ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡ್ಡ ಅಗೆತವೇ ಭೂಕುಸಿತಕ್ಕೆ ಕಾರಣ: ಭೂಗರ್ಭ ಶಾಸ್ತ್ರಜ್ಞ ಉದಯ ಶಂಕರ್‌

ಭೂಗರ್ಭ ಶಾಸ್ತ್ರಜ್ಞ ಉದಯ ಶಂಕರ್‌ ಪ್ರತಿಪಾದನೆ
Published 3 ಆಗಸ್ಟ್ 2024, 15:10 IST
Last Updated 3 ಆಗಸ್ಟ್ 2024, 15:10 IST
ಅಕ್ಷರ ಗಾತ್ರ

ಉಡುಪಿ: ಅಭಿವೃದ್ಧಿ ಹೆಸರಿನಲ್ಲಿ ಜೆಸಿಬಿ ಬಳಸಿ ಮನಬಂದಂತೆ ಗುಡ್ಡಗಳನ್ನು ಅಗೆಯುತ್ತಿರುವುದೇ ಭೂಕುಸಿತಕ್ಕೆ ಮುಖ್ಯ ಕಾರಣ ಎಂದು ಭೂಗರ್ಭ ಶಾಸ್ತ್ರಜ್ಞ ಉದಯ ಶಂಕರ್‌ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನೆರೆ, ಬೆಂಕಿ ಅವಘಡ, ಭೂಕುಸಿತ ಒಂದು ಚರ್ಚೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮರಗಳನ್ನು ಕಡಿದು ಗುಡ್ಡಗಳನ್ನು ಅಲ್ಲಲ್ಲಿ ಅಗೆಯುವುದರಿಂದ ಧಾರಾಕಾರ ಮಳೆ ಬರುವಾಗ ನೀರು ಗುಡ್ಡದ ಮಣ್ಣಿನೊಳಕ್ಕೆ ಹಿಂಗುತ್ತದೆ. ಹಿಂಗಿದ ನೀರು ಇನ್ನೊಂದು ಕಡೆ ಹೊರ ಬರುತ್ತದೆ ಇದರಿಂದ ಭೂ ಕುಸಿತ ಸಂಭವಿಸುತ್ತದೆ ಭೂಕುಸಿತವನ್ನು ತಡೆಯಲು ಸಾಧ್ಯವಿಲ್ಲ. ಇನ್ನು ಮುಂದೆ ಎಚ್ಚರಿಕೆಯ ನಡೆ ಅನುಸರಿಸಿದರೆ ಮಾತ್ರ ಇಂತಹ ಪ್ರಾಕೃತಿಕ ವಿಕೋಪಗಳಿಂದ ಪಾರಾಗಬಹುದು ಎಂದರು.

ಮನುಷ್ಯನು ಪ್ರಕೃತಿಗೆ ವಿರುದ್ಧವಾಗಿ ಕೆಲಸ ಮಾಡಿದಾಗ ಇಂತಹ ದುರಂತಗಳು ಸಂಭವಿಸುತ್ತವೆ. ನಮ್ಮಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಾಗ ವೈಜ್ಞಾನಿಕವಾಗಿ ಅಧ್ಯಯನ ನಡೆಸದೆ ಗುಡ್ಡಗಳನ್ನು ಅಗೆಯಲಾಗುತ್ತದೆ. ಇದರಿಂದ ಗುಡ್ಡ ಕುಸಿತ ಸಂಭವಿಸುತ್ತದೆ ಎಂದು ಹೇಳಿದರು.

ಆಗುಂಬೆಯ ಪ್ರಸ್ತಾವಿತ ಸುರಂಗ ಮಾರ್ಗ ಯೋಜನೆಯಿಂದ ಜೀವವೈವಿಧ್ಯಕ್ಕೆ ಅಪಾಯವಿದೆ. ಈ ಯೋಜನೆ ಕೈಬಿಡುವುದೇ ಉತ್ತಮ. ಎತ್ತಿನಹೊಳೆ ಯೋಜನೆಯನ್ನು ನಾವು ವಿರೋಧಿಸಿದ್ದೆವು. ಆದರೆ ಎಲ್ಲಾ ಸರ್ಕಾರಗಳು ಯೋಜನೆಗೆ ಬೆಂಬಲ ನೀಡಿದವು. ಇದಕ್ಕಾಗಿ ಅರಣ್ಯ, ಗುಡ್ಡಗಳು ನಾಶವಾಗಿವೆ ಎಂದು ಉದಯ ಶಂಕರ್‌ ಹೇಳಿದರು.

ಕೊಲ್ಲೂರು ರೋಪ್‌ ವೇ ಯೋಜನೆ ಕೂಡ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಕೊಲ್ಲೂರಿನ ಗುಡ್ಡಕ್ಕೆ ರೋಪ್ ವೇ ನಿರ್ಮಿಸದಿರುದೇ ಒಳ್ಳೆಯದು. ಉಡುಪಿಯ ಕಲ್ಸಂಕದ ಇಂದ್ರಾಣಿ ನದಿಯ ನಿರ್ವಹಣೆ ಕೊರತೆಯಿಂದ ನಗರಕ್ಕೆ ನೆರೆ ಸಮಸ್ಯೆ ಕಾಡುತ್ತಿದೆ. ಈ ಪ್ರದೇಶವು ಹಿಂದೆ ನೀರು ಹಿಡಿದಿಟ್ಟುಕೊಳ್ಳುವ ನೆರೆ ಬಯಲು ಪ್ರದೇಶವಾಗಿತ್ತು ಎಂದು ಅವರು ಹೇಳಿದರು.

ಇಂದು ಈ ನೆರೆ ಬಯಲಿನಲ್ಲಿ ಕಟ್ಟಡಗಳನ್ನು ಕಟ್ಟಿರುವುದರಿಂದ ತೋಡಿನ ಮೂಲಕ ಮಳೆ ನೀರು ಹರಿದು ಹೋಗಿ ನದಿ ಸೇರಲು ಸಾಧ್ಯವಾಗದೇ ನೆರೆ ಬರುತ್ತದೆ ಎಂದು ಅವರು ಪ್ರತಿಪಾದಿಸಿದರು.

ನಗರಸಭೆಯ ಪೌರಾಯುಕ್ತ ರಾಯಪ್ಪ ಮಾತನಾಡಿ, ಮಳೆಗಾಲಕ್ಕೆ ಮುನ್ನವೇ ನಗರಸಭೆ ವ್ಯಾಪ್ತಿಯಲ್ಲಿ ತೋಡು, ಇಂದ್ರಾಳಿ ನದಿಯ ಹೂಳೆತ್ತಲಾಗಿತ್ತು. ಕಟ್ಟಡ ಕಟ್ಟುವವರು ತೋಡುಗಳನ್ನು ಮುಚ್ಚಿ ಅದರ ಮೇಲೆ ಕಟ್ಟಡ ಕಟ್ಟುತ್ತಿರುವುದರಿಂದ ನೆರ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದರು.

ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು.

ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕೋಶಾಧಿಕಾರಿ ಉಮೇಶ್‌ ಮಾರ್ಪಳ್ಳಿ ಇದ್ದರು. ಪ್ರಧಾನ ಕಾರ್ಯದರ್ಶಿ ನಝೀರ್‌ ಪೊಲ್ಯ ಸ್ವಾಗತಿಸಿದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ವಂದಿಸಿದರು. ದೀಪಕ್ ಜೈನ್ ನಿರೂಪಿಸಿದರು.

‘ಅಗ್ನಿ ಅವಘಡ: ಮುಂಜಾಗ್ರತೆ ಅಗತ್ಯ’

15 ವರ್ಷಗಳಿಗಿಂತಲೂ ಹಳೆಯ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ನಂತರ ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಠಾಣೆಗಳ ಅಧೀನದಲ್ಲಿದ್ದ 12 ಜಲವಾಹನಗಳ ಪೈಕಿ 7 ವಾಹನಗಳು ಮೂಲೆ ಸೇರಿವೆ. ಅಗ್ನಿ ದುರಂತಗಳು ಸಂಭವಿಸಿದಾಗ ಇವುಗಳಲ್ಲೇ ನಿಭಾಯಿಸುತ್ತಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್‌ ಹೇಳಿದರು.

ಈ ವರ್ಷ ಅವಘಡಗಳಿಗೆ ಸಂಬಂಧಿಸಿ 340 ಕರೆಗಳನ್ನು ಮತ್ತು 92 ರಕ್ಷಣಾ ಕರೆಗಳನ್ನು ಸ್ವೀಕರಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ನೆರೆ ಬಂದಿದ್ದು ಒಟ್ಟು 181 ಮಂದಿಯನ್ನು ನಮ್ಮ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರತಿ 50 ಸಾವಿರ ಜನಸಂಖ್ಯೆಗೆ ಅಥವಾ 40ಕಿ.ಮೀ.ಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕು. ಅಷ್ಟು ಅಗ್ನಿಶಾಮಕ ಠಾಣೆಗಳು ನಮ್ಮಲ್ಲಿ ಇಲ್ಲ. ಆದುದರಿಂದ ಪ್ರತಿಯೊಬ್ಬರೂ ಅಗ್ನಿ ಅವಘಡ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT