ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡಿನಲ್ಲಿ ಹೋಳಿ ಹಬ್ಬದ ಸಂಭ್ರಮ

Published 23 ಮಾರ್ಚ್ 2024, 6:36 IST
Last Updated 23 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಹೆಬ್ರಿ: ರಾಜ್ಯದೆಲ್ಲೆಡೆ ಹೋಳಿಯಲ್ಲಿ ಒಂದು ದಿನ ಆಚರಣೆ ಮಾಡಿದರೆ ಕರಾವಳಿಯಲ್ಲಿ ಹೋಳಿಯ ಸಂಭ್ರಮ ಬರೋಬ್ಬರಿ ಒಂದು ವಾರ ಮನೆ ಮಾಡಿರುತ್ತದೆ. ಕುಡುಬಿ ಹಾಗೂ ಮರಾಠಿ ಸಮುದಾಯದ ಹೋಳಿ ವಿಶೇಷ ಆಕರ್ಷಣೆ. ಸಾಂಪ್ರದಾಯಿಕ ಬಣ್ಣಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟು ಜನಪದ ಹಾಡುಗಳನ್ನು ಹಾಡುತ್ತಾ ಗುಮಟೆ‌ ವಾದ್ಯ ನುಡಿಸುತ್ತಾ ಹೆಜ್ಜೆ ಹಾಕುವುದನ್ನು ಕಣ್ತುಂಬಿಕೊಳ್ಳುವುದೇ ಆನಂದ.

ಹೋಳಿ ಆಚರಣೆ: ಹೋಳಿಯ ಅಂಗವಾಗಿ ದಶಮಿಯ ದಿನ ತುಳಜಾ ಭವಾನಿ ಕಟ್ಟೆಯ ತುಳಸಿ ಕಟ್ಟೆಯಲ್ಲಿ ಹಣ್ಣು ಹಂಪಲು ಇಟ್ಟು ಪೂಜಿಸಿ ನೇತುಹಾಕಲಾಗುತ್ತದೆ. ತುಳಜಾ ಭವಾನಿ ದೇವರಿಗೆ ಪ್ರಾರ್ಥನೆ ಸೇರಿದಂತೆ ಪೂಜಾ ವಿಧಿವಿಧಾನಗಳು ನೆರವೇರಿಸಲಾಗುತ್ತದೆ. ಏಕಾದಶಿ ದಿನದಂದು 50ಕ್ಕೂ ಹೆಚ್ಚು ಜನರ ತಂಡ ಗುಂಪುಗಳಾಗಿ ಮನೆಮನೆಗೆ ಭೇಟಿನೀಡಿ ಜನಪದ ಹಾಡುಗಳನ್ನು ಹಾಡುತ್ತಾ ಹೋಳಿ ಕುಣಿತ ಪ್ರದರ್ಶಿಸುತ್ತಾರೆ.

ಮನೆಗಳಲ್ಲಿ ಹರಕೆಯ ಅನ್ನ ಪ್ರಸಾದ ನೀಡುವ ಸಂಪ್ರದಾಯವೂ ಇದೆ. ಪ್ರತಿ ಮನೆಗೆ ಭೇಟಿ ನೀಡುವ ಸಂದರ್ಭ ವೀಳ್ಯದೆಲೆ, ಅಕ್ಕಿ, ತೆಂಗಿನಕಾಯಿ ಜೊತೆಗೆ ಗೌರವಯುತವಾಗಿ ಕಾಣಿಕೆ ನೀಡಿ ಕಳಿಸುತ್ತಾರೆ. ಪ್ರತಿದಿನ ಸಂಜೆ ಸಮುದಾಯದ ಮನೆಗಳಿಗೆ ತೆರಳಿ ಕಾಲಿನ ಗೆಜ್ಜೆ ಬಿಚ್ಚುವ ಕಾರ್ಯ ನಡೆಯುತ್ತದೆ.

ಏಕಾದಶಿಯಿಂದ ಚತುರ್ದಶಿವರೆಗೆ ಮನೆಮನೆಗೆ ತೆರಳಿ ಸಂಪ್ರದಾಯ ಬದ್ಧವಾಗಿ ಹಾಡುತ್ತ ಸಾರ್ವಜನಿಕರನ್ನು ಮಂತ್ರ ಮುಗ್ಧಗೊಳಿಸಲಾಗುತ್ತದೆ. ಕೊನೆಯ ದಿನ ಹೋಳಿ ಹುಣ್ಣಿಮೆಯಂದು ಸಂಗ್ರಹಿಸಿದ ತೆಂಗಿನಕಾಯಿ ಹಾಗೂ ಅಕ್ಕಿ, ಎಲೆ–ಅಡಿಕೆಯನ್ನು ಹೊತ್ತು (ಮೋಟುಗಾರಿ ತಳಿ ಎಂದು ಕರೆಯಲಾಗುತ್ತದೆ) ವಾದ್ಯ ಮೇಳದ ಜೊತೆ ನೃತ್ಯ ಮಾಡುತ್ತಾ ಮೆರವಣಿಗೆಯ ಮೂಲಕ ದೇವರ ಕಟ್ಟೆಗೆ ತರುವ ಸಂಪ್ರದಾಯವಿದೆ.

ಹುಣ್ಣಿಮೆಯಂದು ತುಳಸಿ ಕಟ್ಟೆಯ ಮೇಲೆ ನೇತು ಹಾಕಿದ ಹಣ್ಣು ಹಂಪಲುಗಳನ್ನು ಕೆಳಗಿಳಿಸಿ ಕಾಯಿಯಾಟ, ಓಕುಳಿಯಾಟ, ಬೆಂಕಿಯಾಟ ಆಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ವಿಶೇಷವಾದ ಗೆಜ್ಜೆ ದಿರಿಸುಗಳನ್ನು ಕಳಚಿಟ್ಟು ಗುಮಟೆಗೆ ಪೂಜಿಸಿ ಮುಂದಿನ‌ ವರ್ಷದ ಹೋಳಿಗೆ ಎತ್ತಿಡಲಾಗುತ್ತದೆ. ಬಳಿಕ, ಮಾರಿ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಒಂದು ವಾರಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ಹೋಳಿ ಹಬ್ಬದ ಸಂಭ್ರಮ ನಡೆಯುವುದು ವಿಶೇಷ.

ಗುಮಟೆಗೆ ಹೆಚ್ಚಿದ ಬೇಡಿಕೆ: ಮಣ್ಣಿನಿಂದ ಮಾಡಲಾದ ಗುಮಟೆಗೆ ಹೋಳಿ ಹಬ್ಬದ ಸಂದರ್ಭದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತದೆ. ಗುಮಟೆ ಚರ್ಮ ವಾದ್ಯಗಳಲ್ಲಿ ಒಂದಾಗಿದ್ದು, ಹೋಳಿ ಹಬ್ಬದಲ್ಲಿ ಭಾರಿಸುತ್ತಾ ಜನಪದ ಹಾಡಗಳನ್ನು ಹಾಡುತ್ತಾ ಬರುವುದನ್ನು ನೋಡುವುದೇ ಸಂಭ್ರಮ. ಗುಮಟೆಗೆ ಆಕಾರಕ್ಕೆ ತಕ್ಕಂತೆ ಐನೂರಿಂದ ಸಾವಿರದವರೆಗೂ ಬೆಲೆ ಇದೆ.

ಹರಕೆ: ಮದುವೆಯಾಗದಿರುವವರು, ಮಕ್ಕಳಾಗದೆ ಇರುವವರ ಕಷ್ಟ ಪರಿಹರಿಸಲು ಹೋಳಿ ತಂಡದ ಮುಖ್ಯಸ್ಥರಿಂದ ಹರಕೆ ಪ್ರಾರ್ಥನೆ ನಡೆಯುತ್ತದೆ. ದೇವಿಯ ಅನುಗ್ರಹದಿಂದ ಫಲ ಸಿಕ್ಕಿದರೆ ಹರಕೆ ಪೂರೈಸಲಾಗುತ್ತದೆ. ಕುಣಿದು ಹೋದ ಮನೆಯಲ್ಲಿ ಫಲ ನೀಡದ ತೆಂಗಿನ ಮರವಿದ್ದರೆ ಅದೂ ಫಲ ನೀಡುತ್ತೆ ಎಂಬುದು ನಂಬಿಕೆ. ಮನೆ ಮಕ್ಕಳಿಗೆ ರೋಗ ಬಾಧೆ ಇದ್ದರೆ, ವೇಷಧಾರಿಗಳ ಕೈಯ್ಯಲ್ಲಿ ಕೊಟ್ಟು ಕುಣಿಸಿದರೆ ನಿವಾರಣೆಯಾಗುತ್ತದೆ ಎಂಬುದು ಈ ಭಾಗದಲ್ಲಿ ಗಟ್ಟಿಯಾದ ನಂಬಿಕೆ ಇದೆ. ಹೋಳಿ ನೃತ್ಯದ ತಂಡಗಳು ಮನೆಗೆ ಬರುವುದೆಂದರೆ ಮನೆಗೆ ಅದೃಷ್ಟ ಬಂದಂತೆ ಎಂದು ನಂಬಲಾಗುತ್ತದೆ.

ಹೋಳಿ ಹಬ್ಬದಲ್ಲಿ ವಿವಿಧ ಬಣ್ಣದ ಉಡುಗೆ–ತೊಡುಗೆಗಳನ್ನು ತೊಟ್ಟು ಜನಪದ ಹಾಡುಗಳನ್ನು ಹಾಡುತ್ತಾ ಗುಮಟೆ‌ ವಾದ್ಯ ನುಡಿಸುತ್ತಾ ಬರುವ ಕುಡುಬಿ ಹಾಗೂ ಮರಾಠಿ ಸಮುದಾಯದವರು
ಹೋಳಿ ಹಬ್ಬದಲ್ಲಿ ವಿವಿಧ ಬಣ್ಣದ ಉಡುಗೆ–ತೊಡುಗೆಗಳನ್ನು ತೊಟ್ಟು ಜನಪದ ಹಾಡುಗಳನ್ನು ಹಾಡುತ್ತಾ ಗುಮಟೆ‌ ವಾದ್ಯ ನುಡಿಸುತ್ತಾ ಬರುವ ಕುಡುಬಿ ಹಾಗೂ ಮರಾಠಿ ಸಮುದಾಯದವರು
25 ವರ್ಷಗಳಿಂದ ಹೋಳಿ ಹಬ್ಬದ ಕುಣಿತದಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಯನ್ನು ಉಳಿಸಿಕೊಂಡು ಬರುವ ಕೆಲಸಮಾಡುತಿದ್ದೇವೆ
ಜಗದೀಶ್ ಹುತ್ತುರ್ಕೆ ಚಾರ
ಹತ್ತು ವರ್ಷಗಳಿಂದ ಹೋಳಿ ಹಬ್ಬದ ಸಂಭ್ರಮ ವಿಕ್ಷೀಸುತ್ತಿದ್ದೇನೆ. ಇಂದಿನ ಪೀಳಿಗೆಯ ಯುವಕರು ಕೂಡ ಹೋಳಿ ಕುಣಿತದಲ್ಲಿ ಭಾಗವಹಿಸುತ್ತಿದ್ದು ನೆಲದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿರುವುದು ಖುಷಿ ತರುತ್ತಿದೆ.
- ಮಂಜುನಾಥ್ ಚಾರ - ಮಂಡಾಡಿ ಜೆಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT