ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಮದ್ದಲೆಯ ಮಾಂತ್ರಿಕ

ಹಿರಿಯಡ್ಕದಲ್ಲಿ ಅಂತ್ಯಸಂಸ್ಕಾರ; ಗೋಪಾಲರಾವ್ ಅವರ ನಿಧನಕ್ಕೆ ಗಣ್ಯರ ಸಂತಾಪ
Last Updated 19 ಅಕ್ಟೋಬರ್ 2020, 5:07 IST
ಅಕ್ಷರ ಗಾತ್ರ

ಉಡುಪಿ: ‘ಮದ್ದಲೆ ಬಾರಿಸುವುದರಲ್ಲಿ ನಾನಿನ್ನೂ ಕಲಿಕಾರ್ಥಿ’ ಎನ್ನುತ್ತಲೇ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ಅಂದು ಮದ್ದಲೆ ಬಾರಿಸಿ ಎಲ್ಲರನ್ನೂ ಮಂತ್ರಮುಗ್ದಗೊಳಿಸಿದ್ದರು.

2018, ಡಿ.29ರಂದು ಎಂಜಿಎಂ ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಯಕ್ಷಗಾನ ಕೇಂದ್ರ, ಇಂದ್ರಾಳಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಮಾಹೆ, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೋಪಾಲರಾವ್‌ ಅವರ ಮದ್ದಲೆ ಹಾಗೂ ವಿದ್ವತ್‌ಪೂರ್ಣ ಮಾತುಗಳು ಪ್ರಮುಖ ಆಕರ್ಷಣೆಯಾಗಿತ್ತು.

‘ಮದ್ದಲೆಯ ಮಾಂತ್ರಿಕ’ನಾದರೂ ಅಹಂಕಾರದ ಲವಲೇಷವೂ ಪ್ರದರ್ಶಿಸದೆ, ಮದ್ದಲೆ ಕಲಿಕೆಯಲ್ಲಿ ನಾನಿನ್ನು ವಿದ್ಯಾರ್ಥಿ ಎಂದು ಮನದಣಿಯೆ ಮದ್ದಲೆ ಬಾರಿಸಿ ಸಂಭ್ರಮಿಸಿದ್ದರು. ತಮ್ಮೊಳಗಿದ್ದ ಕಲಿಕಾಸಕ್ತಿ ಹಾಗೂ ಕಲಾಪ್ರೇಮವನ್ನು ತೆರೆದಿಟ್ಟಿದ್ದರು.

ಮದ್ದಲೆಯಲ್ಲಿ ಮೇರು ಕಲಾವಿದರಾಗಿದ್ದ ರಾಯರು, ಪರಿಪೂರ್ಣ ಕಲಾವಿದನೊಬ್ಬ ಹೇಗಿರಬೇಕು ಎಂಬುದಕ್ಕೆ ಉತ್ತಮ ನಿದರ್ಶನ.ಯಕ್ಷಗಾನ ಮದ್ದಲೆಯ ಕುರಿತು ಅವರಿಗಿದ್ದ ಜ್ಞಾನ, ಪಾಂಡಿತ್ಯ, ಅರಿವಿನ ವಿಸ್ತಾರ ಊಹಿಸಲು ಅಸಾಧ್ಯ ಎನ್ನುತ್ತಾರೆ ಅವರ ಶಿಷ್ಯರಾದ ಮುರಲಿ ಕಡೇಕಾರ್‌.

ಅದ್ಭುತ ಸ್ಮರಣ ಶಕ್ತಿ: ಶತಾಯುಷಿಗಳಾಗಿದ್ದರೂ ಗೋಪಾಲರಾಯರ ಸ್ಮರಣಶಕ್ತಿ ಕೊನೆಯ ದಿನಗಳವರೆಗೂ ಕುಂದಿರಲಿಲ್ಲ. ಬಾಲ್ಯವನ್ನು ಯಥಾವತ್ತಾಗಿ ಹೇಳುವಷ್ಟು ಅಗಾಧ ಸ್ಮರಣಶಕ್ತಿ ಇತ್ತು. ಇಳಿವಯಸ್ಸಿನಲ್ಲೂ ಸ್ವಲ್ಪವೂ ಲಯ ತಪ್ಪದೆ ಮದ್ದಲೆ ಬಾರಿಸುತ್ತಿದ್ದ ಪರಿ ಅವರ ಸ್ಮರಣಶಕ್ತಿಗೆ ನಿದರ್ಶನವಾಗಿತ್ತು.

ನಾಟಿ ವೈದ್ಯ: ಸ್ವತಃ ನಾಟಿ ವೈದ್ಯರಾಗಿದ್ದ ರಾಯರಿಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇತ್ತು. ಜಾನಪದೀಯ ಔಷಧಗಳ ಬಗ್ಗೆ ಅಪಾರ ಹೊಂದಿದ್ದ ಅವರು, ಅದೆಷ್ಟೊ ಸಲ ಪತ್ನಿ ಅಸೌಖ್ಯವಾದಾಗ ಮುತುವರ್ಜಿ ವಹಿಸಿ ನಾಟಿ ಔಷಧ ಕೊಟ್ಟು ಗುಣಪಡಿಸಿದ್ದರು. ಅವರದ್ದು ಬಹುಮುಖ ವ್ಯಕ್ತಿತ್ವ ಎಂದು ಸ್ಮರಿಸಿದರು ಕಡೇಕಾರ್‌.

35 ವರ್ಷಗಳ ಹಿಂದೆ, ದಶಾವತಾರ ಯಕ್ಷಗಾನ ಮಂಡಳಿ ಸ್ಥಾಪಿಸಿ ಮನೆಯಲ್ಲಿಯೇ ಯಕ್ಷಗಾನ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ವೇಷಭೂಷಣಗಳಲ್ಲಿ ಪ್ರಯೋಗ ಮಾಡಿ ಸೈ ಎನಿಸಿಕೊಂಡರು. ಮದ್ದಲೆ ವಾದನದ ಜತೆಗೆ, ಸೊಗಸಾದ ಯಕ್ಷಗಾನದ ಹೆಜ್ಜೆಗಳನ್ನು ಕಣ್ತುಂಬಿಕೊಳ್ಳುವುದೇ ಬಲು ಸೊಗಸು ಎನ್ನುತ್ತಾರೆ ಅವರು.

ಯಕ್ಷಗಾನದ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗೋಪಾಲರಾಯರ ಉಪಸ್ಥಿತಿ ಸಾಮಾನ್ಯವಾಗಿರುತ್ತಿತ್ತು. ಯಕ್ಷಗಾನದಲ್ಲಿ ಸಂಶೋಧನಾ ಪ್ರಬಂಧ (ಪಿಎಚ್‌ಡಿ) ಮಂಡಿಸಿದ ಮೊದಲ ವಿದೇಶಿ ಮಹಿಳೆ ಮಾರ್ಥಾ ಆಸ್ಟಿನ್‌ಗೆ ಸಂಪನ್ಮೂಲ ವ್ಯಕ್ತಿಯಾಗಿದ್ದವರು ಗೋಪಾಲರಾಯರು. ವಿದೇಶಗಳಿಗೆ ತೆರಳಿ ಮದ್ದಲೆ ಪ್ರದರ್ಶನ ನೀಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಯಕ್ಷಗಾನದ ಬಗ್ಗೆ ಉಪನ್ಯಾಸ ನೀಡಿದ್ದಾರೆ ಎಂದರು.

ಯಕ್ಷಗಾನ ತಿರುಗಾಟದಲ್ಲಿ ಮೇರು ಭಾಗವತರಾದ ಕುಂಜಾಲು ಶೇಷಗಿರಿ ಕಿಣಿ, ಮಾರ್ವಿ ಶ್ರೀನಿವಾಸ ಉಪ್ಪೂರು, ಗೋಪಾಲಕೃಷ್ಣ ಕಾಮತರು, ರಾಮಚಂದ್ರ ನಾವಡರು, ನಾರಣಪ್ಪ ಉಪ್ಪೂರರು, ಘೋರ್ಪಡೆ ವಿಠ್ಠಲ್ ಪಾಟೀಲ್ ಅಂಥವರಿಗೆ ಮದ್ದಲೆಯ ಸಾಥಿಯಾಗಿ ಕುಣಿಸಿದ್ದ ಗೋಪಾಲರಾಯರು ಪರಿಪೂರ್ಣ ಕಲಾವಿದ ಎಂದರು ಕಡೆಕಾರ್‌.

ಒಲಿದು ಬಂದ ಪ್ರಶಸ್ತಿಗಳು...

ಕರ್ನಾಟಕ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ಸಿರಿ ಪ್ರಶಸ್ತಿ , ದೇರಾಜೆ ಪ್ರಶಸ್ತಿ, ಶಂಕರ ನಾರಾಯಣ ಸಾಮಗ ಪ್ರಶಸ್ತಿ , ಹಾರಾಡಿ ರಾಮಗಾಣಿಗ ಪ್ರಶಸ್ತಿ , ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ , ಮಾರ್ವಿ ರಾಮಕೃಷ್ಣ ಹೆಬ್ಬಾರ್ ಪ್ರಶಸ್ತಿ , ವಾದಿರಾಜ ಹೆಬ್ಬಾರ್ ಪ್ರಶಸ್ತಿ , ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT