ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ: ಅನ್ನಪೂರ್ಣೇಶ್ವರಿ ದೇವಸ್ಥಾನ ಲೋಕಾರ್ಪಣೆ 21ರಂದು

ಕಜ್ಕೆಯಲ್ಲಿ ಕಾನನದ ಮಧ್ಯೆ ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇವಿಯ ಭವ್ಯ ದೇವಸ್ಥಾನ
ಸುಕುಮಾರ್‌ ಮುನಿಯಾಲ್‌
Published 2 ಫೆಬ್ರುವರಿ 2024, 5:47 IST
Last Updated 2 ಫೆಬ್ರುವರಿ 2024, 5:47 IST
ಅಕ್ಷರ ಗಾತ್ರ

ಹೆಬ್ರಿ: ಕಾನನ ಮಧ್ಯದ ರಮಣೀಯ ಪುಣ್ಯಭೂಮಿ ಕಜ್ಕೆಯಲ್ಲಿ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿಯ ಶಿಲಾಮಯ ದೇಗುಲ ನಿರ್ಮಾಣಗೊಳ್ಳುತ್ತಿದ್ದು, ಇದೇ 21ರಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.

ಅರಣ್ಯದಿಂದ ಸುತ್ತುವರಿದಿರುವ ಕಜ್ಕೆಯಲ್ಲಿ ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೇರಳದಿಂದ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನ ಇಲ್ಲಿ ಭಿಕ್ಷೆ ಪಡೆದಿದ್ದರು ಎಂಬ ಐತಿಹ್ಯವಿದೆ. ಹಲವು ವರ್ಷಗಳಿಂದ ಸಾನಿಧ್ಯ ಭೂಗತವಾಗಿದ್ದು ಜಾಗವು ಖಾಸಗಿಯವರಲ್ಲಿ ಇತ್ತು. ಇದೀಗ ಕಜ್ಕೆಯವರಾದ ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್‌ ಎಂಬುವರು ದೇವಸ್ಥಾನ ನಿರ್ಮಾಣಕ್ಕೆ 2 ಎಕರೆ ಜಾಗ ದಾನ ನೀಡಿದ್ದಾರೆ.

ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ₹5 ಕೋಟಿ ವೆಚ್ಚದಲ್ಲಿ ಭವ್ಯ ದೇವಸ್ಥಾನ ನಿರ್ಮಾಣಗೊಂಡಿದೆ. ವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಅರೇಮಾದನಹಳ್ಳಿ ಅರಕಲಗೂಡು, ಹಾಸನದ ಶಾಖಾಮಠ ಕಜ್ಕೆಯಲ್ಲಿ ನಿರ್ಮಾಣಗೊಂಡಿದ್ದು, ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಸ್ವಾಮೀಜಿ ಭಕ್ತರನ್ನು ಹರಸುತ್ತಿದ್ದಾರೆ. ಮಠದ ಪಕ್ಕದಲ್ಲೇ ಅನ್ನಪೂರ್ಣೇಶ್ವರಿ ದೇವಸ್ಥಾನ ಸರ್ವರ ಸಹಕಾರದೊಂದಿಗೆ ನಿರ್ಮಾಣಗೊಂಡಿದೆ. ಅನ್ನಪೂರ್ಣೇಶ್ವರಿ ಜೊತೆಗೆ ಗಣಪತಿ, ಆದಿಶಂಕರಾಚಾರ್ಯರ ಶಿಲಾಬಿಂಬ ಪ್ರತಿಷ್ಠೆ, ನಾಗದೇವರ ಸನ್ನಿಧಿ ಪ್ರತಿಷ್ಠೆ ನೆರವೇರಲಿದೆ.

ಇದೇ 13ರಿಂದ ಆರಂಭಗೊಂಡು 21ರ ತನಕ ಶಿಲಾಬಿಂಬ ಪ್ರತಿಷ್ಠೆ, ಮಹಾ ಕುಂಭಾಭಿಷೇಕ ನಡೆಯಲಿದೆ. ನಾಡಿನ ವಿವಿಧ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಗಣ್ಯರು ಪುಣ್ಯಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಶಿವಸುಜ್ಞಾನತೀರ್ಥ ಸ್ವಾಮೀಜಿ ಅಧ್ಯಕ್ಷತೆಯ ದೇವಸ್ಥಾನ ನಿರ್ಮಾಣ ಸಮಿತಿ, ಮಹಾಕುಂಭಾಭಿಷೇಕ ಸಮಿತಿ ಜೊತೆಗೆ ಕಾರ್ಯಾಧ್ಯಕ್ಷರು, ಸ್ವಾಗತ ಸಮಿತಿ, ಸಮಿತಿಗಳ ಪದಾಧಿಕಾರಿಗಳು, ಉಪ ಸಮಿತಿಗಳ ಪ್ರಮುಖರು, ಸಂಘ ಸಂಸ್ಥೆಗಳ ಸದಸ್ಯರು ಶ್ರಮಿಸುತ್ತಿದ್ದಾರೆ.

ಆನಂದ ಆಚಾರ್ಯ ಸುರತ್ಕಲ್‌ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಶಿಲಾ ಶಿಲ್ಪಿಯಾಗಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ, ಕಾಷ್ಠ ಶಿಲ್ಪಿಯಾಗಿ ಶ್ರೀಧರ ಆಚಾರ್ಯ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ದೇವರ ಮೂರ್ತಿ ರಚಿಸಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅನ್ನಪೂರ್ಣೇಶ್ವರಿಯ ಶಿಲಾವಿಗ್ರಹ ಕೆತ್ತಿದ್ದಾರೆ. ಪ್ರಕಾಶ ಆಚಾರ್ಯ ಮೈಸೂರು ಗಣಪತಿ ವಿಗ್ರಹ, ಕಾರ್ಕಳ ಅತ್ತೂರಿನ ಶಿಲ್ಪಿ ರಾಮಚಂದ್ರ ಆಚಾರ್ಯ ಆದಿಶಂಕಾರಾಚಾರ್ಯರ ವಿಗ್ರಹ ಕೆತ್ತಿದ್ದಾರೆ.

ಅಂದು ಆದಿಶಂಕರಾಚಾರ್ಯರು ಕಾಲಿಟ್ಟ ಕಜ್ಕೆ ಈಗ ಅನ್ನಪೂರ್ಣೇಶ್ವರಿಯ ಪುಣ್ಯ ಕ್ಷೇತ್ರವಾಗಿದೆ. ಹಲವು ವರ್ಷಗಳಿಂದ ಭೂಗತವಾಗಿದ್ದ ಕ್ಷೇತ್ರಕ್ಕೆ ಮರುಚೈತನ್ಯ ನೀಡುವ ಸುಯೋಗ ನನ್ನ ಪಾಲಿಗೆ ಒದಗಿದೆ. ನಮ್ಮ ಮಠದ ಶಾಖಾ ಮಠ ಸಹ ಇಲ್ಲಿ ಕಾರ್ಯಚರಿಸುತ್ತಿದೆ. ಭಕ್ತರ ಸಹಕಾರದಿಂದ ದಟ್ಟ ಅರಣ್ಯದ ನಡುವೆ ದೇವಿ ಕ್ಷೇತ್ರ ನಿರ್ಮಾಣಗೊಂಡಿದೆ. ಎಲ್ಲಾ ಕಾರ್ಯಗಳೂ ಸುಗಮವಾಗಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಶಿವಸುಜ್ಞಾನತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸುತ್ತಲೂ ಅರಣ್ಯದಿಂದ ಸುತ್ತುವರೆದಿರುವ ಕಜ್ಕೆಯ ದೇವಿಯ ನೆಲೆಯನ್ನು ಗುರುತಿಸಿ ಭವ್ಯ ದೇಗುಲ ನಿರ್ಮಾಣವಾಗಲು ಕಾರಣರಾದವರು ಶಿವಸುಜ್ಞಾನತೀರ್ಥರು. ದೇವಸ್ಥಾನ ನಿರ್ಮಾಣ ಸಮಿತಿ ಜೊತೆಗೆ ಭಕ್ತರ ಪರಿಶ್ರಮದಿಂದ ಭವ್ಯಕ್ಷೇತ್ರ ನಿರ್ಮಾಣಗೊಂಡಿದೆ

–ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್‌, ಸ್ಥಳ ದಾನಿಗಳು

ಶ್ರೀ ಅನ್ನಪೂರ್ಣೆಶ್ವರಿ
ಶ್ರೀ ಅನ್ನಪೂರ್ಣೆಶ್ವರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT