ಶನಿವಾರ, ಅಕ್ಟೋಬರ್ 31, 2020
27 °C

ಕೃಷ್ಣನೂರು ಉಡುಪಿಗೆ ಜಲ ದಿಗ್ಬಂಧನ: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಎಡೆಬಿಡದೆ ಸುರಿದ ಮಹಾಮಳೆಗೆ ಕಡಲ ತಡಿಯ ಉಡುಪಿ ಜಿಲ್ಲೆ ಅಕ್ಷರಶಃ ನಲುಗಿಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದಶಕಗಳಲ್ಲಿ ಕಂಡರಿಯದ ಮಳೆಯಿಂದ ಕೃಷ್ಣನೂರು ಜಲದಿಗ್ಬಂಧನಕ್ಕೆ ಸಿಲುಕಿದೆ.

ಉಡುಪಿ, ಬ್ರಹ್ಮಾವರ, ಕಾಪು, ಕಾರ್ಕಳ ತಾಲ್ಲೂಕುಗಳು ಪ್ರವಾಹದಿಂದ ತತ್ತರಿಸಿದ್ದು, ಸಾವಿರಾರು ಮನೆಗಳು ಜಲಾವೃತವಾಗಿವೆ. ರಸ್ತೆಗಳು ಕೊಚ್ಚಿಹೋಗಿದ್ದು, ಸೇತುವೆಗಳು ಬಿದ್ದಿವೆ. ತಗ್ಗುಪ್ರದೇಶಗಳಲ್ಲಿ ವಾಸವಿದ್ದ ಜನರ ಜೀವನ ಬೀದಿಗೆ ಬಿದ್ದಿದೆ.

ಉಡುಪಿಗೆ ವರುಣಾಘಾತ

ವರುಣನ ಆರ್ಭಟಕ್ಕೆ ಸಿಲುಕಿ ಅತಿ ಹೆಚ್ಚು ಬಾಧಿತವಾಗಿರುವುದು ಉಡುಪಿ ತಾಲ್ಲೂಕು. ನಿರಂತರವಾಗಿ ಸುರಿದ ಮಳೆಯಿಂದ ಉಡುಪಿ ನಗರದ ಬಹುತೇಕ ಭಾಗ ಭಾಗಶಃ ಮುಳುಗಿತ್ತು. ಹಲವು ಬಡಾವಣೆಗಳು ಜಲಾವೃತಗೊಂಡು, ನೂರಾರು ಮನೆಗಳಿಗೆ ನೀರು ನುಗ್ಗಿತು. 

ರಕ್ಷಣೆಗೆ ಮೊರೆ

ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರು ರಕ್ಷಣೆಗೆ ಮೊರೆಯಿಟ್ಟರು. ಅಗ್ನಿಶಾಮಕ ಸಿಬ್ಬಂದಿ, ಕೋಸ್ಟ್‌ಗಾರ್ಡ್‌ ಹಾಗೂ ಸ್ಥಳೀಯರು ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿ ನೆರೆಯಲ್ಲಿ ಸಿಲುಕಿದವರನ್ನು ಬೋಟ್‌ಗಳಲ್ಲಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದರು. ವೃದ್ಧರನ್ನು ನೀರಿನಲ್ಲಿ ಹೊತ್ತು ತಂದ ದೃಶ್ಯಗಳು ಮಳೆಯ ಭೀಕರತೆಗೆ ಸಾಕ್ಷಿಯಾಗಿತ್ತು. ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಸ್ಥಳೀಯ ಮುಖಂಡರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು.

ಕೃಷ್ಣಮಠಕ್ಕೆ ನುಗ್ಗಿದ ನೀರು

ಕೃಷ್ಣಮಠದ ಪಾರ್ಕಿಂಗ್ ಪ್ರದೇಶ ದ್ವೀಪದಂತಾಗಿ ಅಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ಕಾರುಗಳು ಭಾಗಶಃ ಮುಳುಗಿದ್ದವು. ರಥಬೀದಿ, ರಾಜಾಂಗಣ, ಪ್ರವಾಸಿ ಮಂದಿರಗಳಿಗೆ ನೀರು ನುಗ್ಗಿತ್ತು. ಪುತ್ತಿಗೆ ಹೊಳೆ ತುಂಬಿ ಹರಿದು ಪೆರ್ಡೂರು ನಗರದ ಮುಖ್ಯರಸ್ತೆ ಜಲಾವೃತಗೊಂಡಿತ್ತು. ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠದ ಆವರಣ ಮಳೆನೀರಿನಿಂದ ಆವೃತ್ತವಾಗಿತ್ತು.

ಯಾವ ಪ್ರದೇಶಗಳು ಜಲಾವೃತ

ಉಡುಪಿ ತಾಲ್ಲೂಕಿನ ಬಡಗುಪೇಟೆ, ಕಲ್ಸಂಕ, ನಿಟ್ಟೂರು, ಬನ್ನಂಜೆ, ಮಠದಬೆಟ್ಟು, ಪುತ್ತೂರು, ಬೈಲಕೆರೆ, ಕಿದಿಯೂರು, ಆದಿ ಉಡುಪಿ, ಗುಂಡಿಬೈಲು ಮೂಡುಸಗ್ರಿ, ಕೊಡವೂರು, ಕಿನ್ನಿಮೂಲ್ಕಿ, 76 ಬಡಗಬೆಟ್ಟು, ಮಣಿಪಾಲ, ಶಿವಳ್ಳಿ, ಪೆರಂಪಳ್ಳಿ, ಅಲೆವೂರು, ಬೊಮ್ಮರಬೆಟ್ಟು, ಪುತ್ತಿಗೆ, ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು, ಆರೂರು, ಹೇರೂರು, ಕಾಪು ತಾಲ್ಲೂಕಿನ ಉಳಿಯಾರಗೋಳಿ ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿದ್ದವು.

ಸ್ವರ್ಣ, ಸೀತಾ ನದಿ ತುಂಬಿ ಹರಿದ ಪರಿಣಾಮ ಕರಾವಳಿ ಹಾಗೂ ಮಲೆನಾಡಿಗೆ ಸಂಪರ್ಕ ಕಲ್ಪಿಸುವ 169 ‘ಎ’ ರಾಷ್ಟ್ರೀಯ ಹೆದ್ದಾರಿಯ ಪೆರ್ಡೂರು ಹಾಗೂ ಹೆಬ್ರಿ ಭಾಗದಲ್ಲಿ ರಸ್ತೆ ಸಂಚಾರ ಕಡಿತವಾಗಿತ್ತು. ಉಡುಪಿ ಮಣಿಪಾಲ್‌ ರಸ್ತೆಯೂ ಜಲಾವೃತಗೊಂಡು ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.

ಪಶ್ಚಿಮಘಟ್ಟದಲ್ಲಿ ನದಿಗಳು ತುಂಬಿ ಹರಿದ ಪರಿಣಾಮ ಕಾರ್ಕಳ ತಾಲ್ಲೂಕಿನ ಹಲವೆಡೆ ಸೇತುವೆಗಳು ಬಿದ್ದಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಮೂರು ಬೋಟ್‌ ಮುಳುಗಡೆ

ಭಾರಿ ಮಳೆಗೆ ಸಮುದ್ರ ಪಕ್ಷುಬ್ಧಗೊಂಡಿದ್ದು, ಮಲ್ಪೆಯಲ್ಲಿ ಮೂರು ಬೋಟ್‌ಗಳು ಮುಳುಗಡೆಯಾಗಿವೆ. ಬೋಟ್‌ನಲ್ಲಿದ್ದ ಮೀನುಗಾರರು ಬಂಡೆಯ ಮೇಲೆ ಆಶ್ರಯಪಡೆದು ಸುರಕ್ಷಿತವಾಗಿ ದಡ ಸೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು