ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂಗೆ ಸ್ಥಬ್ಧವಾದ ಕೃಷ್ಣನೂರು

ಮನೆಬಿಟ್ಟು ಹೊರಬಾರದ ಸಾರ್ವಜನಿಕರು, ರಸ್ತೆಗಳು ಖಾಲಿ,
Last Updated 22 ಮಾರ್ಚ್ 2020, 13:39 IST
ಅಕ್ಷರ ಗಾತ್ರ

ಉಡುಪಿ: ಬಂದ್, ಮುಷ್ಕರ, ನಿಷೇಧಾಜ್ಞೆಗೂ ಸ್ತಬ್ಧವಾಗದ ಉಡುಪಿ ಭಾನುವಾರ ಜನತಾ ಕರ್ಫ್ಯೂಗೆ ಸಂಪೂರ್ಣ ಸ್ತಬ್ಧವಾಗಿತ್ತು. ಸದಾ ಗಿಜಿಗಿಡುತ್ತಿದ್ದ ಬಸ್ ನಿಲ್ದಾಣಗಳು, ಮಾರುಕಟ್ಟೆ, ಬಂದರು, ಬೀಚ್‌ಗಳು ಮೌನವಾಗಿದ್ದವು. ಬೆಳಿಗ್ಗಿನಿಂದ ಸಂಜೆಯವರೆಗೂ ನಗರ ಜೀವಕಳೆ ಕಳೆದುಕೊಂಡಂತೆ ಭಾಸವಾಯಿತು.

ಬಿಕೋ ಎನ್ನುತ್ತಿದ್ದ ರಸ್ತೆಗಳು

ಸದಾ ವಾಹನಗಳಿಂದ ತುಂಬಿರುತ್ತಿದ್ದಉಡುಪಿ–ಮಣಿಪಾಲ ಮುಖ್ಯ ರಸ್ತೆ, ಕೆಎಂ ಮಾರ್ಗ, ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಪಾದಚಾರಿ ಮಾರ್ಗ, ಪಾರ್ಕಿಂಗ್ ಪ್ರದೇಶಗಳೆಲ್ಲ ಖಾಲಿಯಾಗಿದ್ದವು.

ಸಂಚಾರ ವ್ಯವಸ್ಥೆಯೇ ಬಂದ್‌

ಬಂದ್‌ ಹಾಗೂ ಮುಷ್ಕರಗಳು ನಡೆದಾಗ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಸೇವೆ ನಿಲ್ಲಿಸಿದರೂ, ಆಟೊಗಳು, ಖಾಸಗಿ ವಾಹನಗಳ ಸಂಚಾರ ಇರುತ್ತಿತ್ತು. ಆದರೆ, ಈ ಬಾರಿ ಆಟೊಗಳು ಸೇರಿದಂತೆ ಸಾರ್ವಜನಿಕರ ವಾಹನಗಳು ರಸ್ತೆಗಿಳಿಯಲಿಲ್ಲ. ಹಾಗಾಗಿ, ಸಂಚಾರ ವ್ಯವಸ್ಥೆಯೇ ಬಂದ್‌ ಆಗಿತ್ತು.

ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ನಿರಾಶ್ರಿತರ, ಭಿಕ್ಷುಕರ, ಮದ್ಯವ್ಯಸನಿಗಳ ವಿಶ್ರಾಂತಿ ತಾಣಗಳಾಗಿ ಬದಲಾಗಿದ್ದವು. ಹೋಟೆಲ್‌, ವಸತಿಗೃಹ, ಮಾಲ್‌ಗಳು, ತರಕಾರಿ, ಹಣ್ಣು, ಹೂ ಮಾರುಕಟ್ಟೆಗಳು ಬಾಗಿಲು ಎಳೆದುಕೊಂಡಿದ್ದವು.

ಸಾರ್ವಜನಿಕರೇ ಸ್ವಯಂಪ್ರೇರಿತವಾಗಿ ಜನತಾ ಕರ್ಫ್ಯೂನಲ್ಲಿ ಭಾಗವಹಿಸಿದ್ದರಿಂದ ಪೊಲೀಸರಿಗೂ ಹೆಚ್ಚಿನ ಕೆಲಸ ಇರಲಿಲ್ಲ. ಅಲ್ಲಲ್ಲಿ ಬೆರಳೆಣಿಕೆ ಸಿಬ್ಬಂದಿ ಹೊರತುಪಡಿಸಿದರೆ, ಹೆಚ್ಚಿನ ಪೊಲೀಸರು ಕಾಣಿಸಲಿಲ್ಲ.

ಬಂದರು ಸ್ತಬ್ಧ

ಸದಾ ಸದ್ದು ಮಾಡುತ್ತಿದ್ದ ಮಲ್ಪೆ ಬಂದರು ಕೂಡ ಭಾನುವಾರ ಮೌನಕ್ಕೆ ಜಾರಿತ್ತು. ಬಂದರಿನಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರ ಸುಳಿವಿರಲಿಲ್ಲ. ಬೋಟ್‌ಗಳು ಕಡಲಿಗಿಳಿಯಲಿಲ್ಲ. ಮೀನುಗಾರಿಕಾ ಚಟುವಟಿಕೆಗಳು ನಡೆಯಲಿಲ್ಲ. ಬಂದರಿನ ಪ್ರಾಂಗಣದಲ್ಲಿ ಮೀನು ಸಾಗಾಟ ಮಾಡುವ ವಾಹನಗಳು ಮಾತ್ರ ನಿಂತಿದ್ದು ಕಂಡುಬಂತು.

ವಾಣಿಜ್ಯ ನಗರ ಮಣಿಪಾಲದಲ್ಲೂ ಬಂದ್‌ ವಾತಾವರಣ ಇತ್ತು. ಇಲ್ಲಿನ ಕಾಲೇಜು, ವಿಶ್ವವಿದ್ಯಾಲಯ, ಐಶಾರಾಮಿ ಹೋಟೆಲ್‌, ರೆಸ್ಟೊರೆಂಟ್‌ಗಳು ಮುಚ್ಚಿದ್ದರಿಂದ ಇಡೀ ನಗರ ಖಾಲಿಯಾಗಿತ್ತು. ಜತೆಗೆ, ಕೆಎಂಸಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆಯೂ ಇಲ್ಲವಾಗಿರುವುದರಿಂದ ಹೊರ ಜಿಲ್ಲೆಗಳಿಂದ ಬರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿದ್ದು, ಆಸ್ಪತ್ರೆ ಬಳಿಯೂ ಜನಸಂದಣಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT