ಮೋದಿಯನ್ನು ಟೀಕಿಸಿದರೆ ಒಳ್ಳೆಯದಾಗುವುದಿಲ್ಲ: ಮಾಧುಸ್ವಾಮಿ

ಉಡುಪಿ: ಕೋವಿಡ್–19 ಲಸಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವವರಿಗೆ ಒಳ್ಳೆಯದಾಗುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಭಾನುವಾರ ‘ಹಡಿಲುಭೂಮಿ ಕೃಷಿ ಆಂದೋಲನ’ಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ‘ದೇಶದ 80 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಕೇಂದ್ರದ ನಿರ್ಧಾರವನ್ನು ಟೀಕಿಸುವುದು ಸರಿಯಲ್ಲ. ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಬೇಕಾದರೆ ಸರ್ಕಾರಕ್ಕೆ ಎಷ್ಟು ಆರ್ಥಿಕ ಹೊರೆ ಬೀಳಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಉಚಿತ ಲಸಿಕೆಯ ಜತೆಗೆ ನವೆಂಬರ್‌ವರೆಗೂ ಉಚಿತ ಪಡಿತರ ನೀಡುವುದಾಗಿಯೂ ಸರ್ಕಾರ ಹೇಳಿದೆ. ಕೇಂದ್ರದ ವಿರುದ್ಧ ಪಾಪದ ಮಾತುಗಳನ್ನಾಡಿದರೆ ಯಾರಿಗೂ ಒಳ್ಳೆಯದಾಗುವುದಿಲ್ಲ. ನೈಸರ್ಗಿಕ ವಿಪತ್ತನ್ನು ಸಂಘಟಿತವಾಗಿ ಎದುರಿಸಬೇಕು. ಲಸಿಕೆಯನ್ನು ದಿಢೀರ್ ಉತ್ಪಾದಿಸಲು ಸಾಧ್ಯವಿಲ್ಲ. ಕಚ್ಛಾವಸ್ತುಗಳು ಬೇಕು, ಸಮಯ ಬೇಕು. 2 ರಿಂದ 3 ತಿಂಗಳಲ್ಲಿ ಲಸಿಕೆ ಗುರಿ ಮುಟ್ಟಲಾಗುವುದು ಎಂದರು.
ಇದನ್ನೂ ಓದಿ– Covid-19 India Update: 43,071 ಹೊಸ ಪ್ರಕರಣಗಳು, 955 ಮಂದಿ ಸಾವು
ಜಾರಕಿಹೊಳಿಗೆ ಶಿಕ್ಷೆ ಆಗಲಾರದು:
ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷದಿಂದ ಯಾವ ತೊಂದರೆಯೂ ಆಗಿಲ್ಲ. ಆಕಸ್ಮಿಕ ಘಟನೆಗೆ ಬಲಿಯಾಗಿದ್ದು, ಅವರ ಬಗ್ಗೆ ಅನುಕಂಪ ಇದೆ. ಜಾರಕಿಹೊಳಿ ಪ್ರಕರಣ ಕಾನೂನು ಹಾಗೂ ನೈತಿಕತೆಯ ಚೌಕಟ್ಟಿನ ವ್ಯಾಪ್ತಿಗೊಳಪಡಲಿದ್ದು, ನೈತಿಕ ಹೊಣೆಹೊತ್ತು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಕಾನೂನು ಹೋರಾಟ ಕೂಡ ನಡೆಯುತ್ತಿದೆ. ಒಪ್ಪಿತ ಲೈಂಗಿಕ ಕ್ರಿಯೆ ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿಡಿಯೋದಲ್ಲಿ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆಪಟ್ಟು ಹೋಗಿದ್ದಾರೆ ಎಂಬ ಭಾವನೆ ವ್ಯಕ್ತವಾಗುತ್ತದೆ. ಪ್ರಕರಣದಲ್ಲಿ ಜಾರಕಿಹೊಳಿ ಅವರಿಗೆ ಶಿಕ್ಷೆ ಆಗಲಾರದು ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.