ಬುಧವಾರ, ಮಾರ್ಚ್ 29, 2023
27 °C
ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಕರೆ

ಮನೆಗಳಲ್ಲಿ ಕನ್ನಡ ಕಡ್ಡಾಯವಾಗಲಿ: ಸಚಿವ ವಿ.ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ ಮಾತೃಭಾಷೆ ಮರೆಯಾಗುತ್ತಿದ್ದು, ನಮಗೆ ಅರಿವಿಲ್ಲದಂತೆ ಆಡುಭಾಷೆಯ ಮಧ್ಯೆ ಅನ್ಯಭಾಷೆಗಳ ಪ್ರವೇಶವಾಗುತ್ತಿದೆ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು’ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಮನೆಗಳಲ್ಲಿ ಕನ್ನಡ ನುಲಿಯಬೇಕು, ಮಕ್ಕಳ ಜತೆ ಪೋಷಕರು ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಈ ಕಾರ್ಯ ರಾಜ್ಯದೆಲ್ಲೆಡೆ ಅಭಿಯಾನದಂತೆ ನಡೆಯಬೇಕು ಎಂದರು.

ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಎಂಬ ಆಶಯದಿಂದ ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದಿತ್ತು. ಜಾಗತಿಕತೆಯ ಪರಿಣಾಮ ವರದಿಯಲ್ಲಿ ಅನಿವಾರ್ಯವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ಮುಂದೆ, ರಾಜ್ಯದಲ್ಲಿರುವ ಎಲ್ಲ ಉದ್ಯಮಗಳಲ್ಲಿ ಕನ್ನಡಿಗರಿಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಉದ್ಯೋಗದಲ್ಲಿ ಮೀಸಲಾತಿ ತರಲು ಸರ್ಕಾರ ಬದ್ಧವಾಗಿದೆ ಎಂದರು.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಕನ್ನಡದ ರಾಯಭಾರಿಯಗಳಾಗಿದ್ದು, ಮುಂಬೈ, ದುಬೈ ನೆಲದಲ್ಲೂ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ಈ ಕಾರ್ಯ ನಿರಂತರವಾಗಿರಲಿ. ಭಾಷೆಯ ಮೂಲಕ ಸಂಸ್ಕೃತಿ, ವ್ಯಕ್ತಿತ್ವ, ನಡವಳಿಕೆ ನಿರ್ಮಾಣ ಮಾಡೋಣ. ಹೊಸ ಪೀಳಿಗೆ ಪುಸ್ತಕಗಳತ್ತ ಆಕರ್ಷಿತರಾಗಲಿ, ಸಾಹಿತಿಗಳಾಗಿ ಹೊರಹೊಮ್ಮಲಿ ಎಂದು ಸಚಿವರು ಆಶಿಸಿದರು,

ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಅ.24ರಿಂದ ಒಂದು ವಾರ ‘ಕನ್ನಡಕ್ಕಾಗಿ ನಾವು’ ಎಂಬ ಅಭಿಯಾನ ನಡೆಸಿದ್ದೇವೆ. ‘ಲಕ್ಷ ಕಂಠಗಳಲ್ಲಿ ಗೀತಗಾಯನ’ ಕರೆಗೆ ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದ್ದು, 20 ಲಕ್ಷ ಜನ ಏಕಕಾಲದಲ್ಲಿ ಕನ್ನಡ ಗೀತೆಗಳನ್ನು ಹಾಡಿ ಅಂತರಂಗದಲ್ಲಿದ್ದ ಕನ್ನಡ ಪ್ರೀತಿಯನ್ನು ಪ್ರಕಟ ಮಾಡಿದ್ದಾರೆ. ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಗಡಿನಾಡ ಭಾಗಗಳಲ್ಲಿ ಮಾಡುವ ಮೂಲಕ ಕನ್ನಡ ಜಾಗೃತಿ ಮಾಡಿಸಲಾಗುತ್ತಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 30 ಸಾಧಕರಿಗೆ ಹಾಗೂ 3 ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಡಾ.ವೈ.ನವೀನ್ ಭಟ್, ಎಸ್‌ಪಿ ಎನ್‌.ವಿಷ್ಣುವರ್ಧನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಉಪಸ್ಥಿತರಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.