ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದಿ ಮಳೆ: ತೆಗೆದುಕೊಂಡ ಕ್ರಮಗಳೇನು?- ಪ್ರತಾಪ್‌ ಚಂದ್ರ ಶೆಟ್ಟಿ ಪ್ರಶ್ನೆ

ಪರಿಸರ ಇಲಾಖೆ ಅಧಿಕಾರಿಗೆ ಪ್ರಶ್ನೆ
Last Updated 11 ಸೆಪ್ಟೆಂಬರ್ 2018, 15:53 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರಿ ಶಾಲೆಗಳಿಗೆ ಸರಬರಾಜಾಗುತ್ತಿರುವ ಬಿಸಿಯೂಟ ಸಾಮಾಗ್ರಿಗಳು ಕಳಪೆ ಗುಣಮಟ್ಟದ್ದಾಗಿದೆ. ಹುಳು ಬಿದ್ದ ಬೇಳೆ, ಕೆಟ್ಟುಹೋದ ಹಾಲಿನ ಪುಡಿ ಪೂರೈಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಶೇಷಶಯನ ಕಾರಿಂಜ, ‘ಕೆಲವು ಶಾಲೆಗಳಿಗೆ ಪೂರೈಸಲಾಗಿದ್ದ ಬೇಳೆ ಹಾಳಾಗಿದ್ದು, ಗುಣಮಟ್ಟ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯನ್ನು ಸಭೆಗೆ ನೀಡಿದ್ದೇನೆ. ಬಿಸಿಯೂಟ ಸಾಮಾಗ್ರಿಗಳನ್ನು ಪರೀಕ್ಷಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಈಚೆಗೆ ಸ್ಥಾಯಿ ಸಮಿತಿ ಅಧ್ಯಕ್ಷರ ಜತೆ ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ, ಹಾಲಿನ ಪ್ಯಾಕೇಟ್‌ಗಳು ಒಡೆದು ಹೋಗಿರುವುದು ಹಾಗೂ ಕೆಟ್ಟು ಹೋಗಿರುವುದು ಗಮನಕ್ಕೆ ಬಂತು. ಇದಕ್ಕೆ ಜವಾಬ್ದಾರಿ ಯಾರು? ಎಂದು ಜ್ಯೋತಿ ಪ್ರಶ್ನಿಸಿದರು.

ಒಡೆದುಹೋದ ಹಾಲಿನ ಪ್ಯಾಕೇಟ್‌ಗಳನ್ನು ಶಾಲಾ ಮುಖ್ಯಸ್ಥರು ಸ್ವೀಕರಿಸಲೇಬಾರದು. ಸ್ವೀಕರಿಸಿದರೆ, ಶಾಲಾ ಮುಖ್ಯಸ್ಥರು ಹಾಗೂ ಅಕ್ಷರ ದಾಸೋಹ ಯೋಜನೆಯ ಎಡಿ ಅವರನ್ನು ಹೊಣೆಮಾಡಲಾಗುವುದು ಎಂದರು.

ಎಲ್ಲೆಲ್ಲಿ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವುದು ಡಿಡಿಪಿಐ ಕರ್ತವ್ಯ. ಆಹಾರ ಪದಾರ್ಥಗಳು ಹಾಳಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಕೆಲವು ಶಾಲೆಗಳು ಅಗತ್ಯಕ್ಕಿಂತ ಹೆಚ್ಚು ಸಾಮಾಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿರುವ ಕಾರಣ, ಸಕಾಲದಲ್ಲಿ ಬಳಕೆಯಾಗದೆ ಹಾಳಾಗುತ್ತಿವೆ. ಅಗತ್ಯಕ್ಕೆ ತಕ್ಕಷ್ಟು ಸಾಮಾಗ್ರಿಗಳನ್ನು ಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಅಧ್ಯಕ್ಷರು ಡಿಡಿಪಿಐಗೆ ಸೂಚಿಸಿದರು.

ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್ ಮಟ್ಟದಿಂದ ವಲಯ ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ವಲಯಮಟ್ಟದಲ್ಲಿ ಭಾಗವಹಿಸುತ್ತಿಲ್ಲ. ಪರಿಣಾಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಚಿವುಟಲಾಗುತ್ತಿದೆ. ಶಾಲಾ ಮುಖ್ಯೋಪಾಧ್ಯಾಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಯಾವ ಶಾಲೆಯಲ್ಲಿ ವಿದ್ಯಾರ್ಥಿಗಳು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಅಂತಹ ಶಾಲೆಗಳ ವಿವರವನ್ನು ಬಿಇಒಗಳಿಂದ ಪಡೆದು ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದರು.‌

ವಿದ್ಯಾಸಿರಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿದಿದ್ದು, ಹಲವು ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂದು ಸದಸ್ಯೆ ಶಿಲ್ಪಾ ಸುವರ್ಣ ಸಭೆಯ ಗಮನ ಸೆಳೆದರು.

ಜಿಲ್ಲೆಯಲ್ಲಿ ಬಾಕಿ ಇರುವ ಪಡಿತರ ಚೀಟಿ ವಿತರಣೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯ ಜನಾರ್ದನ ತೋನ್ಸೆ ಪ್ರಶ್ನಿಸಿದರು.ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ ಎಸ್.ಆರ್.ಭಟ್ ಮಾತನಾಡಿ, ಜಿಲ್ಲೆಯಲ್ಲಿ 7513 ಪಡಿತರ ಚೀಟಿಗಳ ವಿತರಣೆ ಬಾಕಿ ಇದ್ದು, ಅರ್ಜಿದಾರರ ಸ್ಥಳ ಪರಿಶೀಲಿಸಿ 2 ತಿಂಗಳೊಳಗೆ ಕಾರ್ಡ್ ವಿತರಿಸಲಾಗುವುದು ಎಂದರು.

ಪಾದೂರು ಐ.ಎಸ್.ಪಿ.ಆರ್.ಎಲ್ ಯೋಜನೆಯ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದ ಹಾನಿಯಾದ 150 ಮನೆಗಳಿಗೆ ಪರಿಹಾರ ನೀಡುವ ಕುರಿತು ಆದೇಶ ಪಾಲನೆಯಾಗಿಲ್ಲ ಎಂದು ಸದಸ್ಯೆ ಶಿಲ್ಪಾ ಸುವರ್ಣ ಪ್ರಶ್ನಿಸಿದರು.

ಈ ಕುರಿತಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಗಂಗೊಳ್ಳಿ ಬಂದರುಕಟ್ಟೆ ನಿರ್ಮಾಣಕ್ಕಾಗಿ ದುಂಡಿಕಲ್ಲನ್ನು ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದು, ರಸ್ತೆಗಳು ಹಾಳಾಗುತ್ತಿವೆ. ರಾಜಧನ ಕಟ್ಟದೆ ಕಲ್ಲು ಸಾಗಿಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಸದಸ್ಯ ಬಾಬು ಶೆಟ್ಟಿ ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ದನಿ ಎತ್ತಿದರು.

2016ರಿಂದ ಇದುವೆರೆಗೂ ಎಷ್ಟು ಲೋಡ್‌ ಸಾಗಾಟ ಆಗಿದೆ ಎಂಬ ಮಾಹಿತಿಯನ್ನು 20 ದಿನಗಳಲ್ಲಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಸೂಚನೆ ನೀಡಿದರು.

ಶಿರೂರು ಗ್ರಾಮದ ಅಳವೆಗದ್ದೆಯಲ್ಲಿ ನಿರ್ಮಾಣವಾಗಿರುವ ಮೀನುಗಾರಿಕಾ ಜೆಟ್ಟಿ ಕಾಮಗಾರಿಯಲ್ಲಿ ಲೋಪವಾಗಿರುವ ಕುರಿತು ಸದಸ್ಯ ಬಟವಾಡೆ ಸುರೇಶ್ ಆರೋಪಿಸಿದರು. ಕಾಮಗಾರಿ ಸಂಬಂಧ ಲೋಕೋಪಯೋಗಿ ಇಲಾಖೆ ಮತ್ತು ಕೃಷಿ ಸ್ಥಾಯಿ ಸಮಿತಿಯಿಂದ ತನಿಖೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ , ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಬೂದಿ ಮಳೆ: ತೆಗೆದುಕೊಂಡ ಕ್ರಮಗಳೇನು?

ಉಡುಪಿಯಲ್ಲಿ ಈಚೆಗೆ ಸುರಿದ ಬೂದಿ ಮಿಶ್ರಿತ ಮಳೆ ಕುರಿತು ಎನ್.ಐ.ಟಿ.ಕೆ ಸಂಸ್ಥೆ ನೀಡಿರುವ ವರದಿ ಅನ್ವಯ ಪರಿಸರ ಇಲಾಖೆ ಕೈಗೊಂಡಿರುವ ಕ್ರಮಗಳು ಏನು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪರಿಸರ ಇಲಾಖೆ ಅಧಿಕಾರಿ ಲಕ್ಷ್ಮಿಕಾಂತ್, ಉಡುಪಿಯಲ್ಲಿ ಪ್ರಥಮ ಬಾರಿಗೆ ಬೂದಿಮಿಶ್ರಿತ ಮಳೆ ಆಗಿದ್ದು, ಈ ಕುರಿತು ಎನ್.ಐ.ಟಿ.ಕೆ ತಜ್ಞರು ನೀಡಿರುವ ವರದಿಯಲ್ಲಿ ಬೂದಿ ಅಂಶ ಮಿಶ್ರಿತ ಎಂದು ನಮೂದಿಸಲಾಗಿದೆ. ಆದರೆ, ಇದು ಹಾರು ಬೂದಿ ಎಂದು ವರದಿಯಲ್ಲಿ ನಮೂದಿಸಿಲ್ಲ. ವರದಿಯನ್ನು ಬೆಂಗಳೂರಿನಲ್ಲಿರುವ ಕೇಂದ್ರ ಪರಿಸರ ಮಂಡಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT