ಸೋಮವಾರ, ಸೆಪ್ಟೆಂಬರ್ 20, 2021
29 °C
ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌

ಸಹಭಾಳ್ವೆಯ ಬದುಕು ಜೀವ ವೈವಿಧ್ಯತೆ: ಡಾ.ವೈ.ನವೀನ್ ಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೀಟಗಳಿಂದ ಹಿಡಿದು ದೈತ್ಯ ಪ್ರಾಣಿಯವರೆಗೆ ಸಹಬಾಳ್ವೆಯಿಂದ ಬದುಕುವುದೇ ಜೀವ ವೈವಿಧ್ಯತೆಯಾಗಿದ್ದು, ಜಿಲ್ಲೆಯಲ್ಲಿರುವ ಜೀವವೈವಿಧ್ಯ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಹೇಳಿದರು.

ಅಂತರ ರಾಷ್ಟ್ರೀಯ ಜೀವವ್ಯವಿಧ್ಯ ದಿನಾಚರಣೆ 2021 ಅಭಿಯಾನ ಆಗಸ್ಟ್ 15ರವರೆಗೆ ನಡೆಯುತ್ತಿದ್ದು ಇದರ ಅಂಗವಾಗಿ ಶನಿವಾರ ಮಣಿಪಾಲದ ಬಡಗಬೆಟ್ಟು ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನದಲ್ಲಿ ‘ಪ್ರಕೃತಿಗೆ ಒದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಪಾಲುದಾರರು’ ಎಂಬ ಧ್ಯೇಯವಾಕ್ಯದೂಂದಿಗೆ ಕಾರ್ಯಕ್ರಮ ನಡೆಯಿತು.

ಕುಂದಾಪುರ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ, ‘ಅಪರೂಪದ ಹಾಗೂ ಅಳವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳನ್ನು ರಕ್ಷಿಸಿ, ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕಾಗಿದೆ. ಸಾವಿರಾರು ಜೀವ ತಳಿಗಳು ವಿನಾಶದ ಅಂಚಿನಲ್ಲಿದ್ದು, ಅವುಗಳನ್ನು ಉಳಿಸಬೇಕಿದೆ. ಪ್ರಕೃತಿ ಸಮತೋಲನಕ್ಕೆ ಎಲ್ಲ ಜೀವರಾಶಿಗಳ ರಕ್ಷಣೆ ಅಗತ್ಯ. ಪ್ರಕೃತಿ ಮನುಷ್ಯನಿಗೆ ಅತ್ಯಮೂಲ್ಯವಾದ ವರದಾನಗಳನ್ನು ನೀಡಿದೆ’ ಎಂದರು.

ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರ) ಪ್ರಶಾಂತ್ ಮಾತನಾಡಿ, ‘ಪ್ರಕೃತಿ, ಗಾಳಿ ಎಲ್ಲರಿಗೂ ಬೇಕು. ಆದರೆ ಪ್ರಕೃತಿ ಪೋಷಣೆ ಯಾರಿಗೂ ಬೇಡವಾಗಿದೆ. ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವವೈವಿಧ್ಯಗಳಲ್ಲಿ. ಪಶ್ಚಿಮಘಟ್ಟಗಳ ಜೀವವೈವಿಧ್ಯ ತಾಣವು ವಿಶ್ವದ ಅತ್ಯಂತ ವಿಶಿಷ್ಟವಾದ ಜೀವರಾಶಿಗಳನ್ನು ಹೊಂದಿದೆ’ ಎಂದರು.

ಸ್ಥಾನಿಕವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಮಟ್ಟದಲ್ಲಿನ ನಿಸರ್ಗ ಸಂಪತ್ತಿನ ಪರಿಸ್ಥಿತಿಯ ಅವಲೋಕನವಾಗಬೇಕು. ಕೆರೆಗಳ ಪುನಶ್ಚೇತನ, ವನಗಳ ಪುನಶ್ಚೇತನ ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಜೀವವೈವಿಧ್ಯ ಜಾಗೃತಿ ಅಭಿಯಾನವನ್ನು ಸರ್ಕಾರ ರೂಪಿಸಿದೆ ಎಂದರು.

ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ಡಾ.ಎನ್.ಎ. ಮಧ್ಯಸ್ಥ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಧನಂಜಯ ಇದ್ದರು. ಜೀವವೈವಿಧ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಆರೂರು ಮಂಜುನಾಥರಾವ್ (ಔಷಧೀಯ ಸಸ್ಯಗಳ ಜ್ಞಾನವುಳ್ಳವರು), ಕಿಟ್ಟಿ ಪೂಜಾರ‍್ತಿ (ಮನೆಮದ್ದು, ನಾಟಿವೈದ್ಯರು) ಅವರನ್ನುಸನ್ಮಾನಿಸಲಾಯಿತು.

ಬಡಗಬೆಟ್ಟು ಗ್ರಾಮ ಪಂಚಾಯಿಸಿ ಅಧ್ಯಕ್ಷೆ ಮಾಧವಿ ಎಸ್.ಆಚಾರ್ಯ, ಜಿಲ್ಲಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರು, ಜಿಲ್ಲಾಮಟ್ಟದ ತಾಂತ್ರಿಕ ಪರಿಣಿತ ಸಮಿತಿಯ ಸದಸ್ಯರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉಡುಪಿಯ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಪಿ.ರವೀಂದ್ರ ಆಚಾರ್ಯ ಸ್ವಾಗತಿಸಿದರು. ಕುಂದಾಪುರ ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ತುಳಸಿ ವಂದಿಸಿದರು. ಉಪ ವಲಯ ಅರಣ್ಯಾಧಿಕಾರಿ ಸಂಗೀತಾ ಶೇಡ್ತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.