ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿಯಲ್ಲಿ ಧಾರಾಕಾರ ಮಳೆ, ಪ್ರವಾಹ ಸ್ಥಿತಿ

Published 4 ಜುಲೈ 2024, 23:25 IST
Last Updated 4 ಜುಲೈ 2024, 23:25 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಂದೂರು ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿದಿರುವುದರಿಂದ ಸೌಪರ್ಣಿಕಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ನದಿಯ ತೀರದ ನಾವುಂದ, ಸಾಲ್ಬುಡ, ಬಡಾಕೆರೆ, ನಾಡ, ಕಡ್ಕೆ, ಮರವಂತೆ, ಪಡುಕೋಣೆ ಪ್ರದೇಶಗಳಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

ಭಾರಿ ಮಳೆಯ ಕಾರಣ ಬೈಂದೂರು ವಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಕುಂದಾಪುರ ತಾಲ್ಲೂಕಿನ ವಿವಿಧೆಡೆ ತಗ್ಗುಪ್ರದೇಶಗಳು ಜಲಾವೃತವಾಗಿವೆ. ಹಿರಿಯಡಕ ಪರಿಸರದಲ್ಲಿ ಪೆರ್ಡೂರು ಹರಿಖಂಡಿಗೆ ಸಂಪರ್ಕಿಸುವ ಅಣ್ಣಾಲು, ಕಲ್ಲಂಗಳ ಸೇತುವೆಗಳು ಹಾಗೂ ಸುತ್ತ ಮುತ್ತಲಿನ ಕೃಷಿ ಭೂಮಿಗಳು ಜಲಾವೃತವಾಗಿದ್ದವು. ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಗಿದ್ದು ಪ್ರವಾಹ ಇಳಿಮುಖವಾಗಿದೆ.

ಆಗುಂಬೆಯಲ್ಲಿ ಉತ್ತಮ ಮಳೆಯಾಗುತಿದ್ದು ಮರವೊಂದು ಚಲಿಸುತಿದ್ದ ಓಮ್ನಿ ಕಾರಿನ ಮೇಲೆ ಬಿದ್ದಿದ್ದರಿಂದ ಕಾರಿನ ಮೇಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಸಂಜೆ ವೇಳೆ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸುಮಾರು ನಾಲ್ಕು ಕಿ‌.ಮೀ. ದೂರದವರೆಗೆ ವಾಹನ ದಟ್ಟಣೆ ಉಂಟಾಗಿತ್ತು.

ಬ್ರಹ್ಮಾವರ ತಾಲ್ಲೂಕಿನಲ್ಲಿ ಹರಿಯುವ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದು, ಉಪ್ಪೂರು, ಆರೂರು, ಬೆಳ್ಮಾರು, ಹಾವಂಜೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಬುಧವಾರ ರಾತ್ರಿ ಬಿಟ್ಟು ಬಿಟ್ಟು ಬಿರುಸಿನ ಮಳೆಯಾಗಿತ್ತು. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲ್ಲೂಕಿನಲ್ಲಿ ರಾತ್ರಿ ಇಡೀ ಭಾರಿ ಮಳೆಯಾಗಿದ್ದರಿಂದ, ಈ ಎರಡು ತಾಲ್ಲೂಕುಗಳ ಅಂಗನವಾಡಿ, ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಿಗ್ಗೆ ತನಕ ಧಾರಾಕಾರ ಮಳೆ ಸುರಿದಿದ್ದು, ನಂತರ ಇಳಿಮುಖವಾಗಿದೆ‌. ರಾತ್ರಿ ಇಡೀ ಸುರಿದ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಇದೇ 10ರವರೆಗೆ ಭಾರಿ ಗಾಳಿಯಿಂದ ಕೂಡಿದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 5ರಿಂದ 8ರವರೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಗುಡ್ಡ ಕುಸಿದು ಮಹಿಳೆ ಸಾವು (‌ಕುಂದಾಪುರ ವರದಿ): ಕೊಲ್ಲೂರಿನಲ್ಲಿ ಗುಡ್ಡ ಕುಸಿದು ಕೊಲ್ಲೂರು ಗ್ರಾಮದ ಹಳ್ಳಿ ಬೇರು ನಿವಾಸಿ ಅಂಬಾ (45) ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಕೊಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ಅಡಿಗ ಅವರ ಮನೆಯ ಹಿಂಭಾಗದಲ್ಲಿ ಅಂದಾಜು 60 ಅಡಿ ಎತ್ತರದ ಗುಡ್ಡ ಕುಸಿದಿದೆ. ಅಡಿಗರ ಮನೆಯ ಕೆಲಸ ಮಾಡುತ್ತಿದ್ದ ಅಂಬಾ, ಮಧ್ಯಾಹ್ನ ಮನೆಯ ಹಿಂಭಾಗಕ್ಕೆ ತೆರಳಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಗುಡ್ಡ ಕುಸಿದು ಮಣ್ಣಿನ ರಾಶಿಯಲ್ಲಿ ಹೂತು ಹೋಗಿದ್ದರು. ಕೊಲ್ಲೂರಿನ ಟ್ಯಾಕ್ಸಿ ಹಾಗೂ ಜೀಪ್ ಚಾಲಕರ ಸಂಘದವರು ಮಹಿಳೆಯನ್ನು ಮೇಲಕ್ಕೆತ್ತಿದರು. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಮಳೆ ಪ್ರಮಾಣ: 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ 23 ಸೆಂ.ಮೀ, ಕುಂದಾಪುರದಲ್ಲಿ 13, ಕಾರ್ಕಳದಲ್ಲಿ 11, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆಯಲ್ಲಿ 23, ಕಮ್ಮರಡಿ 20, ಕಿಗ್ಗಾ 19, ಬಿಳ್ಳೂರು 17, ಕೊಟ್ಟಿಗೆಹಾರ 10, ಹರಿಹರಪುರ 13 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಮೇಲಂತಬೆಟ್ಟುವಿನಲ್ಲಿ 15.90 ಸೆಂ.ಮೀ, ಲಾಯಿಲ 15, ಕಲ್ಮಂಜ 15, ಬಳಂಜ 15, ಉಜಿರೆ 14, ಮುಂಡಾಜೆ 12, ಅಂಡಿಂಜೆ 12, ಬಂಟ್ವಾಳ ತಾಲ್ಲೂಕಿನ ಸರಪಾಡಿ 12, ಮೂಡುಬಿದಿರೆ ತಾಲ್ಲೂಕಿನ ನೆಲ್ಲಿಕಾರಿನಲ್ಲಿ 14 ಹಾಗೂ ಶಿರ್ತಾಡಿಯಲ್ಲಿ 11 ಸೆಂ.ಮೀ ಮಳೆಯಾಗಿದೆ.

ಭಾಗಮಂಡಲ, ಶಾಂತಳ್ಳಿಯಲ್ಲಿ ಮಳೆ

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ
ಯವರೆಗೂ ಮಳೆ ಸುರಿದಿದೆ. ಭಾಗಮಂಡಲ, ಶಾಂತಳ್ಳಿ, ಮಡಿಕೇರಿಯಲ್ಲಿ ಬಿರುಸಾಗಿದ್ದರೆ, ಉಳಿದೆಡೆ ಸಾಧಾರಣವಾಗಿತ್ತು.

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗಳಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ. ಉಳಿದಂತೆ, ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಹೋಬಳಿಯಲ್ಲಿ 9, ಮಡಿಕೇರಿ ಹಾಗೂ ಸಂಪಾಜೆ
ಯಲ್ಲಿ ತಲಾ 8, ನಾಪೋಕ್ಲು ಹಾಗೂ ಶ್ರೀಮಂಗಲದಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ. ಮಳೆಯಿಂದ ವಿರಾಜಪೇಟೆ– ಕರಡ ರಸ್ತೆಗೆ ಕೆದಮುಳ್ಳೂರು ಸಮೀಪ ಹಾನಿಯಾಗಿದೆ. ಕೆಲವೆಡೆ ಮಣ್ಣು ಕುಸಿದಿದ್ದು, ಕೆಲವೆಡೆ ರಸ್ತೆ ಬಿರುಕು ಬಿಟ್ಟಿದೆ.

ಮಲಪ್ರಭಾ ನದಿ ಮಟ್ಟ ಏರಿಕೆ

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ನಿರಂತರ ಮಳೆ ಸುರಿಯುತ್ತಿದ್ದು, ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಹರಿವು ಪ್ರಮಾಣ ವೃದ್ಧಿಸಿದೆ. ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಬೈಲ್, ಕುಂಬಾರ, ಕರೀಕಟ್ಟಿ, ತಟ್ಟಿ, ಕೋಟ್ನಿ ಹಳ್ಳಗಳಲ್ಲೂ ನೀರಿನ ರಭಸ ಮುಂದುವರಿದಿದೆ. ಹಬ್ಬನಹಟ್ಟಿ ಆಂಜನೇಯ ದೇವಾಲಯ ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿದೆ.

ಭೀಮಗಡ ವನ್ಯಧಾಮ, ಲೋಂಡಾ ಮತ್ತು ಕಣಕುಂಬಿ ಅರಣ್ಯ ಪ್ರದೇಶದ 30ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಣ್ಯ ಪ್ರದೇಶ ಸುತ್ತುವರಿದ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಹುತೇಕ ಕಡೆ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಮೊಬೈಲ್ ನೆಟ್‌ವರ್ಕ್ ಕೈ ಕೊಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನಿಪ್ಪಾಣಿ ವರದಿ: ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಅತಿ ಮಳೆಯಾಗುತ್ತಿರುವ ಕಾರಣ, ತಾಲ್ಲೂಕಿನಲ್ಲಿ ಹರಿಯುವ ವೇದಗಂಗಾ, ದೂಧ ಗಂಗಾ ನದಿಗಳ ನೀರಿನ ಮಟ್ಟ ಏರಿದೆ.

ಬಾರವಾಡ– ಕುನ್ನೂರ ಕಿರುಸೇತುವೆ ಮೇಲೆ ವೇದಗಂಗಾ ಮತ್ತು ದೂಧಗಂಗಾ ಸಂಗಮಗೊಂಡಿರುವ ನದಿ ನೀರು ರಸ್ತೆ ಮೇಲೆ ಗುರುವಾರ ಎರಡು ಅಡಿಯಷ್ಟು ಹರಿದಿದೆ. ರಸ್ತೆ ಜಲಾವೃತಗೊಂಡ ಕಾರಣ ಸಂಚಾರ ಸ್ಥಗಿತಗೊಳಿಸಲಾಗಿದೆ.

ಚಿಕ್ಕೋಡಿ ವರದಿ: ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಯಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರ ಕ್ಯುಸೆಕ್ ನೀರು ಹೆಚ್ಚಳವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT