿಸಿ ಇತಿಹಾಸ ಬರೆದಿದ್ದಾರೆ. ಕೆಲವರು ಪ್ರಾಮಾಣಿಕವಾಗಿ ಇತಿಹಾಸ ಬರೆದಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಗೋವಿಂದ ಪೈಗಳು ಸಂಶೋಧನಾ ಕಾರ್ಯ ಮಾಡಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.
ಪ್ರೊ.ಪುಂಡಿಕಾಯ್ ಗಣಪತಿ ಭಟ್ ಮಾತನಾಡಿ, ಸುಂದರ ಅವರಲ್ಲಿ ಪಾಂಡಿತ್ಯದ ಜತೆಗೆ ಅಪಾರ ಶಿಷ್ಯ ವಾತ್ಸಲ್ಯವನ್ನು ಕಾಣಬಹುದು. ಅರ್ಹ ವ್ಯಕ್ತಿಗೆ ಅರ್ಹ ಪ್ರಶಸ್ತಿ ಸಂದಿದೆ ಎಂದರು.
ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಮಾತನಾಡಿ, ಪ್ರೊ.ಅ.ಸುಂದರ ಅವರ 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳಲ್ಲಿ ಅತ್ಯುತ್ತಮವಾದುವುಗಳನ್ನು ಆಯ್ದು ಮಾಹೆ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸುವ ಉದ್ದೇಶವಿದೆ ಎಂದರು.
ಡಾ.ಪಾದೇಕಲ್ಲು ವಿಷ್ಣುಭಟ್ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಸ್ಮಾರಕ ಪ್ರಶಸ್ತಿಯ ಕುರಿತು ಮಾತನಾಡಿದರು. ಡಾ.ಬಾಲಕೃಷ್ಣ ಹೆಗಡೆ, ಡಾ.ಎಸ್.ಜಿ.ಸಾಮಕ್, ಡಾ.ಬಿ.ಜಗದೀಶ್ ಶೆಟ್ಟಿ, ವೀಣಾ ಮಾತನಾಡಿದರು. ಡಾ.ಪಾದೇಕಲ್ಲು ವಿಷ್ಣುಭಟ್ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಸ್ಮಾರಕ ಪ್ರಶಸ್ತಿಯ ಕುರಿತು ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.