ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್– ಕೇಸರಿ ಶಾಲು ಸಂಘರ್ಷ ತೀವ್ರ

ಶಿರವಸ್ತ್ರ, ಶಾಲು ಧರಿಸಿದವರಿಗೆ ಪ್ರವೇಶ ನಿರಾಕರಣೆ; ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಅವಕಾಶ
Last Updated 4 ಫೆಬ್ರುವರಿ 2022, 17:59 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಶುಕ್ರವಾರವೂ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶದ್ವಾರದಲ್ಲಿ ಕುಳಿತು ಪ್ರತಿಭಟಿಸಿದರು. ಪೋಷಕರು, ಸಂಘಟನೆಗಳ ಮುಖಂಡರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಮವಸ್ತ್ರ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಶುಕ್ರವಾರ ಕಾಲೇಜಿನೊಳಗೆ ಪ್ರವೇಶ ನೀಡಲಾಗುತ್ತಿತ್ತು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು, ‘ಪ್ರವೇಶ ನೀಡಲೇಬೇಕು’ ಎಂದು ಒತ್ತಾಯಿಸಿ ಕಾಲೇಜು ಆವರಣ ಪ್ರವೇಶಿಸಿದರು. ಇದಕ್ಕೆ ಪ್ರತಿಯಾಗಿ ಆವರಣದಲ್ಲಿದ್ದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಓಡಾಡಲು ಆರಂಭಿಸಿದರು.

ಬಿಗುವಿನ ವಾತಾವರಣ ನಿರ್ಮಾಣ ಆಗುತ್ತಿರುವುದನ್ನು ಗಮನಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಆವರಣದಿಂದ ಹೊರ ಹೋಗುವಂತೆ ಸೂಚಿಸಿದರು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನಡುವೆ ವಾಗ್ವಾದ ನಡೆಯಿತು.

‘ಹಿಂದಿನಿಂದಲೂ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೇವೆ. ಈಗ ವಿರೋಧಿಸುವುದು ಸರಿಯಲ್ಲ. ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು’ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ‘ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಸಮವಸ್ತ್ರ ಹೊರತಾಗಿ ಯಾವುದೇ ವಸ್ತ್ರ ಧರಿಸುವಂತಿಲ್ಲ’ ಎಂದು ತಿಳಿಸಿದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಆವರಣದಿಂದ ಹೊರಹಾಕಿದರು.

ಉಪನ್ಯಾಸಕರ ನಡೆ ವಿರೋಧಿಸಿ ವಿದ್ಯಾರ್ಥಿನಿಯರು ಪ್ರವೇಶದ್ವಾರ
ದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರತಿಯಾಗಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿದರು. ವಿದ್ಯಾರ್ಥಿನಿಯರ ಪೋಷಕರು ಕಾಲೇಜು ಆಡಳಿತ ಮಂಡಳಿಯ ನಡೆ ಖಂಡಿಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸರು ಗುಂಪನ್ನು
ಚದುರಿಸಿದರು.

ವಿವಾದ ವಿಸ್ತರಣೆ: ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜು, ಡಾ.ಬಿ.ಬಿ. ಹೆಗ್ಡೆ ಕಾಲೇಜು, ಕೋಟೇಶ್ವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನೊಳಗೆ ಪ್ರವೇಶ ನಿರ್ಬಂಧಿಸಲಾಯಿತು.

ಕುಂದಾಪುರದ ಆರ್‌.ಎನ್‌. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿತ್ತು.

ಕೆಲವೆಡೆ ಅವಕಾಶ: ಬಸ್ರೂರಿನ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಯಿತು.

ಬೈಂದೂರು ಹಾಗೂ ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲೂ ಹಿಜಾಬ್ ಧರಿಸಿದ ಹಾಗೂ ಕೇಸರಿ ಶಾಲು ಹಾಕಿಕೊಂಡ ವಿದ್ಯಾರ್ಥಿಗಳಿಗೆ ಪ್ರವೇಶನೀಡಲಾಗಿತ್ತು.

ಶಂಕಾಸ್ಪದ ವ್ಯಕ್ತಿ ವಶಕ್ಕೆ: ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜುಬಳಿ ಶುಕ್ರವಾರ ಸಂಜೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರುವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ವಿದ್ಯೆಯಿಂದ ಹೊರಗಿಡುವ ಹುನ್ನಾರ’

‘ಕುಂದಾಪುರದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿನೊಳಗೆ ಬಿಡದಿರುವುದು ಖಂಡನೀಯ' ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಆಕ್ಷೇಪಿಸಿದ್ದಾರೆ.

‘ಶೈಕ್ಷಣಿಕ ವರ್ಷದ ಆರಂಭದಿಂದಲೂ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುತ್ತಿದ್ದಾರೆ. ಹಿಂದೆಯೂ ಧರಿಸುತ್ತಿದ್ದರು. ಈಗ ಏಕಾಏಕಿ ಅವಕಾಶ ನಿರಾಕರಣೆ ಸರಿಯಲ್ಲ. ಈ ಕ್ರಮ ಮುಸ್ಲಿಂ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ಹೊರಗಿಡುವ ಹುನ್ನಾರವಾಗಿದೆ. ವಿದ್ಯೆ ನೀಡಬೇಕಾದ ಪ್ರಾಂಶುಪಾಲರೇ ವಿದ್ಯೆಯ ಬಾಗಿಲು ಮುಚ್ಚುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೆಡೆ ಅವಕಾಶ, ಕೆಲವೆಡೆ ನಿರಾಕರಣೆ

ಬೈಂದೂರು ತಾಲ್ಲೂಕಿನ ನಾವುಂದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ಹಾಗೂ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.

ಆದರೆ, ಕುಂದಾಪುರ ತಾಲ್ಲೂಕಿನ ಬಿ.ಬಿ ಹೆಗ್ಡೆ ಕಾಲೇಜು, ಭಂಡಾರ್ಕರ್ಸ್‌ ಕಾಲೇಜು ಹಾಗೂ ಕೋಟೇಶ್ವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಹಾಕಿಕೊಂಡು ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿಲ್ಲ.

ಕುಂದಾಪುರತಾಲ್ಲೂಕಿನ ಬಸ್ರೂರು ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನೀಡಲಾಗಿದ್ದು, ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.ಉಡುಪಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಜಿಲ್ಲೆಯ ಹಲವು ಕಾಲೇಜುಗಳಿಗೆ ವಿಸ್ತರಣೆಯಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT